ದರ್ಶನ್ ಹೇಳಿದ ಆ ಮಾತು ನನಗೆ ದೊಡ್ಡ ಸಹಾಯ ಮಾಡಿತು: ಅಭಿಷೇಕ್
Recommended Video
ಅಂಬರೀಶ್ ಕುಟುಂಬದ ಸದಸ್ಯರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು ಎಂದು ಸ್ವತಃ ಅಂಬಿ, ಸುಮಲತಾ, ಅಭಿಷೇಕ್ ಹಲವು ಬಾರಿ ಹೇಳಿಕೊಂಡಿದ್ದಾರೆ. ದರ್ಶನ್ ಕೂಡ ಅಂಬಿಯನ್ನ ಅಪ್ಪಾಜಿ ಮತ್ತು ಸುಮಲತಾ ಅವರನ್ನ ಅಮ್ಮಾ ಎಂದೇ ಕರೆಯುತ್ತಿದ್ದರು.
ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ನಟ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಶಕ್ತಿ ಹೆಚ್ಚಿಸಿದೆ.
ದರ್ಶನ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ '' ದರ್ಶನ್ ಅವರು ನನಗೆ ಹಿರಿಯ ಅಣ್ಣ, ಅಪ್ಪಾಜಿ ಮೊದಲ ಸಲ ಸೆಟ್ ಗೆ ಬಂದಾಗ ಭಯ ಆಗಿತ್ತು. ಆಮೇಲೆ ದರ್ಶನ್ ಬಂದ್ಮೇಲೆ ಮತ್ತೆ ಆ ಭಯ ಕಾಣಿಸ್ತು. ಇದನ್ನ ಸ್ವತಃ ಅವರ ಬಳಿಯೂ ಹೇಳಿದೆ ''ನೀವಿದ್ರೆ ಸ್ವಲ್ಪ ಭಯ ಆಗುತ್ತೆ'' ಅಂತ. ಅದಕ್ಕೆ ಅವರೊಂದು ಕಥೆ ಹೇಳಿದ್ರು ಎಂದು ಆ ಕತೆ ಹೇಳಿಕೊಂಡರು.

ಅಂಬರೀಶ್ ಜೊತೆ ದರ್ಶನ್ ಮೊದಲ ಸಿನಿಮಾ ಅಣ್ಣಾವ್ರು ಮಾಡಿದಾಗ ಅಪ್ಪಾಜಿ ಜೊತೆ ಡಿ ಬಾಸ್ ಮೊದಲ ದೃಶ್ಯವಿತ್ತಂತೆ. ಆಗ ದರ್ಶನ್ ನರ್ವಸ್ ಇದ್ರೂ ಚೆನ್ನಾಗಿ ಮಾಡಿದ್ರಂತೆ. ಅದಕ್ಕೆ ಅಪ್ಪಾಜಿ ಕೇಳಿದ್ರಂತೆ 'ಏನೋ ಎಲ್ಲರಿಗೂ ನನ್ನ ಕಂಡ್ರೆ ಒಂಥರಾ ಭಯ. ನೀನು ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಹೊಡೆದೆ'' ಎಂದರಂತೆ. ಅದಕ್ಕೆ ದರ್ಶನ್ ಹೇಳಿದ್ರಂತೆ 'ಅಪ್ಪಾಜಿ ಬೇಜಾರಾಗಬೇಡಿ, ಆಕ್ಷನ್ ಅಂತ ಡೈರೆಕ್ಟರ್ ಹೇಳಿದ್ಮೇಲೆ ನೀವು ಆಕ್ಟರೇ, ನಾನು ಆಕ್ಟರ್ ಅಷ್ಟೆ. ದೊಡ್ಡವರಿಲ್ಲ ಸಣ್ಣವರಿಲ್ಲ. ಅದನ್ನೇ ನನಗೂ ಹೇಳಿದ್ರು. ಅದು ನನಗೆ ದೊಡ್ಡ ಸಹಾಯವಾಯಿತು'' ಎಂದು ಅಭಿಷೇಕ್ ನೆನಸಿಕೊಂಡರು.
''ದರ್ಶನ್ ಅವರಿಗೆ ಅಮರ್ ಸಿನಿಮಾ ತೋರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಅವರು ರಾಬರ್ಟ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಅಮರ್ ಸಿನಿಮಾಗೆ ಅವರ ಡಬ್ಬಿಂಗ್ ಮುಗಿಸಿಕೊಟ್ಟು ಹೋದರು. ಬಹುಶಃ ಸಮಯ ನೋಡಿ ಅವರನ್ನ ಭೇಟಿ ಮಾಡಿ ವ್ಯವಸ್ಥೆ ಮಾಡ್ತೀವಿ'' ಎಂದು ಅಭಿಷೇಕ್ ತಿಳಿಸಿದರು.

ನಾಗಶೇಖರ್ ನಿರ್ದೇಶನ ಮಾಡಿರುವ ಅಮರ್ ಚಿತ್ರವನ್ನ ಸಂದೇಶ್ ನಿರ್ಮಿಸಿದ್ದಾರೆ. ಅಭಿಷೇಕ್, ತಾನ್ಯ ಹೋಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ದರ್ಶನ್, ರಚಿತಾ ರಾಮ್, ನಿರೂಪ್ ಭಂಡಾರಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಮೇ 31 ರಂದು ಅಮರ್ ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.


Click it and Unblock the Notifications











