ಯಡಿಯೂರಿನಲ್ಲಿ ಆಡಿ ಬೆಳೆದ ಚಿರಂಜೀವಿ ಸರ್ಜಾ ಹೆಜ್ಜೆ ಗುರುತು
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕೇವಲ 39ನೇ ವಯಸ್ಸಿನಲ್ಲಿ ಜೀವನ ಮುಗಿಸಿ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಜಿರಂಜೀವಿ ಸರ್ಜಾ ಅವರ ದಿಢೀರ್ ಸಾವು ಕುಟುಂಬದವರಿಗೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದೊಡ್ಡ ಆಘಾತವೊಂಟು ಮಾಡಿದೆ.
Recommended Video
ಇಂದು ಮದ್ಯಾಹ್ನ 2ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾಗೆ ಹೃದಯಾಘಾತ ವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೆ ಚಿರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಚಿರಂಜೀವಿ ಸರ್ಜಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಯಡಿಯೂರಿನಲ್ಲಿ ಜನಿಸಿದ ಚಿರು ದಕ್ಷಿಣ ಭಾರತದ ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ. ಕಲಾವಿದರ ಕುಟುಂಬದಲ್ಲಿ ಹುಟ್ಟಿದ ಚಿರುಗೆ ಅಭಿನಯ ರಕ್ತಗತವಾಗಿಯೆ ಬಂದಿತ್ತು. ಮಾವ ಅರ್ಜುನ್ ಸರ್ಜಾ ಸಹ ಖ್ಯಾತ ನಟ. ಸಹೋದರ ಧ್ರುವ ಸರ್ಜಾ ಕೂಡ ನಟನಾಗಿ ಖ್ಯಾತಿಗಳಿಸಿದ್ದಾರೆ.

ಬೆಂಗಳೂರಿನಲ್ಲಿ ಶಿಕ್ಷಣ
1980 ಅಕ್ಟೋಬರ್ 17ರಂದು ಜನಿಸಿದ್ದ ಚಿರಂಜೀವಿ ಸರ್ಜಾ, ಬೆಂಗಳೂಕಿನಲ್ಲಿಯೆ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಶಾಲೆಯಲ್ಲಿ ಮುಗಿಸಿದ್ದಾರೆ. ಕಾಲೇಜು ವಿದ್ಯಾಭ್ಯಾಸವನ್ನು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಮುಗಿಸಿದ್ದಾರೆ.

ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ
ವಿದ್ಯಾಭ್ಯಾಸದ ನಂತರ ಚಿರಂಜೀವಿ ಸರ್ಜಾ, ಮಾವ ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 2005ರಿಂದ ಸುಮಾರು 4 ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚಿರು ನಂತರ 2009ರಲ್ಲಿ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ.

ವಾಯುಪುತ್ರ ಮೊದಲ ಸಿನಿಮಾ
ಚಿರಂಜೀವಿ ಸರ್ಜಾ ವಾಯುಪುತ್ರ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಸಿನಿಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮೊದಲ ಸಿನಿಮಾದಲ್ಲಿಯೆ ರೆಬಲ್ ಸ್ಟಾರ್ ಅಂಬರೀಶ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಪೆಡದುಕೊಳ್ಳುತ್ತಾರೆ. ಸಿನಿಮಾ ತಕ್ಕಮಟ್ಟಿಗೆ ಹೆಸರು ಮಾಡುತ್ತೆ. ಮೊದಲ ಸಿನಿಮಾದಲ್ಲಿಯೆ ಬರವಸೆಯ ನಟನಾಗಿ ಗುರುಸಿಕೊಂಡ ಚಿರು ಸುಮಾರು 22 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

'ಚಿರು' ಸಿನಿಮಾದ ಹಿಟ್
ವಾಯುಪುತ್ರ ಸಿನಿಮಾದ ನಂತರ ಚಿರಂಜೀವಿ ಸರ್ಜಾ ಗಂಡೆದೆ ಹಾಗು ಚಿರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿರು ಸಿನಿಮಾ ಚಿರಂಜೀವಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಆ ನಂತರ ಚಿರುಗೆ ಬೇಡಿಕೆಯೂ ಹೆಚ್ಚಾಗುತ್ತೆ. ದಡಂ ದಶಗುಣಂ, ಕೆಂಪೆಗೌಡ, ವರದನಾಯಕ, ಆಟಗಾರ, ರಾಮ್ ಲೀಲ, ಅಮ್ಮ ಐ ಲವ್ ಯೂ, ಸಿಂಗ, ಖಾಕಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

2018ರಲ್ಲಿ ಮೇಘನಾ ಜೊತೆ ಮದುವೆ
2018ರಲ್ಲಿ ಚಿರಂಜೀವಿ ಸರ್ಜಾ ಖ್ಯಾತ ನಟಿ ಮೇಘನಾ ರಾಜ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಚಿರು ಮತ್ತು ಮೇಘನಾ ರಾಜ್ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಮೇರಿಗೆ 2017ರಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2018 ಮೇ 2ರಂದು ಮೇಘನಾ ಜೊತೆ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಮದುವೆಯಾಗಿ 2 ವರ್ಷವಾಗಿದೆ. ಕಳೆದ ತಿಂಗಳಷ್ಟೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಚಿರು ಬಳಿ ಇದ್ದ ಸಿನಿಮಾಗಳು
ಚಿರು ಬಳಿ ಸದ್ಯ ರಾಜಮಾರ್ತಂಡ, ಏಪ್ರಿಲ್, ರಣಂ ಮತ್ತು ಕ್ಷತ್ರಿಯಾ ಸಿನಿಮಾಗಳಿವೆ. ಕೊನೆಯದಾಗಿ ಚಿರು ಶಿವಾರ್ಜುನ ಸನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಸಿನಿಮಾ ಚಿತ್ರಮಂದಿರದಿಂದ ಒಂದೆ ದಿನದಲ್ಲಿ ಮಾಯವಾಗಿದೆ.


Click it and Unblock the Notifications











