ಅಭಿ- ಅವಿವಾ ಮದುವೆ ಮುಹೂರ್ತ ಫಿಕ್ಸ್: ಅರಮನೆ ಮೈದಾನದಲ್ಲಿ ಕಲ್ಯಾಣ, ಮಂಡ್ಯದಲ್ಲಿ ಬೀಗರೂಟ
ಮತ್ತೊಂದು ಅದ್ಧೂರಿ ಶುಭ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ಸಜ್ಜಾಗುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್- ಸುಮಲತಾ ದಂಪತಿ ಪುತ್ರ ಅಭಿಷೇಕ್ ಅಂಬರೀಶ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಧಾನಿ ಮೋದಿ ಸೇರಿದಂತೆ ಚಿತ್ರರಂಗದ ಗಣ್ಯಾತಿಗಣ್ಯರು ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಸಾಕ್ಷಿಯಾಗಲಿದ್ದಾರೆ. ಇತ್ತೀಚೆಗೆ ಸಂಸದೆ ಸುಮಲತಾ- ಅಭಿಷೇಕ್ ಜೊತೆ ಪ್ರಧಾನಿ ಮೋದಿ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ನಿಶ್ಚಿತಾರ್ಥ ಬಹಳ ಅದ್ಧೂರಿಯಾಗಿ ನೆರವೇರಿತ್ತು. ಅವಿವಾ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮಗಳು. ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ಅಭಿ- ಅವಿವಾ ಪರಸ್ಪರ ಪ್ರೀತಿಲಿ ಬಿದ್ದಿದ್ದರು. ಪೋಷಕರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆ ದಿನಾಂಕ ನಿಗದಿಯಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂನ್ 5ರಂದು ಮಾಂಗಲ್ಯಧಾರಣೆ ಹಾಗೂ ಜೂನ್ 7ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿತ್ತು. ಸಂಸದೆ ಸುಮಲತಾ ಅಂಬರೀಶ್ ಕೂಡ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇದೀಗ ಚುನಾವಣೆ ಮುಗಿದಿದ್ದು ಅಭಿ ಮದುವೆ ತಯಾರಿ ನಡೀತಿದೆ. ಜೂನ್ 7ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಸದ್ಯ ಆಮಂತ್ರಣ ಪತ್ರಿಕೆ ಫೋಟೊಗಳು ವೈರಲ್ ಆಗ್ರಿದೆ. ಒಟ್ಟಾರೆ ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಸ್ಯಾಂಡಲ್‌ವುಡ್ ಜೊತೆ ಪರಭಾಷಾ ಕಲಾವಿದರು, ರಾಜಕೀಯ ಮುಖಂಡರು ಮದುವೆಗೆ ಹಾಜರಾಗಲಿದ್ದಾರೆ.
ಇಡೀ ಭಾರತೀಯ ಚಿತ್ರರಂಗ ಭಾಗಿ
ನಟ ರೆಬಲ್ ಸ್ಟಾರ್ ಅಂಬರೀಶ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಕಲಾವಿದರ ಜೊತೆಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಬಾಲಿವುಡ್ ನಟ ಶತ್ರುಜ್ಞಾ ಸಿನ್ಹಾ, ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು ಸೇರಿದಂತೆ ಹಲವು ನಟರ ಜೊತೆ ಸ್ನೇಹ ಇತ್ತು. ಇನ್ನು ಸುಮಲತಾ ಕೂಡ ಆಂಧ್ರ ಮೂಲದವರು. ಪರಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಕಲಾವಿದರ ಜೊತೆ ಉತ್ತಮ ಒಡನಾಟ ಇದೆ. ಅವರೆಲ್ಲರೂ ಅಭಿ- ಅವಿವಾ ಮದುವೆಗೆ ಸಾಕ್ಷಿ ಆಗಲಿದ್ದಾರೆ.
ಮಂಡ್ಯದಲ್ಲಿ ಆರತಕ್ಷತೆ, ಬೀಗರೂಟ
ಅಂಬರೀಶ್ ಮಂಡ್ಯದವರು. ಆ ಜಿಲ್ಲೆಯ ಜೊತೆ ಅಂಬಿ ಕುಟುಂಬಕ್ಕೆ ಬಹಳ ನಂಟಿದೆ. ಸದ್ಯ ಸುಮಲತಾ ಸಕ್ಕರೆ ನಾಡಿನ ಸಂಸದೆ ಕೂಡ ಆಗಿದ್ದಾರೆ. ಬೆಂಗಳೂರಿನಲ್ಲಿ ಮದುವೆ ನಂತರ ಮಂಡ್ಯದಲ್ಲಿ ಆರತಕ್ಷತೆ ಹಾಗೂ ಬೀಗರ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆಯಂತೆ. ಸುಮಾರು 10 ಸಾವಿರ ಜನ ಇದರಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ ಎನ್ನಲಾಗ್ತಿದೆ.

ಪ್ರಧಾನಿ ಮೋದಿ ಭಾಗಿ?
ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸುಮಲತಾ ಗೆದ್ದು ಸಂಸದೆ ಆಗಿದ್ದರು. ಇತ್ತೀಚೆಗೆ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇನ್ನು ಏಪ್ರಿಲ್ 5ರಂದು ದೆಹಲಿಗೆ ತೆರಳಿ ಸುಮಲತಾ- ಅಭಿಷೇಕ್ ಪಿಎಂ ಭೇಟಿ ಮಾಡಿದ್ದರು. ಮದುವೆಯ ಆಮಂತ್ರಣ ನೀಡಿ ಆಹ್ವಾನಿಸಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು. ಹಾಗಾಗಿ ಪ್ರಧಾನಿ ಮೋದಿ ಕೂಡ ಅಭಿ- ಅವಿವಾ ಮದುವೆ ಆಗಮಿಸಿ ಜೋಡಿಗೆ ಶುಭ ಕೋರುವ ಸಾಧ್ಯತೆಯಿದೆ.
2 ಸಿನಿಮಾಗಳಲ್ಲಿ ಅಭಿ ನಟನೆ
ತಂದೆಯ ಹಾದಿಯಲ್ಲೇ ಅಭಿಷೇಕ್ ಅಂಬರೀಶ್ ಚಿತ್ರರಂಗಕ್ಕೆ ಬಂದಿದ್ದಾರೆ. ಅಭಿ ನಟನೆಯ 'ಅಮರ್' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ಮತ್ತೆರಡು ಸಿನಿಮಾಗಳಲ್ಲಿ ಜ್ಯೂ. ರೆಬಲ್ ಸ್ಟಾರ್ ನಟಿಸ್ತಿದ್ದಾರೆ. ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್‌ಗೆ ಸಿದ್ಧವಾಗ್ತಿದೆ. ಇನ್ನು ಅಯೋಗ್ಯ ಮಹೇಶ್ ಕುಮಾರ್ ಹಾಗೂ ಹೆಬ್ಬುಲಿ ಕೃಷ್ಣ ನಿರ್ದೇಶನದ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











