ಚಾರ್ಜ್‌ಶೀಟ್‌ನಲ್ಲಿ ಇಬ್ಬರು ನಟಿಯರ ಹೆಸರು ಪ್ರಸ್ತಾಪಿಸಿದ್ದ ಪ್ರದೋಶ್; ಅವರಿಬ್ಬರ ಪ್ರತಿಕ್ರಿಯೆ ಏನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಈಗಾಗಲೇ ಪೊಲೀಸರು 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆದರೆ ಚಾರ್ಜ್‌ಶೀಟ್ ಕೆದಕಿದಂತೆ ಸಾಕಷ್ಟು ಅಚ್ಚರಿಯ ವಿಚಾರಗಳು ಬೆಳಕಿಗೆ ಬರುತ್ತಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ಸ್ವಇಚ್ಚಾ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ವೇಳೆ ಮತ್ತಿಬ್ಬರು ನಟಿಯರು ಹೆಸರುಗಳು ಉಲ್ಲೇಖವಾಗಿದೆ.
ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿದೆ. ಪವಿತ್ರಾ ಗೌಡ ಮಾತ್ರವಲ್ಲ ಹಲವು ನಟಿಯರಿಗೆ ಫೇಕ್ ಅಕೌಂಟ್‌ನಿಂದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎಂದು ಹೇಳಲಾಗಿತ್ತು. ನಟಿಯರಾದ ಚಿತ್ರಾಲ್ ಹಾಗೂ ಸೋನು ಶ್ರೀನಿವಾಸ್ ಗೌಡ ನಮಗೂ ಕೆಟ್ಟ ಮೆಸೇಜ್ ಬಂದಿತ್ತು ಎಂದು ಹೇಳಿಕೊಂಡಿದ್ದರು.

ಗೌತಮ್ ಕೆಎಸ್ ಎನ್ನುವ ಫೇಕ್ ಇನ್‌ಸ್ಟಾಗ್ರಾಮ್ ಖಾತೆಯಿಂದ ರೇಣುಕಾಸ್ವಾಮಿ ನಟಿಯರಿಗೆ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎನ್ನುವುದು ಬಯಲಾಗಿದೆ. ಇದೀಗ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಕೂಡ ಈ ಬಗ್ಗೆ ಉಲ್ಲೇಖವಾಗಿದೆ. ಎ14 ಆರೋಪಿ ಪ್ರದೋಶ್ ವಿಚಾರಣೆ ವೇಳೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಹೆಸರು ಪ್ರಸ್ತಾಪಿಸಿದ್ದಾನೆ.
ರೇಣುಕಾ ಸ್ವಾಮಿಯನ್ನು ಶೆಡ್‌ಗೆ ಕರೆತಂದು ಹಲ್ಲೆ ನಡೆಸುವ ವೇಳೆ ಪ್ರದೋಶ್ ಆತನ ಫೋನ್ ತೆಗೆದುಕೊಂಡಿದ್ದನು. ರೇಣುಕಾಸ್ವಾಮಿ ಯಾರಿಗೆಲ್ಲಾ ಮೆಸೇಜ್ ಮಾಡಿದ್ದಾನೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದನಂತೆ. ಗೌತಮ್ ಕೆಎಸ್ ಹೆಸರಿನ ಫೇಕ್ ಖಾತೆಯಿಂದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದನಂತೆ. ಈ ಬಗ್ಗೆ ಅಲ್ಲೇ ಇದ್ದ ದರ್ಶನ್‌ಗೆ ಹೇಳಿದ್ದಾಗಿ ಪ್ರದೋಷ್ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾನೆ.

ಕೊಲೆ ಪ್ರಕರಣದ ಮುಚ್ಚಿ ಹಾಕಲು ದರ್ಶನ್‌ಗೆ ಇದೇ ಪ್ರದೋಶ್ ಸಾತ್ ನೀಡಿದ್ದ, ಧೈರ್ಯ ತುಂಬಿದ್ದ. ಏನು ಆಗುವುದಿಲ್ಲ, ಎಲ್ಲಾ ನಾನು ನೋಡಿಕೊಳ್ತೀನಿ ಎಂದು ಹೇಳಿ ಹಣ ಪಡೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ರೇಣುಕಾಸ್ವಾಮಿ ಮೊಬೈಲ್ ಅನ್ನು ಕೂಡ ಪ್ರದೋಶ್ ರಾಜಕಾಲುವೆಗೆ ಎಸೆದಿದ್ದರು. ತನಿಖೆ ವೇಳೆ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಆ ಮೊಬೈಲ್ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಪೊಲೀಸರು ಸಾಕ್ಷ್ಯಾಧಾರ ಸಂಗ್ರಹಿಸಲು ಹಿನ್ನಡೆ ಆಗಿದ್ದು ಸುಳ್ಳಲ್ಲ.
ಇನ್ನು ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರು ಪ್ರಸ್ತಾಪ ಆಗಿರುವ ಬಗ್ಗೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಟಿವಿ9 ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ರಾಗಿಣಿ "ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಏಜೆನ್ಸಿಯವರು ಹ್ಯಾಂಡಲ್ ಮಾಡ್ತಾರೆ. ಹಾಗಾಗಿ ನನಗೆ ಯಾರು ಸಂದೇಶ ಕಳಿಸಿದ್ದಾರೆ, ಇಲ್ಲ ಎನ್ನುವ ವಿಷಯ ನನಗೆ ಗೊತ್ತಿಲ್ಲ" ಎಂದಿದ್ದಾರೆ.
ನಟಿ ಶುಭಾ ಪೂಂಜಾ ಮಾತನಾಡಿ " ಗೌತಮ್ ಅನ್ನುವ ಹೆಸರಿನ ಖಾತೆಯಿಂದ ನನಗೆ ಯಾವುದೇ ಮೇಸೆಜ್ ಬಂದಿಲ್ಲ, ಸುಮ್ಮನೆ ಪ್ರದೋಶ್ ಯಾಕೆ ನನ್ನ ಹೆಸರು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ" ಎಂದು ತಿಳಿಸಿದ್ದಾರೆ. ಇದೇ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ. ಬಳಿಕ ದರ್ಶನ್ ತಮ್ಮ ಆಪ್ತರ ಮೂಲಕ ಆತನನ್ನು ಅಪಹರಿಸಿ, ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದರು ಎನ್ನಲಾಗ್ತಿದೆ. ಇದೇ ವೇಳೆ ಆತನನ ಜೀವ ಹೋಗಿದೆ. ಪ್ರಕರಣದಲ್ಲಿ 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳು ಜೈಲು ಸೇರಿ 3 ತಿಂಗಳಾಗುತ್ತಾ ಬಂತು.


Click it and Unblock the Notifications











