"ಆ ದಾರಿ ತಪ್ಪಿದ ಮಗನಿಂದ ಹಾಳಾದ 2 ಸಾವಿರ ಹೆಣ್ಣು ಮಕ್ಕಳು ಮಹಿಳೆಯರಲ್ವಾ?"; ಪ್ರಕಾಶ್ ರಾಜ್ ಆಕ್ರೋಶ
ಹಾಸನದ ಹಾಲಿ ಸಂಸದ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿಯ ಲೋಕಸಭಾ ಸ್ಪರ್ಧಿ ಪ್ರಜ್ವಲ್ ರೇವಣ್ಣ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಜ್ವಲ್ ರೇವಣ್ಣ ಅಶ್ಮೀಲ ವಿಡಿಯೋ ಪ್ರಕರಣ ಆರೋಪ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ. ಈ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್ ರಾಜ್ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ವಿರುದ್ಧ ಕಿಡಿಕಾರಿದ್ದಾರೆ.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದರಲ್ಲಿ ಪ್ರಜ್ವಲ್ ರೇವಣ್ಣ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಈ ಸಂಬಂಧ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಎಚ್‌ಡಿ ರೇವಣ್ಣ ವಿರುದ್ಧ ಹೊಳೆ ನರಸೀಪುರ ನಗರ ಪೊಲೋಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಜ್ವಲ್ ರೇವಣ್ಣ ಹಾಗೂ ಎಚ್‌ಡಿ ಕುಮಾರಸ್ವಾಮಿಯ ವಿರುದ್ಧ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಎಚ್‌ಡಿ ಕುಮಾರಸ್ವಾಮಿ, "ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿತಪ್ಪುತ್ತಿದ್ದಾರೆ" ಎಂದು ಹೇಳಿದ್ದರು. ಈ ಹೇಳಿಕೆಗೂ ತೀವ್ರ ವಿರೋಧ ವ್ಯಕ್ತವಾಗಿತ್ತು. ನಟ ಪ್ರಕಾಶ್ ರಾಜ್ ಒಂದೇ ಏಟಿನಲ್ಲಿ ಪ್ರಜ್ವಲ್ ಹಾಗೂ ಎಚ್‌ಡಿ ಕುಮಾರಸ್ವಾಮಿ ಇಬ್ಬರಿಗೂ ಟಾಂಗ್ ಕೊಟ್ಟಿದ್ದಾರೆ. ಅವರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಹೆಣವನ್ನು ಮುಂದಿಟ್ಟುಕೊಂಡು, ಹೆಣ್ಣನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಾರೆಂದು ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ. "ನಮ್ಮ ಪ್ರತಿನಿಧಿಗಳನ್ನು ನಾವು ಆಚರಿಸಬೇಕು. ಇಲ್ಲಿ ಇವತ್ತು ಇದೇನೆ. ಹೆಣದ ರಾಜಕೀಯ ಮಾಡೋದು. ಹೆಣ್ಣಿನ ರಾಜಕೀಯ ಮಾಡೋದು. ಧರ್ಮದ ರಾಜಕೀಯ ಮಾಡೋದು. ಇವತ್ತು ಆ ಮಹಾನುಭಾವನನ್ನು ಕೇಳಬೇಕು ಅಂದುಕೊಂಡೆ. ಏನಪ್ಪ ನಿಮ್ಮ ಜೊತೆ ಮೈತ್ರಿ ಮಾಡಿಕೊಂಡಿರುವ ಹಣ್ಣ (ಅಣ್ಣ) ಇದ್ದಾನಲ್ಲ ಹಣ್ಣ, ಆ ಹಣ್ಣ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಕೊಟ್ಟರೆ ದಾರಿ ತಪ್ಪಿದರು ಅಂದ್ನಲ್ಲ. ನಿಮ್ಮ ದಾರಿ ತಪ್ಪಿದ ಮಗ ಎಲ್ಲಿದ್ದಾನೆ ವಸಿ ಹೇಳಪ್ಪ" ಎಂದು ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ವ್ಯಂಗ ಮಾಡಿದ್ದಾರೆ.

ನೇಹಾ ಕೊಲೆ ಪ್ರಕರಣದ ಬಗ್ಗೆ ಇಷ್ಟೆಲ್ಲ ಮಾತಾಡೋರಿಗೆ ದಾರಿ ತಪ್ಪಿದ ಮಗನಿಂದ ಹಾಳಾದ ಎರಡು ಸಾವಿರ ಹೆಣ್ಣು ಮಕ್ಕಳು ಮಹಿಳೆಯರು ಅನಿಸುವುದಿಲ್ಲವೇ? ಆಕ್ರೋಶ ಬರುವುದಿಲ್ಲವೇ ಎಂದು ಹೇಳಿದ್ದರು. "ನೇಹಾ ಹೆಣ್ಣು ಮಕ್ಕಳ ಕೊಲೆ ಪ್ರಕರಣದಲ್ಲಿ ಇಷ್ಟು ಮಾಡುತ್ತೀರಲ್ಲ. ಆ ದಾರಿ ತಪ್ಪಿದ ಮಗನಿಂದ ಹಾಳಾದ ಎರಡು ಸಾವಿರ ಹೆಣ್ಣು ಮಕ್ಕಳು ಮಹಿಳೆಯರಲ್ವಾ? ಅವರ ವಿರುದ್ಧ ಆಕ್ರೋಶ ಬರಲ್ವಾ?. ನಿಮ್ಮ ರಾಜಕಾರಣ ನಮಗೆ ಅರ್ಥ ಆಗುವುದಿಲ್ಲ ಅಂದ್ಕೊಂಡಿದ್ದೀರಿ. ದೊಡ್ಡ ಮನಸ್ಸು ಮಾಡಿ ನಾವು ಕ್ಷಮಿಸಬಹುದು, ಆದರೆ ಮರೆಯೋದಿಲ್ಲ." ಎಂದಿದ್ದಾರೆ.
ಹಾಗೇ ಆಡಳಿತ ಪಕ್ಷ ಸೋತ ಮೇಲೆ ವಿರೋಧ ಪಕ್ಷ ಬರುತ್ತೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷವೇ ಸೋಲುತ್ತೆ ಎಂದೂ ಹೇಳಿದ್ದಾರೆ. "ಈಗಿರುವ ವಿರೋಧ ಪಕ್ಷ, ಆಡಳಿತ ಪಕ್ಷದ ಬಗ್ಗೆ ಯೋಚನೆ ಮಾಡಬೇಡಿ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಅಲ್ಲ ಆಡಳಿತ ಪಕ್ಷ ಸೋಲುತ್ತೆ. ಅವರ ಸೋತ ಮೇಲೆ ಇವರು ಬರುತ್ತಾರೆ." ಎಂದು ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











