For Quick Alerts
  ALLOW NOTIFICATIONS  
  For Daily Alerts

  ಸತ್ಯಜಿತ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ ನಟ-ರಾಜಕಾರಣಿಗಳು: ಯಾರು ಏನು ಹೇಳಿದರು?

  |

  ಕನ್ನಡದ ಹಿರಿಯ ಪೋಷಕ ನಟ, ಖಳನಟ ಸತ್ಯಜಿತ್ ನಿನ್ನೆ ತಡರಾತ್ರಿ ನಿಧನ ಹೊಂದಿದ್ದಾರೆ. ಇಂದು ಸತ್ಯಜಿತ್‌ರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟರು ಅಂತಿಮ ದರ್ಶನ ಪಡೆದರು.

  ಸತ್ಯಜಿತ್ ಸಾವಿನ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ದೊಡ್ಡಣ್ಣ, ''ಬೆಳಿಗ್ಗೆ ಟಿವಿ ನೋಡಿದಾಗ ವಿಷಯ ಗೊತ್ತಾಯಿತು. ಸತ್ಯಜಿತ್ ಸಾವು ತೀವ್ರ ದುಃಖ ತಂದಿದೆ. ಕಳೆದ 30 ವರ್ಷದಿಂದ ನಾವು ಜೊತೆಯಾಗಿದ್ದೆವು. ನಾವು ಒಟ್ಟಿಗೆ ಸೇರಿದಾಗ ಅವರಿಂದ ಹಾಡುಗಳನ್ನು ಹೇಳಿಸುತ್ತಿದ್ದೆವು, ಅವರೊಳ್ಳೆ ಗಾಯಕರೂ ಆಗಿದ್ದರು. ನಾವು ಒಟ್ಟಿಗೆ ಸೇರಿದಾಗ ಹಳೆಯ ದಿನಗಳನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದೆವು. ಯಾವುದೇ ವ್ಯಕ್ತಿಗೆ ಅದರಲ್ಲೂ ಕಲಾವಿದನಿಗೆ ಜೀವನದ ಮೊದಲಾರ್ಧ ಚೆನ್ನಾಗಿಲ್ಲದಿದ್ದರೂ ಪರ್ವಾಗಿಲ್ಲ ದ್ವೀತೀಯಾರ್ದ ಚೆನ್ನಾಗಿರಬೇಕು'' ಎಂದರು ದೊಡ್ಡಣ್ಣ.

  ''ನೋವಿನಲ್ಲೇ ಅರಳಿದ ಜೀವ ಸತ್ಯಜಿತ್. ಒಬ್ಬ ಡ್ರೈವರ್ ಆಗಿ ವೃತ್ತಿ ಮಾಡುತ್ತಿದ್ದ ಸತ್ಯಜಿತ್ ಸಿನಿಮಾ ರಂಗದಲ್ಲಿ ಜೀವನ ರೂಪಿಸಿಕೊಂಡಿದ್ದು ರೋಚಕ ಕತೆ. ಸತ್ಯಜಿತ್, ನಟನೆ ಆರಂಭಿಸಿದಾಗ ಖ್ಯಾತ ನಟರಾದ ನಾನಾ ಪಾಟೇಕರ್ ಇನ್ನೂ ಕೆಲವರು ಅವರನ್ನು ಹಿಂದಿ ಚಿತ್ರರಂಗಕ್ಕೆ, ಮರಾಠಿ ಚಿತ್ರರಂಗಕ್ಕೆ ಆಹ್ವಾನಿಸಿದ್ದರು ಆದರೆ ಸತ್ಯಜಿತ್ ಹೋಗಲಿಲ್ಲ. ಇಲ್ಲಿಯೇ ನೆಲೆ ನಿಲ್ಲಬೇಕೆಂದು ಹೆಸರು ಬದಲಾಯಿಸಿಕೊಂಡು ಇಲ್ಲಿಯೇ ಉಳಿದರು. ಚಿತ್ರರಂಗದಲ್ಲಿ ಬಹಳ ಗಟ್ಟಿಯಾಗಿಯೇ ನೆಲೆ ನಿಂತರು, ರಾಜ್‌ಕುಮಾರ್, ವಿಷ್ಣುವರ್ಧನ್ ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿದರು. ಅಷ್ಟೇ ಅಲ್ಲ ಅವರೊಬ್ಬ ಬಹಳ ಒಳ್ಳೆಯ ಹಾಸ್ಯನಟರೂ ಹೌದು'' ಎಂದಿದ್ದಾರೆ ಸತ್ಯಜಿತ್‌ರ ಗೆಳೆಯ ಮಂಡ್ಯ ರಮೇಶ್.

  ನೆನಪು ಮಾಡಿಕೊಂಡ ಮಂಡ್ಯ ರಮೇಶ್

  ನೆನಪು ಮಾಡಿಕೊಂಡ ಮಂಡ್ಯ ರಮೇಶ್

  ''ಅವರ ಕೊನೆಯ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅದಕ್ಕೆ ನಾನು ಯಾರನ್ನೂ ಹೊಣೆ ಮಾಡಲು ಇಷ್ಟಪಡುವುದಿಲ್ಲ. ವಯಸ್ಸಾದ ಕಾರಣ ಅವರ ಮನೋಶಕ್ತಿಯೂ ಕುಂದಿರಬಹುದು. ಆದರೆ ಅವರು ಇದ್ದಷ್ಟು ಕಾಲ ಪಕ್ಕದಲ್ಲಿದ್ದವರನ್ನು ನಗಿಸುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್, ದರ್ಶನ್ ಸಿನಿಮಾಗಳಲ್ಲಿ ಬಹಳ ಒಳ್ಳೆಯ ಪಾತ್ರಗಳನ್ನು ಅವರು ಮಾಡಿದ್ದಾರೆ. 'ಒರಟ ಐ ಲವ್ ಯು' ಸಿನಿಮಾದಲ್ಲಿ ನಾನು ಅವರ ಪಿಎ ಪಾತ್ರ ಮಾಡಿದ್ದೆ. ನಮ್ಮಿಬ್ಬರ ಜೋಡಿ, ಅವರು ಸೆಟ್‌ನಲ್ಲಿ ಎಲ್ಲರನ್ನೂ ನಗಿಸುತ್ತಿದ್ದ ರೀತಿ ಬಹಳ ನೆನಪು ಬರುತ್ತದೆ'' ಎಂದು ಹಳೆಯ ನೆನಪು ಹಂಚಿಕೊಂಡಿದ್ದಾರೆ ಮಂಡ್ಯ ರಮೇಶ್.

  ವರ್ಷದ ಹಿಂದೆ ನಮ್ಮ ಮನೆಗೆ ಬಂದಿದ್ದರು: ಪುನೀತ್

  ವರ್ಷದ ಹಿಂದೆ ನಮ್ಮ ಮನೆಗೆ ಬಂದಿದ್ದರು: ಪುನೀತ್

  ಸತ್ಯಜಿತ್ ಅಗಲಿಕೆ ಬಗ್ಗೆ ಮಾತನಾಡಿದ ನಟ ಪುನೀತ್ ರಾಜ್‌ಕುಮಾರ್, ''ಹಲವಾರು ಸಿನಿಮಾಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ನನ್ನ ನಟನೆಯ ಅಪ್ಪು, ವೀರ ಕನ್ನಡಿಗ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವರ್ಷದ ಹಿಂದೆ ನಮ್ಮ ಮನೆಗೂ ಅವರು ಬಂದಿದ್ದರು. ವ್ಹೀಲ್‌ ಚೇರ್‌ನಲ್ಲಿಯೇ ನಮ್ಮ ಮನೆಗೆ ಅವರು ಬಂದಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ ಪುನೀತ್ ರಾಜ್‌ಕುಮಾರ್.

  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

  ಸಿನಿಮಾ ನಟರು ಮಾತ್ರವೇ ಅಲ್ಲದೆ ರಾಜಕಾರಣಿಗಳು ಸಹ ಸತ್ಯಜಿತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ, ''ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

  ಬಹುಬೇಡಿಕೆಯ ಪೋಷಕ ನಟನಾಗಿದ್ದ ನಟ ಸತ್ಯಜಿತ್ ‘ಅರುಣ ರಾಗ', ‘ಅಂತಿಮ ತೀರ್ಪು', ‘ಶಿವ ಮೆಚ್ಚಿದ ಕಣ್ಣಪ್ಪ', ‘ರಣರಂಗ', ‘ಉಪ್ಪಿ 2'-ಹೀಗೆ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟ ಸತ್ಯಜಿತ್ ಪೋಷಕ ಪಾತ್ರ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚು ಗಮನ ಸೆಳೆದಿದ್ದರು ಎಂದು ನೆನಪಿಸಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಪ್ರಾರ್ಥಿಸಿದ್ದಾರೆ.

  ಸಂತಾಪ ಕೋರಿದ ಸಚಿವ ಅಶ್ವತ್ಥ ನಾರಾಯಣ್

  ಸಂತಾಪ ಕೋರಿದ ಸಚಿವ ಅಶ್ವತ್ಥ ನಾರಾಯಣ್

  ''ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಅವರ ನಿಧನಕ್ಕೆ ಸಚಿವ‌ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು‌ ಸಂತಾಪ‌ ವ್ಯಕ್ತಪಡಿಸಿದ್ದಾರೆ. ಖಳನಾಯಕ, ಪೋಷಕನಟ ಸೇರಿದಂತೆ ವೈವಿಧ್ಯಮಯ ಪಾತ್ರಗಳಲ್ಲಿ‌ 600 ಕ್ಕೂ ಹೆಚ್ಷು‌ ಸಿನಿಮಾಗಳಲ್ಲಿ‌ ಅವರು ಅಭಿನಯಿಸಿದ್ದ‌ರು. ತಮ್ಮ ಪ್ರೌಢ ನಟನೆಯ ಮೂಲಕ ಜನರ‌ ಹೃದಯವನ್ನು ಗೆದ್ದಿದ್ದರು. ತಮ್ಮ ಕಲಾಸೇವೆಯಿಂದಾಗಿ ಅವರ ಹೆಸರು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ‌ ಚಿರಸ್ಥಾಯಿಯಾಗಿರುತ್ತದೆ'' ಎಂದಿದ್ದಾರೆ ಸಚಿವ ಅಶ್ವತ್ಥನಾರಾಯಣ್.

  English summary
  Sandalwood actors and Karnataka politicians talked about actor Sathyajith. Senior actor Sathyajith passed away recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X