ನಾಯಕನಾಗಿ ರಣ್‌ಬೀರ್ ಕಪೂರ್, ನಾಯಕಿಯಾಗಿ ಆಲಿಯಾ ಭಟ್, ವಿಲನ್ ಆಗಿ ಯಶ್! ಇದೇನಾ ಯಶ್ 19?
ಕೆಜಿಎಫ್ ಚಿತ್ರ ಸರಣಿ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಹೆಚ್ಚಾಗಿದೆ. ಕೆಜಿಎಫ್ ಚಿತ್ರದ ಮೂಲಕ ನಿರೀಕ್ಷೆಯನ್ನು ಹುಟ್ಟುಹಾಕಿರುವ ಯಶ್ ತಮ್ಮ ಮುಂದಿನ ಚಿತ್ರವನ್ನು ಅದಕ್ಕಿಂತ ಉತ್ತಮವಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಹೀಗೆ ನಿರೀಕ್ಷೆಯನ್ನು ಯಶ್ ಉಳಿಸಿಕೊಳ್ಳಲೇಬೇಕಾಗಿದ್ದು, ತುಂಬಾ ಜಾಗರೂಕತೆಯಿಂದ ತಮ್ಮ ಮುಂದಿನ ಚಿತ್ರದ ಆಯ್ಕೆಯನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನು ಕಳೆದ ಏಪ್ರಿಲ್ ತಿಂಗಳಿಗೆ ಯಶ್ ನಟನೆಯ ಕೊನೆಯ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ವರ್ಷ ಕಳೆದಿದೆ. ಹೀಗೆ ವರ್ಷ ತುಂಬಿದರೂ ಸಹ ಯಶ್ ಮುಂದಿನ ಚಿತ್ರ ಯಾವುದು ಎಂಬ ಮಾಹಿತಿ ಸಿಕ್ಕಿಲ್ಲ.

ಯಶ್ ಸಹ ಈ ಕುರಿತು ಮೌನ ವಹಿಸಿದ್ದಾರೆ. ಈಗಾಗಲೇ ಹಲವಾರು ದಿಗ್ಗಜ ನಿರ್ದೇಶಕರ ಹೆಸರು ಹಾಗೂ ಯುವ ಪ್ರತಿಭಾವಂತ ನಿರ್ದೇಶಕರ ಹೆಸರುಗಳು ಯಶ್ ಮುಂದಿನ ಚಿತ್ರದ ಕುರಿತಾಗಿ ಕೇಳಿಬಂದಿದ್ದು, ಇವೆಲ್ಲವೂ ಅಂತೆಕಂತೆಗಳಾಗಿಯೇ ಉಳಿದುಕೊಂಡಿವೆಯೇ ಹೊರತು ಯಾವ ಚಿತ್ರಗಳೂ ಸಹ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಇದೀಗ ಮತ್ತೊಂದು ಇಂತಹದ್ದೇ ಸುದ್ದಿ ಕೇಳಿಬಂದಿದೆ. ಬಾಲಿವುಡ್‌ನ ನಿರ್ದೇಶಕರೊಬ್ಬರ ಬಿಗ್ ಪ್ರಾಜೆಕ್ಟ್‌ನಲ್ಲಿ ಯಶ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ದಂಗಲ್ ಹಾಗೂ ಚಿಚ್ಚೋರೆ ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಲಿರುವ 'ರಾಮಾಯಣ್' ಚಿತ್ರದಲ್ಲಿ ಯಶ್ ಖಳ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಲಿದ್ದು, ಸೀತೆ ಪಾತ್ರದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಹಾಗೂ ರಾವಣಾಸುರನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಅಧಿಕೃತವಾಗಿ ಘೋಷಣೆಯಾಗಿಲ್ಲ. ಕೇವಲ ಚಿತ್ರದ ನಿರ್ಮಾಪಕರು ಯಶ್ ಜತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಸುದ್ದಿ ಇದೆ.
ಇನ್ನು ಏನೇ ಮಾಡಿದರೂ ಸ್ಯಾಂಡಲ್‌ವುಡ್ ಮುಖಾಂತರವೇ ಮಾಡಲಿದ್ದೇನೆ ಎಂಬ ಯಶ್ ಅವರ ಹೇಳಿಕೆಯನ್ನು ಇಲ್ಲಿ ಸ್ಮರಿಸಿಕೊಂಡರೆ ಯಶ್ ಈ ನಿರ್ದೇಶಕರಿಗೂ 'ನೋ' ಹೇಳಲಿದ್ದಾರೆ ಎನ್ನುವುದು ಖಚಿತ. ಹೌದು, ಯಶ್ ತಮ್ಮ ಹುಟ್ಟುಹಬ್ಬದ ದಿನದಂದು ವಿಶೇಷ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ತಮ್ಮ ಮುಂದಿನ ಚಿತ್ರದ ಬಗ್ಗೆ ತಿಳಿಸಿದ್ದರು.
ನಿಮ್ಮ ಜಗದಗಲದ ನಿರೀಕ್ಷೆಯನ್ನು ಮುಟ್ಟಲು ಸಮಯ ಕೊಡಿ, ನಿಮಗಾಗಿ ವಿಭಿನ್ನವಾಗಿರುವುದನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳು ಊಹಿಸಿದ್ದಕ್ಕಿಂತ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಿಂತ ದೊಡ್ಡದಾದ ಪ್ರಾಜೆಕ್ಟ್ ಅನ್ನು ಯಶ್ ಘೋಷಿಸಲಿದ್ದಾರೆ ಎನ್ನುವುದು ಪಕ್ಕಾ.
ಅಲ್ಲದೇ ಮೊದಲೇ ಹೇಳಿದಂತೆ ಯಶ್ ಹಲವಾರು ಬಾರಿ ತನ್ನ ಮುಂದಿನ ಯೋಜನೆಗಳು ಕನ್ನಡದಲ್ಲಿಯೇ ಇರಲಿವೆ ಎಂದು ಹೇಳಿಕೆ ನೀಡಿದ್ದು, ಬಾಲಿವುಡ್ ಚಿತ್ರದಲ್ಲಿ ವಿಲನ್ ಆಗಿ ನಟಿಸುವುದು ಕೇವಲ ವದಂತಿ ಎಂದೇ ಹೇಳಬಹುದಾಗಿದೆ.
ಇನ್ನು ಯಶ್ ಅವರು ತಮ್ಮ ಮುಂದಿನ ಚಿತ್ರವನ್ನು ಮಲಯಾಳಂ ಮೂಲದ ಮಹಿಳಾ ಡೈರೆಕ್ಟರ್ ಗೀತು ಮೋಹನ್‌ದಾಸ್ ಜತೆ ಮಾಡಲಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಅಲ್ಲದೇ ತಮಿಳು ನಿರ್ದೇಶಕ ಶಂಕರ್ ಜತೆ ಯಶ್ ಮುಂದಿನ ಚಿತ್ರಕ್ಕಾಗಿ ಕೈಜೋಡಿಸಲಿದ್ದಾರೆ ಹಾಗೂ ಸ್ವತಃ ತಾವೇ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಒಟ್ಟಿನಲ್ಲಿ ಯಶ್ ಸೈಲೆಂಟ್ ಆಗಿ ಇರುವ ಕಾರಣ ಯಶ್ ಮುಂದಿನ ಚಿತ್ರದ ಕುರಿತು ಹಲವಾರು ಸುದ್ದಿಗಳು ಹರಿದಾಡುತ್ತಿದ್ದು, ಈ ಎಲ್ಲಾ ಊಹಾಪೋಹಗಳು ಯಶ್ ಅಧಿಕೃತವಾಗಿ ತಮ್ಮ ಮುಂದಿನ ಚಿತ್ರವನ್ನು ಘೋಷಿಸುವವರೆಗೂ ಮುಂದುವರಿಯುವುದಂತೂ ಖಚಿತ.


Click it and Unblock the Notifications











