ಬೆಂಗಳೂರು ಟ್ರಾಫಿಕ್ ಬಗ್ಗೆ ದಿಢೀರ್ ವರದಿ ಮಾಡಿದ್ದೇಕೆ ಖ್ಯಾತ ನಟ?
ಪದೇ ಪದೆ ಬೆಂಗಳೂರು ಟ್ರಾಫಿಕ್ ವಿಚಾರ ಚರ್ಚೆ ಆಗುತ್ತದೆ. ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದು ಇದೆ. ಆದರೆ ಕಳೆದೊಂದು ವಾರದಿಂದ ಬೆಂಗಳೂರು ಖಾಲಿ ಖಾಲಿಯಾಗಿದೆ. ರಸ್ತೆಗಳಲ್ಲಿ ಟ್ರಾಫಿಕ್ ಕಮ್ಮಿ ಆಗಿತ್ತು. ಉದ್ಯೋಗ ಸೇರಿದಂತೆ ನಾನಾ ಕಾರಣಕ್ಕಾಗಿ ಬೆಂಗಳೂರಿಗೆ ಬಂದು ಸೇರಿರುವವರು ಹಬ್ಬ ಆಚರಿಸಲು ತಮ್ಮ ಹುಟ್ಟೂರಿಗೆ ತೆರಳಿದ್ದರು. ಹಾಗಾಗಿ ಟ್ರಾಫಿಕ್ ಗಣನೀಯವಾಗಿ ತಗ್ಗಿತ್ತು.
ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಜನ ನಗರವನ್ನು ಬಿಟ್ಟು ಹೋಗಿದ್ದರು. ಹಾಗಾಗಿ ನಗರ ಪ್ರಶಾಂತವಾಗಿತ್ತು. ಪ್ರತಿ ದಿನ ನಗರ ಹೀಗೆ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಕೋವಿಡ್ ಹಾವಳಿ ಸಮಯದಲ್ಲಿ ಹೀಗೆ ಬೆಂಗಳೂರು ಖಾಲಿ ಖಾಲಿಯಾಗಿ ಇದ್ದಿದ್ದು ಕಂಡುಬಂದಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಹೀಗೆ ಕಂಡಿದೆ.

ಕಳೆದ ವೀಕೆಂಡ್ ಸೇರಿದಂತೆ ಸೋಮವಾರ, ಮಂಗಳವಾರ ಹಾಗೂ ಬುಧವಾರ ಬೆಳಕಿನ ಹಬ್ಬ ಇತ್ತು. ಕೆಲವರು ಇನ್ನೆರಡು ದಿನ ರಜೆ ಹಾಕಿಕೊಂಡು ಹೆಚ್ಚು ಕಮ್ಮಿ ಏಳೆಂಟು ದಿನ ಹುಟ್ಟೂರಿಗೆ ತೆರಳಿದ್ದಾರೆ. ಹಾಗಾಗಿ ಹೀಗೆ ನಗರ ಖಾಲಿ ಖಾಲಿ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ 14 ಕಿ.ಮೀ ದೂರವನ್ನು 20 ನಿಮಿಷದಲ್ಲಿ ತಲುಪಿದೆ ಎಂದು ಟೆಕ್ಕಿ ಒಬ್ಬರು ವೀಡಿಯೋ ಮಾಡಿ ಹಂಚಿಕೊಂಡಿದ್ದರು.
ಇದೀಗ ಬೆಂಗಳೂರು ಟ್ರಾಫಿಕ್ ಬಗ್ಗೆ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ವೀಡಿಯೋ ಮಾಡಿ ಮಾತನಾಡಿದ್ದಾರೆ. ಬೆಂಗಳೂರು ಟ್ರಾಫಿಕ್ ಕಳ್ಳತನವಾಗಿ ಎಂದು ವ್ಯಂಗ್ಯಭರಿತವಾಗಿ ವೀಡಿಯೋ ಮಾಡಿದ್ದಾರೆ. ಸದಾ ಇದೇ ರೀತಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಅವರ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ಇನ್ನೊಂದು ದಿನ ಕಾಯಿರಿ ಸರ್, ಸೋಮವಾರ(ಅಕ್ಟೋಬರ್ 27) ಅಸಲಿ ಬೆಂಗಳೂರು ದರ್ಶನವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಸ್ಯಾಂಡಪ್ ಕಾಮೆಡಿಯನ್ ಕೂಡ ಆಗಿರುವ ಆಶಿಶ್ ವಿದ್ಯಾರ್ಥಿ ವ್ಯಂಗ್ಯಭರಿತವಾಗಿ ವೀಡಿಯೋ ಮಾಡಿದ್ದಾರೆ. "ನಮಸ್ಕಾರ, ನಾನು ಇಲ್ಲಿ ಒಂದು ನಷ್ಟವನ್ನು ವರದಿ ಮಾಡುತ್ತಿದ್ದೇನೆ. ನಿನ್ನೆಯೂ ಹೀಗೆ ಆಗಿತ್ತು. ಆದರೆ ಹೇಳಿರಲಿಲ್ಲ. ಇಂದು ಅದು ಮತ್ತೆ ಮರುಕಳಿಸಿದೆ. ನಾನು ಬೆಂಗಳೂರಿನಲ್ಲಿದ್ದೇನೆ, ಆದರೆ ಅಚ್ಚರಿಗೊಂಡಿದ್ದೇನೆ. ಇಲ್ಲಿ ಟ್ರಾಫಿಕ್ ಅನ್ನು ಕದ್ದಿದ್ದಾರೆ" ಎಂದು ವೀಡಿಯೋ ಆರಂಭಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಬ್ಗೆ ಸಂಬಂಧಪಟ್ಟವರು ಗಮನಿಸಿ ಎಂದು ಆಶಿಶ್ ವಿದ್ಯಾರ್ಥಿ ತಮಾಷೆಯಾಗಿ ಹೇಳಿದ್ದಾರೆ. "ಬೆಂಗಳೂರಿನಲ್ಲಿ ಟ್ರಾಫಿಕ್ ಇಲ್ಲ. ಗಾಂಧಿನಗರದಿಂದ ನಾವು 25 ನಿಮಿಷಗಳಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿದೆವು. ನಾವು ಬೇಗನೆ ಎದ್ದೆವು, ಟ್ರಾಫಿಕ್ ಸಿಗಲಿಲ್ಲ. ದಯವಿಟ್ಟು ಇದನ್ನು ನೋಡಿ. ಈಗ ನಾವು ನನ್ನ ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಾಗಿ ಕೊಚ್ಚಿಗೆ ಹೋಗುತ್ತಿದ್ದೇವೆ, ಆದರೆ ನೀವು ಇಲ್ಲಿ ನನ್ನನ್ನು ತಮಾಷೆ ಮಾಡ್ತಿದ್ದೀರಿ. ಟ್ರಾಫಿಕ್ ಎಲ್ಲಿದೆ? ಇದು ಕಳವಳಕಾರಿಯಾಗಿದೆ. ಸಂಚಾರವಿಲ್ಲದ ಹಳೆಯ ಕಾಲಕ್ಕೆ ಹಿಂತಿರುಗಬೇಡಿ . ಜಗತ್ತು ಮುಂದುವರಿಯುತ್ತಿದೆ. ದಯವಿಟ್ಟು ಇದನ್ನು ಗಮನಿಸಿ" ಎಂದು ಹೇಳಿದ್ದಾರೆ.
ದೆಹಲಿ ಮೂಲದ ನಟ ಆಶಿಶ್ ವಿದ್ಯಾರ್ಥಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆರಂಭದಲ್ಲಿ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಅವರು ಬಳಿಕ ದಕ್ಷಿಣದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಖಳನಟನಾಗಿ, ಹಾಸ್ಯನಟನಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. 1999ರಲ್ಲಿ 'AK- 47' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು.
ಕೋಟಿಗೊಬ್ಬ, ನಂದಿ, ಆಕಾಶ್, ಸುಂಟರಗಾಳಿ, ಪೊರ್ಕಿ, ಬಚ್ಚನ್ ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ಆಶಿಶ್ ವಿದ್ಯಾರ್ಥಿ ನಟಿಸಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು, ಬೆಂಗಾಲಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.


Click it and Unblock the Notifications











