ಹಿಮಾಚಲ ಪ್ರದೇಶ ದುರಂತ:ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ದೇಣಿಗೆ ನೀಡಿದ ನಟ ಆಮಿರ್ ಖಾನ್
ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ವಿನಾಶಕಾರಿ ಭೂಕುಸಿತ, ವ್ಯಾಪಕ ಹಾನಿ ಮತ್ತು ನೂರಾರು ಕಟ್ಟಡಗಳ ಕುಸಿತದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದು, ಬಾಲಿವುಡ್ ನಟ ಆಮಿತ್ ಖಾನ್ ಸಹಾಯ ಹಸ್ತ ಚಾಚಿದ್ದಾರೆ.
ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ರಚಿಸಲಾಗಿರುವ 'ಆಪ್ಡಾ ರಹತ್ ಕೋಶ್-2023' ಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಆಮಿರ್ ಖಾನ್ ಅವರ ದೇಣಿಗೆ ಮತ್ತು ಸಂಕಷ್ಟದಲ್ಲಿ ಜೊತೆಯಾಗಿ ಬೆಂಬಲ ನೀಡಿದ್ದಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

"ಈ ನೆರವು ನಿಸ್ಸಂದೇಹವಾಗಿ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ. ಅಗತ್ಯವಿರುವವರಿಗೆ ತಲುಪುವಂತೆ ನಿಧಿಯನ್ನು ನ್ಯಾಯಯುತವಾಗಿ ಬಳಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. ರಾಜ್ಯದಲ್ಲಿ ಮಾನ್ಸೂನ್ ಕಾರಣದಿಂದ ಪ್ರತಿಕೂಲ ಪರಿಣಾಮ ಉಂಟಾಗಿ ಕಷ್ಟ ಪಡುತ್ತಿರುವವರ ಜೀವನದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ ಆಮಿರ್ ಖಾನ್ ಅವರ ಉದಾತ್ತ ದೇಣಿಗೆ ಗಮನಾರ್ಹ ಬದಲಾವಣೆ ತರುತ್ತದೆ" ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಅನೇಕ ಭೂಕುಸಿತಗಳು ಮತ್ತು ಮೇಘಸ್ಫೋಟಗಳು ಸಂಭವಿಸಿವೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ದೇಶದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದ್ದು, ಮಳೆಯಿಂದಾಗಿ ರಾಜ್ಯಕ್ಕೆ 7020.28 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಇನ್ನು, ಮಳೆಯಿಂದ ಆದ ಅನಾಹುತಗಳಲ್ಲಿ ಸುಮಾರು 257 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಇದುವರೆಗೆ 1,376 ಮನೆಗಳು ಹಾನಿಗೊಳಗಾಗಿದ್ದರೆ, 7,935 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 270 ಅಂಗಡಿಗಳು ಮತ್ತು 2,727 ಗೋಶಾಲೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಮಿರ್ ಖಾನ್
ನಟ ಆಮಿರ್ ಖಾನ್ ಸಿನಿಮಾ ಬಗ್ಗೆ ಮಾತಾಡುವುದಾರೇ, ಕಿರಣ್ ರಾವ್ ನಿರ್ದೇಶಿಸಿರುವ ಅವರದ್ದೇ ನಿರ್ಮಾಣದ 'ಲಾಪತಾ ಲೇಡೀಸ್' ಸಿನಿಮಾ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಲಾಪತಾ ಲೇಡೀಸ್ ಸಿನಿಮಾದಲ್ಲಿ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ, ಛಾಯಾ ಕದಮ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸೆಪ್ಟೆಂಬರ್ 8 ರಂದು ಪ್ರತಿಷ್ಠಿತ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (TIFF) ನಲ್ಲಿ ಈ ಚಲನಚಿತ್ರವನ್ನು ಗ್ರ್ಯಾಂಡ್ ಪ್ರಿಮಿಯರ್ನಲ್ಲಿ ಪ್ರದರ್ಶಿಸಲಾಯಿತು. 2001 ರಲ್ಲಿ, ಗ್ರಾಮೀಣ ಭಾರತದಲ್ಲಿ, ಇಬ್ಬರು ಯುವ ವಧುಗಳು ರೈಲಿನಿಂದ ಕಳೆದುಹೋದಾಗ ಉಂಟಾಗುವ ಘಟನೆಗಳ ಸರಣಿಯನ್ನು ಲಾಪತಾ ಲೇಡೀಸ್ ಸಿನಿಮಾದಲ್ಲಿ ನೋಡಬಹುದು.
ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿರುವ ಲಾಪತಾ ಲೇಡೀಸ್ ಅನ್ನು ನಟ ಆಮಿರ್ ಖಾನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಬಿಪ್ಲಬ್ ಗೋಸ್ವಾಮಿಯವರ ಪ್ರಶಸ್ತಿ ವಿಜೇತ ಕಥೆಯನ್ನು ಆಧರಿಸಿದ ಚಿತ್ರಕಥೆಯೊಂದಿಗೆ ಆಮಿರ್ ಖಾನ್ ಪ್ರೊಡಕ್ಷನ್ಸ್ ಮತ್ತು ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರವು ಜನವರಿ 5, 2024 ರಂದು ಬಿಡುಗಡೆಯಾಗಲಿದೆ.


Click it and Unblock the Notifications











