'ಚೌಕ' ಚಿತ್ರವನ್ನು ಕಾಶೀನಾಥ್ ಒಪ್ಪಿದರ ಹಿಂದಿದೆ ಈ ಕುತೂಹಲಕಾರಿ ವಿಷ್ಯ
Recommended Video

ಒಬ್ಬ ಕಲಾವಿದನಿಗೆ ಒಂದೇ ಒಂದು ಆಸೆ ಇರುತ್ತದೆ. ಅದು ಒಂದೊಳ್ಳೆ ಪಾತ್ರ ಸಿಗಬೇಕು ಎಂಬುದು. ಆ ರೀತಿ ಮನಸ್ಸಿಗೆ ಖುಷಿ ಕೊಡುವ ಪಾತ್ರ ಸಿಕ್ಕರೆ ಕಲಾವಿದನಿಗೆ ಅದಕ್ಕಿಂತ ದೊಡ್ಡದು ಯಾವುದು ಇಲ್ಲ.
ನಟ ಕಾಶೀನಾಥ್ ಎಷ್ಟೊಂದು ಸಿನಿಮಾ ಮಾಡಿದ್ದಾರೆ. ಆ ಸಿನಿಮಾಗಳ ಪೈಕಿ ಒಂದು ಪಾತ್ರ ಅವರನ್ನು ಜನರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡಿತು. ಅದೇ 'ಚೌಕ' ಸಿನಿಮಾದ ಅಪ್ಪನ ಪಾತ್ರ. ಈ ಸಿನಿಮಾವನ್ನು, ಅವರ ಪಾತ್ರವನ್ನು ಜನ ನೋಡಿ ಇಷ್ಟ ಪಟ್ಟಿದ್ದರು. ಅದರ ಜೊತೆಗೆ ಇತ್ತೀಚಿಗಷ್ಟೆ ಈ ಪಾತ್ರಕ್ಕಾಗಿ ಕಾಶೀನಾಥ್ ಅವರಿಗೆ ಅತ್ಯುತ್ತಮ ಪೋಷಕ ನಟ ಸೈಮಾ ಪ್ರಶಸ್ತಿ ಲಭಿಸಿದೆ.
ಅಂದಹಾಗೆ, 'ಚೌಕ' ಸಿನಿಮಾವನ್ನು ಕಾಶೀನಾಥ್ ಅವರು ಒಪ್ಪಿಕೊಂಡಿದ್ದರ ಹಿಂದೆ ಒಂದು ಕುತೂಹಲಕಾರಿ ವಿಷಯ ಇದೆ. ಅದನ್ನು ಅವರ ಪುತ್ರ ಅಭಿಮನ್ಯು ಹಾಗೂ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಈ ರೀತಿಯ ಪಾತ್ರ ಮಾಡುವ ಆಸೆ ಅಪ್ಪನಿಗೆ ಇತ್ತು
''ಅಪ್ಪನಿಗೆ ಸೈಮಾ ಪ್ರಶಸ್ತಿ ಬಂದಿದ್ದು ಖುಷಿ ಆಗುತ್ತದೆ. ನನಗೆ ತುಂಬ ದಿನದಿಂದ ಆಸೆ ಇತ್ತು. ನಾನು ಅವರನ್ನು ದಿನ ಮನೆಯಲ್ಲಿ ನೋಡುತ್ತಿದ್ದಾಗ ಅವರು ಬೇರೆ ಬೇರೆ ಪಾತ್ರಗಳನ್ನು ಮಾಡಬಹುದು ಅಂತ ಅನಿಸುತ್ತಿತ್ತು. ಆದರೆ, ಅವರಿಗೆ ಒಂದೇ ರೀತಿಯ ಪಾತ್ರಗಳು ಹೆಚ್ಚು ಬರುತ್ತಿತ್ತು. ಆದರೆ, ತರುಣ್ ಸುಧೀರ್ ಒಂದು ಒಳ್ಳೆಯ ಪಾತ್ರ ಮಾಡಿಸಿದ. ನಮ್ಮ ತಂದೆಗೂ ಈ ರೀತಿಯ ಪಾತ್ರ ಮಾಡುವ ಆಸೆ ಇತ್ತು.'' - ಅಭಿಮನ್ಯು, ನಟ, ಕಾಶೀನಾಥ್ ಪುತ್ರ

ನನಗೆ ಹೆಚ್ಚು ಆತ್ಮವಿಶ್ವಾಸ ಇತ್ತು
''ಜನ ಮತ್ತು ಚಿತ್ರರಂಗ ಕಾಶೀನಾಥ್ ಅವರನ್ನು ಒಂದು ರೀತಿಯಲ್ಲಿ ನೋಡಿದೆ. ಆದರೆ, ನಾನು ಅಪ್ಪನನ್ನು ಎಲ್ಲ ರೀತಿ ನೋಡಿದ್ದೇನೆ. ಅವರು ಎಲ್ಲ ರೀತಿಯಲ್ಲಿ ನಟನೆಯ ಮಾಡುತ್ತಾರೆ ಎಂದು ನನ್ನಲ್ಲಿ ಆತ್ಮವಿಶ್ವಾಸ ಇತ್ತು. ಆದರೆ, ಯಾರು ಆ ರೀತಿಯ ಪಾತ್ರಗಳನ್ನು ತರುತ್ತಿರಲಿಲ್ಲ. ಅದೇ ಸಮಯಕ್ಕೆ ಸಿಸಿಎಲ್ ನಲ್ಲಿ ತರುಣ್ ಸುಧೀರ್ ಪರಿಚಯ ಆದ.'' - ಅಭಿಮನ್ಯು, ನಟ, ಕಾಶೀನಾಥ್ ಪುತ್ರ

ಅಪ್ಪ ಒಪ್ಪುತ್ತಾರ ಎಂಬ ಅನುಮಾನ ಇತ್ತು
''ಸಿಸಿಎಲ್ ಸೆಕೆಂಡ್ ಸೀಸನ್ ನಲ್ಲಿ ತರುಣ್ ನನ್ನ ಬಳಿ 'ಚೌಕ' ಸಿನಿಮಾದ ಪಾತ್ರದ ಬಗ್ಗೆ ಕೇಳಿದ. ಆ ಕಥೆ ಕೇಳಿದ ತಕ್ಷಣ ನನಗೆ ತುಂಬ ಉತ್ಸಾಹ ಬಂತು. ಇನ್ನೊಂದು ಕಡೆ ಅಪ್ಪ ಒಪ್ಪುತ್ತಾರ ಎಂಬ ಅನುಮಾನ ಕೂಡ ಇತ್ತು. ಆಮೇಲೆ ಮೂರು ವರ್ಷಗಳಲ್ಲಿ ಆಗಾಗ ಅಪ್ಪನಿಗೆ ಈ ಪಾತ್ರದ ಬಗ್ಗೆ ಹೇಳುತ್ತಾ ಬಂದೆ. ತರುಣ್ ಅಪ್ಪನಿಗೆ ಕಥೆ ಹೇಳಿದಾಗ ಅವರಿಗೂ ಇಷ್ಟ ಆಯ್ತು.'' - ಅಭಿಮನ್ಯು, ನಟ, ಕಾಶೀನಾಥ್ ಪುತ್ರ

ಒಂದೊಂದೆ ಅಂಶವನ್ನು ತರುಣ್ ವಿವರಿಸುತ್ತಿದ್ದ
''ತರುಣ್ ನನ್ನ ಬಳಿ ಆ ಪಾತ್ರದ ಕುರಿತು ಎಲ್ಲ ಹೇಳುತ್ತಿದ್ದ. ನನಗೆ ಕಾಶೀ ಸರ್ ಕೂದಲು ಇದೇ ರೀತಿ ಇರಬೇಕು, ಡಿ ಗ್ಲಾಮರ್ ತರ ಲುಕ್ ಕಾಣಬೇಕು ಅಂತ ಒಂದೊಂದೆ ಅಂಶವನ್ನು ವಿವರಿಸಿದ. ನಾನು ಅದನ್ನು ಅಪ್ಪನಿಗೆ ತಿಳಿಸುತ್ತಿದ್ದೆ. ಮೊದಲು ಈ ಪಾತ್ರವನ್ನು ಅವರು ಅರಗಿಸಿಕೊಳ್ಳಲು ಯೋಚನೆ ಮಾಡಿದ್ದರು. ಬಳಿಕ ತುಂಬ ಖುಷಿಯಿಂದ ಆ ಪಾತ್ರ ಮಾಡಿದರು. ಈ ರೀತಿ 'ಚೌಕ' ಚಿತ್ರದ ಪಾತ್ರವನ್ನು ಅಪ್ಪ ಮಾಡಿದರು.'' - ಅಭಿಮನ್ಯು, ನಟ, ಕಾಶೀನಾಥ್ ಪುತ್ರ

ಒಂದು ಪಾತ್ರಕ್ಕೆ ಕಾಶೀನಾಥ್ ಸರ್ ನೆನಪಾದರು - ತರುಣ್ ಸುಧೀರ್
''ಬಹುಷಃ ನಾನ್ನೊಬ್ಬ ನಟನ ಮಗ ಆಗಿದ್ದರಿಂದ ನನಗೆ ಒಂದು ವಿಷಯ ಗೊತ್ತಿತ್ತು. ಒಬ್ಬ ನಟ ಅವರಾಗಿಯೇ ಒಂದು ಇಮೇಜ್ ಗೆ ಬಂದಿರೋದಿಲ್ಲ. ನನಗೆ ಒಂದು ನಂಬಿಕೆ ಏನು ಅಂದ್ರೆ, ಒಬ್ಬ ಹಾಸ್ಯ ಮಾಡುವವನು ಎಮೋಷನ್ ಅನ್ನು ಕೂಡ ಅಷ್ಟೇ ಚೆನ್ನಾಗಿ ಮಾಡುತ್ತಾನೆ ಅಂತ. ಒಮ್ಮೆ ಚಿತ್ರದ ಒಂದು ಪಾತ್ರಕ್ಕೆ ಕಾಶೀನಾಥ್ ಸರ್ ನೆನಪಾದರು.'' - ತರುಣ್ ಸುಧೀರ್, ನಿರ್ದೇಶಕ

ಇದು ರಿಸ್ಕ್ ಅನಿಸುತ್ತಿಲ್ವಾ ಎಂದಿದ್ದರು ಕಾಶೀನಾಥ್
''ಕಾಶೀ ಸರ್ ಮಗ ಅಭಿ ನನಗೆ ತುಂಬ ಫ್ರೆಂಡ್. ಅವನಿಗೆ ನಾನು ಒಂದು ಕಥೆ ಮಾಡಿಕೊಂಡಿದ್ದೇನೆ, ನಿಮ್ಮ ಅಪ್ಪನಿಗೆ ಹೇಳಬೇಕು ಎನ್ನುತ್ತಿದ್ದೆ. ಫಸ್ಟ್ ಟೈಂ ಕಾಶೀ ಸರ್ ಗೆ ಕಥೆ ಹೇಳಿದಾಗ ಅವ್ರು ಈ ಪಾತ್ರಕ್ಕೆ ನನ್ನನ್ನು ಹಾಕಿಕೊಳ್ಳುತ್ತಿದ್ದೀಯಾ ಇದು ರಿಸ್ಕ್ ಅನಿಸುತ್ತಿಲ್ವಾ, ಸ್ವಲ್ಪ ಮಿಸ್ ಆದರೆ ನಾನೇ ಸಿನಿಮಾಗೆ ಮೈನಸ್ ಆಗುತ್ತೇನೆ ಎಂದರು. ಇಲ್ಲ ಸರ್ ನೀವೇ ಬೇಕು ಎಂದಾಗ ನನಗಿಂತ ಹೆಚ್ಚು ಉತ್ಸಾಹ ತೋರಿಸಿದರು.'' - ತರುಣ್ ಸುಧೀರ್, ನಿರ್ದೇಶಕ


Click it and Unblock the Notifications











