ಥೈಲ್ಯಾಂಡ್ ಅಖಾಡದಲ್ಲಿ ನಟ ಅರುಣ್ ಸಾಗರ್ ಪುತ್ರನ ಅಪರೂಪದ ಸಾಧನೆ!
ಆಕ್ಟರ್ ಮಗ ಆಕ್ಟರ್ ಆಗಬೇಕು ಅನ್ನುವ ನಿಯಮ ಏನಿಲ್ಲ. ನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಮುವಾಯ್ ಥೈ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವುದು ಗೊತ್ತೇಯಿದೆ. ಇದೀಗ ಥೈಲ್ಯಾಂಡ್‌ನಲ್ಲಿ ಮತ್ತೊಂದು ಪಂದ್ಯ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಈಗಾಗಲೇ ಸೂರ್ಯ ಸಾಗರ್ ದೇಶ ವಿದೇಶಗಳಲ್ಲಿ ಸಾಕಷ್ಟು ಮುವಾಯ್ ಥೈ ಪಂದ್ಯಗಳನ್ನು ಆಡಿ ಗೆದ್ದಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನಡೆದ ವಿಶ್ವ ಬಾಕ್ಸಿಂಗ್ ಕೌನ್ಸಿಲ್(WBC) ಮುವಾಯ್ ಥೈ ಸ್ಪರ್ಧೆಯಲ್ಲಿ ಕರ್ನಾಟಕದ ಸೂರ್ಯ ಸಾಗರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅರುಣ್ ಸಾಗರ್ ಪುತ್ರನ ಸಾಧನೆಗೆ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಿದ್ದರು.
ಇದೀಗ ಥಾಯ್ಲೆಂಡ್‌ನ ರಾಜಡಮ್ನೆರ್ನ್ ಕ್ರೀಡಾಂಗಣದಲ್ಲಿ ಆಡಿ ಗೆದ್ದ ಭಾರತದ ಮೊದಲ ಮುವಾಯ್ ಥೈ ಪಟು ಅನ್ನಿಸಿಕೊಂಡಿದ್ದಾರೆ. ಈ ವಿಚಾರವನ್ನು ಸೂರ್ಯ ಸಾಗರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಮಗನ ಸಾಧನೆ ಬಗ್ಗೆ ಅರುಣ್ ಸಾಗರ್ ಕೂಡ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸೂರ್ಯ ಸಾಗರ್ ಸಾಧನೆಗೆ ಸೆಲೆಬ್ರೆಟಿಗಳು ಮತ್ತು ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ರಾಜಡಮ್ನೆರ್ನ್ ಸ್ಟೇಡಿಯಂ ವಿಶೇಷತೆ
ಹೌದು, ರಾಜಡಮ್ನೆರ್ನ್ ಪ್ರಪಂಚದ ಮೊದಲ ಮುವಾಯ್ ಥಾಯ್ ಸ್ಟೇಡಿಯಂ. ಹಾಗಾಗಿ ಇಲ್ಲಿ ಪಂದ್ಯ ಆಡುವುದು, ಗೆಲ್ಲುವುದು ಎಲ್ಲಾ ಮುವಾಯ್ ಥಾಯ್ ಪಟುಗಳ ಕನಸು. ಆ ಸ್ಟೇಡಿಯಂನಲ್ಲಿ ಆಡಿ ಗೆದ್ದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಸೂರ್ಯ ಸಾಗರ್ ಭಾಜನರಾಗಿದ್ದಾರೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರ್ದೇಶಕ ಕೆ. ಎಂ ಚೈತನ್ಯ ಕಾಮೆಂಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ಇದು ಬರೀ ಆರಂಭ ಅಷ್ಟೇ!
ರಾಜಡಮ್ನೆರ್ನ್ ಪಂದ್ಯ ಗೆದ್ದ ಖುಷಿಯನ್ನು ಹಂಚಿಕೊಂಡಿರುವ ಸೂರ್ಯ ಸಾಗರ್, 'ನಾನು ಈ ಸಂಭ್ರಮವನ್ನು ಈ ಕ್ಷಣಕ್ಕಷ್ಟೆ ಸೆಲೆಬ್ರೆಟ್ ಮಾಡುತ್ತಿದ್ದೇನೆ. ಇದು ಆರಂಭ ಅಷ್ಟೇ. ಈ ಆಟದಲ್ಲಿ ಮತ್ತಷ್ಟು ಮೇಲೆರಲು ಸಾಕಷ್ಟು ಕಲಿಯುವುದು, ಕರಗತ ಮಾಡಿಕೊಳ್ಳುವುದು ಬಾಕಿಯಿದೆ. ನನ್ನ ಬೆಂಬಲಕ್ಕೆ ನಿಂತು ಕುಟುಂಬ ಸದಸ್ಯರು ಹಾಗೂ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.

3 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು
2019ರಲ್ಲಿ ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮುವಾಯ್ ಥಾಯ್ ಸ್ಪರ್ಧೆ ಥಾಯ್ಲಂಡ್‌ನ ಪಟಾಯದಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶದ ಸ್ಪರ್ಧಿಗಳು ಭಾಗಿಯಾಗಿದ್ದರು. 21 ವರ್ಷದ ಸೂರ್ಯ ಭಾರತವನ್ನು ಪ್ರತಿನಿಧಿಸಿದ್ದರು. ವಿಶೇಷ ಅಂದರೆ, ಅದೇ ಮೊದಲ ಬಾರಿಗೆ ಭಾರತಕ್ಕೆ ಗೆಲುವು ಸಿಕ್ಕಿತ್ತು. ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆದ್ದು ಬೀಗಿದ್ದರು.

ಸೂರ್ಯ ಸಾಗರ್ ಗುರಿ
ಥಾಯ್ಲೆಂಡ್‌ನ ರಾಷ್ಟ್ರೀಯ ಕ್ರೀಡೆಯಾಗಿರುವ ಮುವಾಯ್ ಥಾಯ್‌ನ ದೇಹದ ಎಂಟು ಭಾಗಗಳನ್ನು ಬಳಸಿ ಆಡುತ್ತಾರೆ. ನೋಡಲು ಬಾಕ್ಸಿಂಗ್ ರೀತಿ ಕಾಣುವ ಈ ಸಮರ ಕಲೆಗೆ ಕಠಿಣ ತರಬೇತಿ ಅವಶ್ಯಕ. ಹಲವು ವರ್ಷಗಳಿಂದ ಮುವಾಯ್ ಥಾಯ್ ಕಲಿಯುತ್ತಿರುವ ಸೂರ್ಯನಿಗೆ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಇದ್ದು ಅದಕ್ಕಾಗಿ ತಯಾರಿಯನ್ನು ನಡೆಸುತ್ತಿದ್ದಾರೆ. ಇನ್ನು ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಎದುರು ಸಿನಿಮಾದಲ್ಲಿ ವಿಲನ್ ಆಗಿ ನಟಿಸುವ ಆಸೆಯೂ ಅವರಿಗಿದೆ.


Click it and Unblock the Notifications











