ಮನೆಗೆ ತೆರಳಿ ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಅರ್ಜುನ್ ಸರ್ಜಾ
ಕನ್ನಡ ಸಿನಿರಂಗದಲ್ಲಿ ದಶಕಗಳ ಕಾಲ ನಾಯಕಿಯಾಗಿ ಆಳಿ, ಬಳಿಕ ಪೋಷಕ ನಟಿಯಾಗಿ ಮಿಂಚಿದ ನಾಡು ಕಂಡ ಅದ್ಭುತ ನಟಿ ಲೀಲಾವತಿ ಅವರು. ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಅವರನ್ನು ಭೇಟಿಯಾಗಲು ಇತ್ತೀಚೆಗೆ ಹಿರಿಯ ಕಲಾವಿದರು ತೆರಳಿದ್ದರು. ಈಗ ಮತ್ತೊಬ್ಬ ಖ್ಯಾತ ನಟ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಹೌದು... ಕನ್ನಡಿಗ, ಬಹುಭಾಷಾ ನಟ ಅರ್ಜುನ್ ಸರ್ಜಾ ಹಿರಿಯ ನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ನೆಲಮಂಗಲದ ಬಳಿ ಇರುವ ಸೋಲದೇವನಹಳ್ಳಿಯ ಲೀಲಾವತಿ ಮತ್ತು ವಿನೋದ್ ರಾಜ್ ಅವರ ತೋಟದ ಮನೆಗೆ ಬಂದಿದ್ದ ಅರ್ಜುನ್ ಸರ್ಜಾ, ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ನಟಿ ಲೀಲಾವತಿ
87 ವರ್ಷದ ಹಿರಿಯ ನಟಿ ಡಾ.ಎಂ.ಲೀಲಾವತಿ ಮನೆಗೆ ಅರ್ಜುನ್ ಸರ್ಜಾ ಭೇಟಿ ನೀಡಿದ ಸಂದರ್ಭದಲ್ಲಿ ನಟ ವಿನದ್ ರಾಜ್ ಕೂಡ ಪಕ್ಕದಲ್ಲಿಯೇ ಇದ್ದರು. ಅರ್ಜುನ್ ಸರ್ಜಾ ಅವರು ತನ್ನ ತಾಯಿಯನ್ನು ಮಾತನಾಡಿಸುತ್ತಿರುವುದನ್ನು ನೋಡಿ ಭಾವುಕರಾಗಿದ್ದಾರೆ.
ಈಗಾಗಲೇ ಲೀಲಾವತಿ ಅವರಿಗೆ 87 ವರ್ಷವಾಗಿದ್ದು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದು, ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ನಟ ಅರ್ಜುನ್ ಸರ್ಜಾ ಮನೆಗೆ ತೆರಳಿದ್ದಾರೆ. ತಾಯಿಯ ಸ್ಥಿತಿ ಕಂಡು ಕಣ್ಣೀರು ಹಾಖಿದ ನಟ ವಿನೋದ್ ರಾಜ್ ಅವರಿಗೆ ಅರ್ಜುನ್ ಸರ್ಜಾ ಧೈರ್ಯ ತುಂಬಿದ್ದಾರೆ.

ಲೀಲಾವತಿ ಭೇಟಿಯಾಗಿದ್ದ ನಟ ಶ್ರೀನಾಥ್ ತಂಡ
ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ನಟಿ ಲೀಲಾವತಿ ಅವರನ್ನು ನೋಡಲು ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಾಥ್ ಜತೆ ಮತ್ತಿತರ ಹಿರಿಯ ಕಲಾವಿದರು ತೋಟದ ಮನೆಗೆ ಹೋಗಿದ್ದರು.
ಹಿರಿಯ ನಟ ಶ್ರೀನಾಥ್ ಜೊತೆಗೆ ನಟಿ ಪದ್ಮಾ ವಾಸಂತಿ, ನಟ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಯಿ ಅವರು ಲೀಲಾವತಿ ಮನೆಗೆ ಭೇಟಿ ನೀಡಿದ್ದರು. ಕಳೆದ ಕೆಲ ತಿಂಗಳುಗಳ ಹಿಂದೆ ನಟಿ ಶೃತಿ ತಂಡ ಸಹ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿ, ಅಲ್ಲೇ ಅಡುಗೆ ತಯಾರಿಸಿ ಊಟ ಮಾಡಿದ್ದರು.


Click it and Unblock the Notifications











