»   » ಮಲ್ಟಿಸ್ಟಾರ್‌ ಆ್ಯಕ್ಷನ್‌ ಚಿತ್ರಗಳೇಕೆ ತಯಾರಾಗುತ್ತಿವೆ?

ಮಲ್ಟಿಸ್ಟಾರ್‌ ಆ್ಯಕ್ಷನ್‌ ಚಿತ್ರಗಳೇಕೆ ತಯಾರಾಗುತ್ತಿವೆ?

Posted By: Super
Subscribe to Filmibeat Kannada

ಕಾಮಿಡಿ ಸಿನಿಮಾಗಳ ಕಾಲ ಮುಗಿದುಹೋಯಿತು. ಸೆಂಟಿಮೆಂಟ್‌ ಪ್ರಿಯರಿಗೆ ಟೀವಿ ಸೀರಿಯಲ್‌ಗಳಿವೆ. ಈಗೇನಿದ್ದರೂ ಆ್ಯಕ್ಷನ್‌ ಚಿತ್ರಗಳ ಕಾಲ. ಹಾಗಂತ ಕನ್ನಡ ನಿರ್ಮಾಪಕರು ತಮ್ಮಷ್ಟಕ್ಕೆ ತಾವೇ ನಿರ್ಧಾರಕ್ಕೆ ಬಂದಿದ್ದಾರೆ. ಅಂಕಿ ಅಂಶಗಳಾವುವೂ ಅದರ ಬೆಂಬಲಕ್ಕಿಲ್ಲ. ಉದಾಹರಣೆಗೆ ಮೊನ್ನೆಯಷ್ಟೇ ಬಂದ 'ಖಡ್ಗ" ಒಂದು ವಾರಕ್ಕೇ ಮಂಕಾಗಿದೆ. ಅದಕ್ಕಿಂತ ಮೊದಲು ಬಂದ 'ಪಾಪಿಗಳ ಲೋಕದಲ್ಲಿ " ಕೂಡ ಫ್ಲಾಪ್‌ ಆಗಿದೆ. ಅಷ್ಟೇಕೆ, ಆ್ಯಕ್ಷನ್‌ ಚಿತ್ರಗಳ ಸರದಾರರೆಂದೇ ಖ್ಯಾತರಾಗಿದ್ದ ಸಾಯಿಕುಮಾರ್‌ ಹೆಚ್ಚೂಕಡಿಮೆ ಕಡ್ಡಾಯ ನಿವೃತ್ತಿ ಪಡೆದುಕೊಂಡಿದ್ದಾರೆ.

ಹೀಗಿದ್ದೂ ಕಳೆದೆರಡು ವಾರಗಳಲ್ಲಿ ಸೆಟ್ಟೇರಿರುವ ಚಿತ್ರಗಳಲ್ಲಿ ನೆತ್ತರ ವಾಸನೆ ದಟ್ಟವಾಗಿದೆ. ಮಾಫಿಯಾ, ಸುಪಾರಿ, ಭೂಗತದೊರೆ, ಸತ್ಯಮೇವ ಜಯತೆ ಇವೆಲ್ಲವೂ ರಕ್ತಕ್ರಾಂತಿಯನ್ನು ನೆಚ್ಚಿಕೊಂಡ ಚಿತ್ರಗಳೇ. ಸಾಯಿಕುಮಾರ್‌ ಜಾಗಕ್ಕೆ ದೇವರಾಜ್‌ ಬಂದಿದ್ದಾರೆ. ಜೊತೆಗೆ ಮಚ್ಚು ಬೀಸುವಲ್ಲಿ ನಿಷ್ಣಾತರಾದ ಥ್ರಿಲ್ಲರ್‌ ಮಂಜು, ಚರಣ್‌ ರಾಜ್‌, ವಿನೋದ್‌ ಆಳ್ವಾ, ಶೋಭರಾಜ್‌ ಮುಂತಾದವರೂ ಬಿಜಿಯಾಗಿದ್ದಾರೆ. ಇವರನ್ನೆಲ್ಲಾ ಒಂದೆಡೆ ಸೇರಿಸಿ, ಅದನ್ನು ಮಲ್ಟಿಸ್ಟಾರ್‌ ಚಿತ್ರ ಎಂದು ಕರೆಯುವ ಧೈರ್ಯವನ್ನೂ ನಿರ್ಮಾಪಕರು ತೋರುತ್ತಿದ್ದಾರೆ.

ಈ ಬೆಳವಣಿಗೆಯ ಹಿಂದಿನ ರಹಸ್ಯವೇನು? ನಿರ್ದೇಶಕರ ಕೊರತೆ ಮತ್ತು ನಾಯಕರ ಅಭಾವ ಅನ್ನುತ್ತದೆ ಒಂದು ಸಮೀಕ್ಷೆ. ಯಾಕೆಂದರೆ ಸದ್ಯಕ್ಕೆ ಚಾಲ್ತಿಯಲ್ಲಿರುವ ಆನಂದ್‌ ಪಿ.ರಾಜು, ಶಿವಮಣಿ, ಡೇವಿಡ್‌ ಇವರೆಲ್ಲರೂ ಆ್ಯಕ್ಷನ್‌ ಚಿತ್ರಗಳಲ್ಲೇ ಪಳಗಿದವರು. ದೇಸಾಯಿ, ನಾರಾಯಣ್‌ರಂಥ ನಿರ್ದೇಶಕರು ದೊಡ್ಡ ಬ್ಯಾನರ್‌ಗಳಿಗೇ ಮೀಸಲಾಗಿದ್ದಾರೆ. ಅವರ ಚಿತ್ರಗಳಿಗೆ ಶಿವರಾಜ್‌, ವಿಷ್ಣುವರ್ಧನ್‌ ಅವರಂಥ ಬೇಡಿಕೆಯಲ್ಲಿರುವ ನಟರೂ ಬುಕ್‌ ಆಗಿದ್ದಾರೆ.

ಮಿಕ್ಕವರ ಪಾಡೇನು? ಲೋ ಬಜೆಟ್‌ನಲ್ಲಿ ಆ್ಯಕ್ಷನ್‌ ಚಿತ್ರ ಮಾಡುವುದು, ಬೇಡಿಕೆಯಲ್ಲಿಲ್ಲದ ಅನುಭವಿಗಳನ್ನು ಒಂದೆಡೆ ಸೇರಿಸಿ ಮಲ್ಟಿಸ್ಟಾರ್‌ ಎಂದು ಘೋಷಿಸುವುದು.

English summary
here is the answer for million dollar quest, why its action movies time at sandalwood?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada