ರೆಬಲ್ ಸ್ಟಾರ್ ಮರೆಯಾಗಿ ಇಂದಿಗೆ ಒಂದು ವರ್ಷ
ನವೆಂಬರ್ 24, 2018... ಆ ದಿನ ಯಾರು ನಿರೀಕ್ಷೆ ಮಾಡಿರದ ದುರ್ಘಟನೆವೊಂದು ನಡೆದು ಹೋಗಿತ್ತು. ರೆಬಲ್ ಸ್ಟಾರ್, ಕನ್ನಡ ಚಿತ್ರರಂಗದ ಕರ್ಣ ಅಂಬರೀಶ್ ನಿಧನ ಹೊಂದಿದರು. 66 ವರ್ಷದ ಅಂಬರೀಶ್ ಹೃದಯಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾದರು.
ಅಂಬರೀಶ್ ಮರೆಯಾಗಿ ಇಂದಿಗೆ ಒಂದು ವರ್ಷಗಳು ಕಳೆದಿವೆ. ಜಲೀಲ ಇಲ್ಲ ಎನ್ನುವ ಬೇಸರ ಚಿತ್ರರಂಗ, ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರಲ್ಲಿ ಇದೆ. ಮೊದಲ ವರ್ಷದ ಪುಣ್ಯ ತಿಥಿಯ ವಿಶೇಷವಾಗಿ ಅಭಿಮಾನಿಗಳು ಅನ್ನ ಸಂತರ್ಪಣೆ ನಡೆಸುತ್ತಿದ್ದಾರೆ. ಈ ಮೂಲಕ ಅಂಬಿಗೆ ನಮನ ಸಲ್ಲಿಸುತ್ತಿದ್ದಾರೆ.

2014ರಲ್ಲಿ ಶ್ವಾಸಕೋಶದ ಸೋಂಕಿನಿಂದ ಬಳಲಿದ್ದ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಜೊತೆಗೆ ಸಿಂಗಾಪುರಕ್ಕೂ ತೆರಳಿ ಮೌಂಟ್ ಎಲಿಜಬತ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು. ಬಳಿಕ ಫಿಟ್ ಅಂಡ್ ಫೈನ್ ಆಗಿದ್ದ ಅಂಬರೀಶ್ ಸಿನಿಮಾ ಚಿತ್ರೀಕರಣಗಳಲ್ಲಿ ಭಾಗವಹಿಸಿದ್ದರು.
ಆದರೆ, ನವೆಂಬರ್ 24 2018 ರಂದು ಸಂಜೆ ವೇಳೆಗೆ ಉಸಿರಾಟದ ಸಮಸ್ಯೆಯಿಂದ ಬಳಲಿದ ನಟ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರು.
'ಅಂಬಿ ನಿಂಗೆ ವಯಸ್ಸಾಯ್ತೋ' ಅವರ ಕೊನೆಯ ನಟನೆಯ ಸಿನಿಮಾವಾಗಿದೆ. 'ಕುರುಕ್ಷೇತ್ರ' ಸಿನಿಮಾ ಅವರ ನಿಧನದ ನಂತರ ಬಿಡುಗಡೆಯಾಯ್ತು. ಈ ಚಿತ್ರದಲ್ಲಿ ಅವರು ಬೀಷ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











