ಸೆನ್ಸಾರ್ ಅದ 'ಅಮರ್' ಸಿನಿಮಾ ಮೇ ತಿಂಗಳಿನಲ್ಲಿ ರಿಲೀಸ್
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ 'ಅಮರ್' ರಿಲೀಸ್ ಗೆ ಸಜ್ಜಾಗಿದೆ. ಟ್ರೈಲರ್ ಮತ್ತು ಒಂದು ಹಾಡಿನ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿರುವ 'ಅಮರ್' ಚಿತ್ರಕ್ಕೆ ಯು/ಎ ಪ್ರಮಾಣ ಸಿಕ್ಕಿದೆ. ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು/ಎ ಸರ್ಕಿಫಿಕೇಟ್ ನೀಡಿದೆ.
'ಅಮರ್' ರೋಮ್ಯಾಂಟಿಕ್ ಸಿನಿಮಾ. ಇಲ್ಲಿ ಅಭಿಷೇಕ್ ಗೆ ಜೋಡಿಯಾಗಿ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಮೊದಲ ಹಾಡು ಗಾನಪ್ರಿಯರ ಹೃದಯ ಕದ್ದಿದ್ದೆ. ಮೊದಲ ಹಾಡು ಹಿಟ್ ಆಗುತ್ತಿದ್ದಂತೆ ಎರಡನೇ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಏಪ್ರಿಲ್ 20ಕ್ಕೆ 'ಅಮರ್' ಚಿತ್ರದಿಂದ ಬಹು ನಿರೀಕ್ಷೆಯ ಎರಡನೇ ಹಾಡು ರಿಲೀಸ್ ಮಾಡುವ ಸಾದ್ಯತೆ ಇದೆ.
ಅಂದ್ಹಾಗೆ ಯು/ಎ ಪ್ರಮಾಣ ಪತ್ರ ಪಡೆದ 'ಅಮರ್' ಮೇ ತಿಂಗಳಲ್ಲಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದೆ. ಈ ಮೊದಲೇ ಹೇಳಿದ ಹಾಗೆ ಅಂಬರೀಶ್ ಹುಟ್ಟುಹಬ್ಬದ ದಿನ ಮಗನ ಮೊದಲ ಸಿನಿಮಾ ರಿಲೀಸ್ ಆಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಇನ್ನು ಬಹಿರಂಗ ಪಡಿಸಿಲ್ಲ. ಆದ್ರೆ ಮುಂದಿನ ತಿಂಗಳು 'ಅಮರ್' ಚಿತ್ರಮಂದಿರಕ್ಕೆ ಎಂಟ್ರಿ ಕೊಡುವುದು ಪಕ್ಕಾ ಅಂತಿದೆ 'ಅಮರ್' ತಂಡ.

'ಅಮರ್' ನಾಗಶೇಖರ್ ನಿರ್ದೇಶನದ ಚಿತ್ರ. ಸಂದೇಶ್ ನಾಗರಾಜ್ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇರುವ 'ಅಮರ್' ಭಾರಿ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











