ಕೋಳಿ ಸಾರು, ಕೀರು.. ಮೀನು, ಗಿಣ್ಣು.. ನನ್ನ ರುಚಿ ನಂದು, ನಿನ್ನ ರುಚಿ ನಿಂದು"; ಅಂದೇ ಬರೆದಿದ್ರು ಧನಂಜಯ್
ನಟ, ನಿರ್ಮಾಪಕ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದ ವಿಚಾರ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಜೋರಾಗಿದೆ. ಆದರೆ ಮಾಂಸಾಹಾರ ಸೇವನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಳ ಹಿಂದೆಯೇ ಧನಂಜಯ್ ಹಾಡಿನಲ್ಲಿ ಹೇಳಿಬಿಟ್ಟಿದ್ದಾರೆ.
ಇತ್ತೀಚೆಗೆ ನಾನ್‌ವೆಜ್ ಹೋಟೆಲ್ ಉದ್ಘಾಟನೆಗೆ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ದೊನ್ನೆ ಬಿರಿಯಾನಿ ಸೇರಿ ಮಾಂಸಾಹಾರದ ಖಾದ್ಯಗಳನ್ನು ಸವಿದಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಜಾತಿ ವಿಚಾರವನ್ನು ಕೆಲವರು ಪ್ರಸ್ತಾಪಿಸಿ ಧನಂಜಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಿಂಗಾಯತ ಸಮುದಾಯದವರಾಗಿದ್ದು ಪದೇ ಪದೆ ಬಸವಣ್ಣ ತತ್ವದ ಬಗ್ಗೆ ಮಾತನಾಡುವ ಧನಂಜಯ್ ಮಾಂಸಾಹಾರ ಸೇವಿಸಬಹುದಾ? ಎಂದು ಚಕಾರ ಎತ್ತುತ್ತಿದ್ದಾರೆ. ಆದರೆ ಬಹುತೇಕರು ಧನಂಜಯ್ ಬೆಂಬಲಕ್ಕೆ ನಿಂತಿದ್ದಾರೆ.

"ಊಟ ಪ್ರತಿಯೊಬ್ಬರ ವೈಯಕ್ತಿಕ ಹಕ್ಕು. ಅದರಲ್ಲಿ ಜಾತಿ ಎಳೆದು ತರುವುದು ಅಸಂಬದ್ಧ. ಇಂದಿನ ಕಾಲದಲ್ಲಿ ಯಾರೂ ಇಂತಹುದೇ ಆಹಾರ ತಿನ್ನಬೇಕೆಂಬ ನಿಯಮವಿಲ್ಲ" ಎಂದು ಸಾಕಷ್ಟು ಜನ ಧನಂಜಯ್ ಪರ ಮಾತನಾಡುತ್ತಿದ್ದಾರೆ. ನಾನು ಲಿಂಗಾಯತ, ಆದರೂ ಮಾಂಸಾಹಾರ ಸೇವಿಸುತ್ತೇನೆ ಅದರಲ್ಲಿ ತಪ್ಪೇನಿದೆ ಎಂದು ಕಾಮೆಂಟ್ ಮಾಡುವವರು ಇದ್ದಾರೆ. ಇದೆಲ್ಲದರ ನಡುವೆ ಸ್ವತಃ ಧನಂಜಯ್ ಬರೆದಿದ್ದ 'ಟಗರು ಪಲ್ಯ' ಚಿತ್ರದ ಹಾಡಿನ ಸಾಲುಗಳು ವೈರಲ್ ಆಗುತ್ತಿದೆ.
ಧನಂಜಯ್ ನಿರ್ಮಿಸಿದ್ದ 'ಟಗರು ಪಲ್ಯ' ಸಿನಿಮಾ 3 ವರ್ಷದ ಹಿಂದೆ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಕೂಡ ಟಗರನ್ನು ಮನೆ ದೇವರಿಗೆ ಬಲಿ ಕೊಡುವ ವಿಚಾರದ ಬಗ್ಗೆ ಚರ್ಚಿಸಲಾಗಿತ್ತು. ಚಿತ್ರದ 3 ಹಾಡುಗಳಿಗೆ ಧನಂಜಯ್ ಸಾಹಿತ್ಯ ಬರೆದಿದ್ದರು. ಇನ್ನು ಟೈಟಲ್ ಟ್ರ್ಯಾಕ್‌ನಲ್ಲಿ ಊಟದ ಅಭಿರುಚಿಗಳ ಬಗ್ಗೆ ಸಾಲುಗಳಿವೆ. 'ಬಾಡೇ ನಮ್ಮ ಗಾಡು' ಎಂದು ಧನಂಜಯ್ ಬರೆದಿರುವುದು ನೋಡಬಹುದು.
"ಚೆಂದ ಕೋಳಿ ಸಾರು.. ಅಷ್ಟೆ ಚೆಂದ ಕೀರು. ನನ್ನ ರುಚಿ ನಂದು.. ನಿನ್ನ ರುಚಿ ನಿಂದು. ಚೆಂದ ಸುಟ್ಟ ಮೀನು.. ಅಷ್ಟೆ ಚೆಂದ ಗಿಣ್ಣು.. ನನ್ನ ರುಚಿ ನಂದು ನಿನ್ನ ರುಚಿ ನಿಂದು.. ಬಾಡು ಬಾಡು ಬಾಡು ಬಾಡೇ ನಮ್ಮ ಹಾಡು.. ಬಾಡು ಬಾಡು ಬಾಡು ಬಾಡೇ ಗಾಡು.. ಹಸಿವು ದ್ಯಾವರಲ್ವ.. ಹಸಿರು ದ್ವಾವರಲ್ವ ರುಚಿಯು ದ್ವಾವರಲ್ಲವೇ?" ಎನ್ನುವ ಸಾಲುಗಳನ್ನು ಹಾಡಿನಲ್ಲಿ ಧನಂಜಯ್ ಬರೆದಿದ್ದರು. ಊಟದ ವಿಚಾರದಲ್ಲಿ ಅವರವರ ಅಭಿರುಚಿ ಅವರದ್ದು ಎಂದು ಧನು ಅಂದೇ ಹೇಳಿರುವುದು ಗೊತ್ತಾಗುತ್ತಿದೆ.
ಅಂದಹಾಗೆ ನಟ ಧನಂಜಯ್ ಮಾಂಸಾಹಾರ ಸೇವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮಾಂಸಾಹಾರ ಹೋಟೆಲ್‌ನಲ್ಲೇ ಕೂತು ಸಂದರ್ಶನದಲ್ಲಿ ಮಾತನಾಡಿದ್ದರು. ಆಗ ಕೂಡ ಅಲ್ಲಿ ನಾನ್ ವೆಜ್ ಖಾದ್ಯಗಳನ್ನು ಇಷ್ಟಪಟ್ಟು ಸೇವಿಸಿದ್ದರು. ಕೆಲ ಸಮುದಾಯದಲ್ಲಿ ಸಾಂಪ್ರದಾಯಿಕವಾಗಿ ಸಸ್ಯಾಹಾರ ಪದ್ಧತಿ ಇದೆ ಎಂಬ ನಂಬಿಕೆಯನ್ನಿಟ್ಟುಕೊಂಡು ಇಂತಹ ಪ್ರಶ್ನೆ ಕೇಳಿ ಟ್ರೋಲ್ ಮಾಡಲಾಗುತ್ತಿದೆ. ನಟರಾದ ವಿಷ್ಣುವರ್ಧನ್, ಶಂಕರ್ ನಾಗ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರೂ ಮಾಂಸಾಹಾರ ಸೇವಿಸುತ್ತಿದ್ದರು, ಇದರಲ್ಲಿ ತಪ್ಪೇನಿದೆ? ಅವರವರ ಆಹಾರ ಪದ್ಧತಿ ಅವರದ್ದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆ ಒಬ್ಬ ವ್ಯಕ್ತಿ ಅಥವಾ ಒಬ್ಬ ನಟ ತನ್ನ ಇಷ್ಟದ ಆಹಾರ ಸೇವಿಸುವುದನ್ನು ಕೂಡ ಪ್ರಶ್ನಿಸುವ ಮಟ್ಟಕ್ಕೆ ಕೆಲವರ ಮನಸ್ಥಿತಿ ಇಳಿದಿದೆ ಎನ್ನುವುದು ಬೇಸರದ ಸಂಗತಿ ಎಂದು ಚರ್ಚೆ ಆಗುತ್ತಿದೆ.


Click it and Unblock the Notifications











