ಸುಮಲತಾಗೆ ಬಂತು ಆನೆಬಲ: ಮಂಡ್ಯ ಅಖಾಡಕ್ಕಿಳಿದ ಅಭಿಷೇಕ್ ಅಂಬರೀಶ್
Recommended Video

ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಂಡ್ಯ ಲೋಕಸಭೆ ಚುನಾವಣೆ ಸ್ಯಾಂಡಲ್ ವುಡ್ ಪಾಲಿಗೂ ನಿಜಕ್ಕೂ ಪ್ರತಿಷ್ಠೆಯ ಕ್ಷೇತ್ರವಾಗಿದೆ. ನಿಖಿಲ್ ಮತ್ತು ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವುದರಿಂದ ಪ್ರಚಾರದಲ್ಲಿ ಸ್ಟಾರ್ ನಟರು ಭಾಗಿಯಾಗೋದು ಸಹಜ.
ಈಗಾಗಲೇ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಪರವಾಗಿ ಪ್ರಚಾರ ಮಾಡೋದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ ಕಿಚ್ಚ ಸುದೀಪ್ ಮಂಡ್ಯಗೆ ಬರೋದು ಸದ್ಯಕ್ಕೆ ಅನುಮಾನವಾಗಿದೆ.
ಡಿ ಬಾಸ್ ಮತ್ತು ವೈ ಬಾಸ್ ಮಂಡ್ಯಕ್ಕೆ ಎಂಟ್ರಿ ಕೊಡೋ ಮೊದಲೇ ಈಗ ಜೂನಿಯರ್ ರೆಬೆಲ್ ಸ್ಟಾರ್ ಅಖಾಡಕ್ಕೆ ಇಳಿದಿದ್ದಾರೆ. ಈ ಮೂಲಕ ಅಮ್ಮನ್ನನ್ನು ಗೆಲ್ಲಿಸಲು ಸ್ವತಃ ಮಗನೇ ಸಾರಥಿಯಾಗಿ ಯುದ್ಧ ಆರಂಭಿಸಿದ್ದಾರೆ. ಮುಂದೆ ಓದಿ.....

ಮಳವಳ್ಳಿಯಿಂದ ಪ್ರಚಾರ
ಸುಮಲತಾ ಅಂಬರೀಶ್ ಅವರನ್ನ ಮಂಡ್ಯದಿಂದ ಗೆಲ್ಲಿಸಲು ಸ್ವತಃ ಅಂಬಿ ಪುತ್ರ ಅಭಿಷೇಕ್ ಸಾರಥಿಯಾಗಿ ನಿಂತಿದ್ದಾರೆ. ಇಂದಿನಿಂದ ಅಧಿಕೃತವಾಗಿ ಸುಮಲತಾ ಪರವಾಗಿ ಪ್ರಚಾರ ಆರಂಭಿಸುತ್ತಿದ್ದಾರೆ. ಅಂಬರೀಶ್ ಅವರ ನೆಚ್ಚಿನ ಊರು ಮಳವಳ್ಳಿಯಿಂದ ಪ್ರಚಾರಕ್ಕೆ ಅಂಬಿ ಪುತ್ರ ಚಾಲನೆ ನೀಡುತ್ತಿದ್ದಾರೆ.

ನನ್ನ ಜನರಿಗಾಗಿ ನನ್ನ ಹೆಜ್ಜೆ
''ಇಂದು ನಾನು ಮಳವಳ್ಳಿಗೆ ಬರುತ್ತಿದ್ದೇನೆ. ನನ್ನ ಅಮ್ಮನೊಂದಿಗೆ ಅದು ಚುನಾವಣಾ ಪ್ರಚಾರಕ್ಕಾಗಿ. ನನ್ನ ಅಪ್ಪ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಊರು ಮಳವಳ್ಳಿ. ನನ್ನ ತಾತ ಸಾಕಷ್ಟು ವರ್ಷಗಳ ಕಾಲ ಜೀವನ ನಡೆಸಿದ ಮಳವಳ್ಳಿಗೆ ನಾನು ಅಮ್ಮನೊಂದಿಗೆ ಬರುತ್ತಿದ್ದೇನೆ'' ಎಂದು ಅಭಿಷೇಕ್ ಪ್ರಕಟಣೆ ನೀಡಿದ್ದರು.

ಸಿನಿಮಾಗೆ ಬ್ರೇಕ್, ಎಲೆಕ್ಷನ್ ಗೆ ಎಂಟ್ರಿ
ಅಂಬರೀಶ್ ಪುತ್ರ ಅಭಿಷೇಕ್ ಸದ್ಯ ಅಮರ್ ಚಿತ್ರದಲ್ಲಿ ನಟಿಸುತ್ತಿದ್ದರು. ಈ ಚಿತ್ರ ಸಂಪೂರ್ಣ ಶೂಟಿಂಗ್ ಮುಗಿಸಿರುವ ಅಭಿ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನ ಕೂಡ ಬಹುತೇಕ ಮುಗಿಸಿದ್ದಾರೆ ಎನ್ನಲಾಗಿದೆ. ಒಂದು ಕಡೆ ಅಮರ್ ರಿಲೀಸ್ ಗೆ ರೆಡಿಯಾಗಿದ್ದರೂ ಆ ಕೆಲಸಕ್ಕೆ ತಾತ್ಕಲಿಕವಾಗಿ ಬ್ರೇಕ್ ಹಾಕಿ, ಅಮ್ಮನ ಜೊತೆ ಅಭಿ ನಿಂತಿದ್ದಾರೆ.

ಅಭಿಷೇಕ್ ವರ್ಸಸ್ ನಿಖಿಲ್
ಮೊದಲಿನಿಂದಲೂ ಎಚ್ ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಮತ್ತು ಅಂಬರೀಶ್ ಪುತ್ರ ಅಭಿಷೇಕ್ ಸ್ನೇಹಿತರು. ಈಗ ಇಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಈಗಷ್ಟೇ ಸೀತಾರಾಮ ಕಲ್ಯಾಣ ಸಿನಿಮಾ ಮುಗಿಸಿರುವ ನಿಖಿಲ್ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಮತ್ತೊಂದೆಡೆ ಚೊಚ್ಚಲ ಚಿತ್ರದ ಬಿಡುಗಡೆಗೆ ಕಾಯ್ತಿರುವ ಅಭಿಷೇಕ್ ಈಗ ಅಮ್ಮನ ಪರವಾಗಿ ನಿಂತಿದ್ದಾರೆ. ಅಲ್ಲಿಗೆ ಸುಮಲತಾ ಮತ್ತು ನಿಖಿಲ್ ಅಂತ ಕಂಡರೂ ಅಭಿಷೇಕ್ ಎಂಟ್ರಿಯಿಂದ ನಿಖಿಲ್ ಮತ್ತು ಅಭಿಷೇಕ್ ಎಂದೇ ಪೈಪೋಟಿ ನಡೆಯಬಹುದು.

ಅಭಿಷೇಕ್ ಇದ್ದರೇ ಆನೆ ಬಲ ಇದ್ದಂತೆ
ಅಂಬಿ ಕುಟುಂಬಕ್ಕೆ ದರ್ಶನ್, ಯಶ್ ಬಹಳ ಆಪ್ತರು. ಇವರಿಬ್ಬರ ಎಂಟ್ರಿ ಸುಮಲತಾ ಅವರಿಗೆ ಬಲ ಹೆಚ್ಚಿಸಬಹುದು. ಆದ್ರೆ, ಮಗ ಅಭಿಷೇಕ್ ಜೊತೆ ನಿಲ್ಲುವುದರಿಂದ ಸ್ವತಃ ಅಂಬರೀಶ್ ಅವರೇ ನಿಂತಿದ್ದಾರೆ ಎಂಬ ಭಾವನೆ ಮಂಡ್ಯ ಜನರಲ್ಲಿ ಮೂಡಬಹುದು. ಹಾಗಾಗಿ, ಅಭಿಷೇಕ್ ಎಂಟ್ರಿಯಿಂದ ಸುಮಲತಾಗೆ ಆನೆಬಲ ಬಂದಂತಾಗಿದೆ.


Click it and Unblock the Notifications











