»   » ಚೋಟಾ ಬಚ್ಚನ್‌ಗೆ 2 ತಾಸು ಕಾದು ನಿಂತವರಿಗೆ ಸಿಕ್ಕಿದ್ದು ಸಾದಾ ನಮಸ್ಕಾರ !

ಚೋಟಾ ಬಚ್ಚನ್‌ಗೆ 2 ತಾಸು ಕಾದು ನಿಂತವರಿಗೆ ಸಿಕ್ಕಿದ್ದು ಸಾದಾ ನಮಸ್ಕಾರ !

Posted By: Staff
Subscribe to Filmibeat Kannada

ಸದಾಶಿವನಗರ, ಕ್ರಾಸ್‌ ನಂ.5. ಜನವರಿ 18, ಸಂಜೆ 4 ಗಂಟೆ. ಚಿಕ್ಕ ರಸ್ತೆಯಲ್ಲೂ ಟ್ರಾಫಿಕ್‌ ಜಾಂ. ಜೀನ್ಸ್‌ ಧಾರಿಗಳ ಸಮೇತ ಸುತ್ತಮುತ್ತಲ ಮರಗಳ ಮೇಲೆಲ್ಲಾ ಜನ. ಆಜೂಬಾಜಿನ ಕಟ್ಟಡಗಳ ಮೇಲೂ ಸಂತೆ. ಎಲ್ಲರೂ ಯಾರನ್ನೋ ಇದಿರು ನೋಡುತ್ತಿದ್ದಾರೆ. ಎರಡು ತಾಸು ಹೀಗೇ ಕಳೆಯಿತು.
ಕಪ್ಪು ಕಾರೊಂದು ಬರ್ರನೆ ಬಂದು ನಿಂತಿದ್ದೇ ತಡ, ನಿದ್ದೆ ಹತ್ತ ತೊಡಗಿದ್ದ ಜನರೆಲ್ಲಾ ಥಟ್ಟನೆ ಎಚ್ಚೆತ್ತುಕೊಂಡರು. ಆ ಕಾರಿನಿಂದ ಇಳಿದದ್ದು ಬಿಗ್‌ ಬಿ ಅಮಿತಾಬ್‌ ಮಗ ಅಭಿಷೇಕ್‌ ಬಚ್ಚನ್‌!

ಚೋಟಾ ಬಚ್ಚನ್‌ ಬಂದದ್ದು ಅಫಿನಿಟಿ ಇಂಟರ್‌ನ್ಯಾಷನಲ್‌ ಸ್ಲಿಮಿಂಗ್‌ ಅಂಡ್‌ ಬ್ಯೂಟಿ ಸೆಂಟರ್‌ನ ಉದ್ಘಾಟನೆಗೆ. ಒಳಗೆ ಪ್ರವೇಶ ದೊರೆಯದೆ ಹತಾಶರಾಗಿದ್ದ ಬಿಗ್‌ ಬಿ ಅಭಿಮಾನಿಗಳು ಹೊರಗಾದರೂ ತಮ್ಮ ನೆಚ್ಚಿನ ನಟನ ಆಟೋಗ್ರಾಫ್‌ ಪಡೆಯಲು ನಡೆಸಿದ ಯತ್ನವನ್ನು ಪೊಲೀಸರು ಹತ್ತಿಕ್ಕಿದ್ದರು. ಎಲ್ಲೋ ಕೆಲವು ಚೆಂದದ ಹುಡುಗಿಯರು ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಒಳನುಗ್ಗಲು ಸಾಧ್ಯವಾಯಿತು ! ಬ್ರಿಟನ್ನಿನಲ್ಲಿ ಕಲಿತ ಬ್ಯೂಟಿಷನ್‌ ಮೇರಿ ಆ್ಯನ್‌ ಈ ಅಂತರರಾಷ್ಟ್ರೀಯ ಬ್ಯೂಟಿ ಸೆಂಟರ್‌ಗೆ ಮಾರ್ಗದರ್ಶಿ.

ಮನೆಯಾಳಗೆ ಇದ್ದದ್ದು ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೋಪ್ರಾ, ರಾಜ್‌ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಮೇರಿ ನೆಂಟರಿಷ್ಟರು. ಅವರ ಸಂಖ್ಯೆಯೇ ಸಾಕಷ್ಟಿತ್ತು. ಪುಟ್ಟ ಕೆಮೆರಾ ಹೊತ್ತ ಅದೆಷ್ಟೋ ಅಭಿಮಾನಿಗಳು ಒಂದೇ ಒಂದು ಸ್ನ್ಯಾಪ್‌ ತೆಗೆಯಲು ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದರೂ, ಪ್ರಯೋಜನವಾಗಲಿಲ್ಲ. ಅಭಿಷೇಕ್‌ ಮಾತು ಹೆಚ್ಚು ದೂರ ಕೇಳಿಸಲಿಲ್ಲ. ಅವರು ಕೈ ಮುಗಿದದ್ದು ಮಾತ್ರ ಗೊತ್ತಾಯಿತು.

ಹೊರಡುವ ಮುನ್ನ, 'ಬೆಂಗಳೂರಲ್ಲಿ ನನಗೆ ಇಷ್ಟು ಅಭಿಮಾನಿಗಳಿರುತ್ತಾರೆ ಅಂತ ನಾನು ನಿರೀಕ್ಷಿಸಿರಲಿಲ್ಲ. ಇನ್ನೊಂದು ಬಾರಿ ಇಲ್ಲಿಗೆ ಬರುತ್ತೇನೆ" ಅಂತ ಚೋಟಾ ಬಚ್ಚನ್‌ ಹೇಳಿದಾಗ ಅಭಿಮಾನಿಗಳೆಲ್ಲಾ ಚಪ್ಪಾಳೆ ಹೊಡೆಯುತ್ತಲೇ ಕುಣಿದರು. ಬಚ್ಚನ್‌ ಇದ್ದ ಅಷ್ಟೂ ಹೊತ್ತು ಸದಾಶಿವನಗರದ 5ನೇ ಕ್ರಾಸಿನಲ್ಲಿ 'ಅಮಿತಾಬ್‌ ಬಚ್ಚನ್‌ಗೆ ಜೈ, ಅಭಿಷೇಕ್‌ಗೆ ಜೈ" ಎಂಬ ಹುಡುಗರ ಘೋಷದ ಜೊತೆಗೆ 'ಐ ಲವ್‌ ಯೂ ಸ್ಮಾರ್ಟಿ ಅಭೀ" ಎಂಬ ಹುಡುಗಿಯರ ಪ್ರೇಮ ಪಾಶವೂ ಇತ್ತು. ಆದರೆ ಅಭಿ ಡೋಂಟ್‌ ಕೇರ್‌ ಮಾಸ್ಟರ್‌ ಆಗಿಬಿಟ್ಟರು.

ರಾಘವೇಂದ್ರ ರಾಜ್‌ಕುಮಾರ್‌ ನಗುತ್ತಾ ನಿಂತಿದ್ದರು. ಪ್ರಿಯಾಂಕ ಚೋಪ್ರಾ, 'ನನಗೆ ಬೆಂಗಳೂರು ಇಷ್ಟ. ಇಲ್ಲೇ ಬಂದು ಇದ್ದುಬಿಡೋಣ ಅಂದ್ಕೋತಿದೀತಿ" ಅಂದಾಗ ನೆರೆದಿದ್ದ ಜನ 'ಓ..." ಅಂತ ಒಮ್ಮೆಗೇ ಕೂಗಿ ಕರತಾಡನ ಮಾಡಿದರು.

ಅಂದಹಾಗೆ, ಈ ಹೊಸ ಬ್ಯೂಟಿ ಸೆಂಟರ್‌ನಲ್ಲಿ ಕೇಶ ಶೃಂಗಾರ- ಮುಖ ಶೃಂಗಾರದ ಜೊತೆಗೆ ಕೂದಲಿನ ಸಮಸ್ಯೆ ನಿವಾರಣೆ, ಬೊಜ್ಜು ಕರಗಿಸುವುದಕ್ಕೆ ಚಿಕಿತ್ಸೆಯೂ ದೊರೆಯಲಿದೆ. ಆದರೆ, ಇಲ್ಲಿಗೆ ಬರುವಾಗ ನಿಮ್ಮ ಥೈಲಿ ತುಂಬಿರಬೇಕು ಅಷ್ಟೆ !

English summary
Chota Bachchan and Priyanka Chopra in Bangalore!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada