ಮತ್ತೆ ಸಂಕಷ್ಟ; ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ
ನಟ ದರ್ಶನ್‌ಗೆ ಪದೇ ಪದೇ ಸಂಕಷ್ಟ ಎದುರಾಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ದರ್ಶನ್ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗುತ್ತಿದ್ದಾರೆ. 3 ದಿನಗಳ ಹಿಂದೆ ಕೂಡ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಪ್ರಕರಣದ 17 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಹಳೇ ಪ್ರಕರಣದಲ್ಲಿ ಇದೀಗ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಮನ್ಸ್ ಜಾರಿಯಾಗಿದೆ.
ಅಪರೂಪದ ಪಕ್ಷಿಗಳನ್ನು ಸಾಕಿದ್ದಕ್ಕಾಗಿ ನಟ ದರ್ಶನ್, ಪತ್ನಿ ವಿಜಯ ಲಕ್ಷ್ಮಿ ಹಾಗೂ ಫಾರ್ಮ್‌ಹೌಸ್ ವ್ಯವಸ್ಥಾಪಕ ನಾಗರಾಜ್ ವಿರುದ್ಧ ಎರಡು ವರ್ಷದ ಹಿಂದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡಬ್ಲ್ಯುಪಿಎನ ಶೆಡ್ಯೂಲ್ 2ರ ಅಡಿಯಲ್ಲಿ ಬರುವ 4 ಬಾರ್ ಹೆಡೆಡ್ ಬಾತುಗಳನ್ನು ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಿದ್ದರು. ಇದೇ ಅವರಿಗೆ ಸಂಕಷ್ಟ ತಂದೊಡ್ಡಿತ್ತು. ಆ ಪಕ್ಷಿಗಳನ್ನು ವಶಪಡಿಸಿಕೊಂಡಿದ್ದ ಅರಣ್ಯಾಧಿಕಾರಿಗಳು ನಂತರ ನ್ಯಾಯಾಲಯದ ಅನುಮತಿ ಪಡೆದು ಮೈಸೂರು ಸಮೀಪದ ಕೆರೆಗಳಲ್ಲಿ ಪಕ್ಷಿಗಳನ್ನು ಬಿಟ್ಟಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇದೀಗ ನ್ಯಾಯಾಲಯ ನಟ ದರ್ಶನ್, ಪತ್ನಿ ವಿಜಯ ಲಕ್ಷ್ಮಿ ಹಾಗೂ ಫಾರ್ಮ್‌ಹೌಸ್ ವ್ಯವಸ್ಥಾಪಕ ನಾಗರಾಜ್‌ಗೆ ನೋಟಿಸ್ ನೀಡಿದೆ. ಈ ಬಾತುಕೋಳಿಗಳನ್ನು ಸ್ನೇಹಿತರು ಉಡುಗೊರೆ ನೀಡಿದ್ದಾಗಿ ದರ್ಶನ್ ಸ್ಪಷ್ಟನೆ ನೀಡಿದ್ದರು. ಇನ್ನು ಟಿ. ನರಸೀಪುರದ ಸಿವಿಲ್ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು. ಇದೀಗ ಜುಲೈ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ನೀಡಿದೆ.
ಮೈಸೂರಿನ ಟೀ. ನರಸೀಪುರ ರಸ್ತೆಯಲ್ಲಿ ನಟ ದರ್ಶನ್ ಒಡೆತನ ಫಾರ್ಮ್‌ಹೌಸ್ ಇದೆ. ಪ್ರಾಣಿ- ಪಕ್ಷಿ ಪ್ರೇಮಿ ಆಗಿರುವ ದರ್ಶನ್ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಅಲ್ಲಿ ಸಾಕಿ ಸಲಹುತ್ತಿದ್ದಾರೆ. ವಿವಿಧ ಪ್ರಭೇದದ ಪಕ್ಷಿಗಳು ಅಲ್ಲಿವೆ. 2 ವರ್ಷದ ಹಿಂದೆ ದರ್ಶನ್ ಯೂಟ್ಯೂಬ್ ಚಾನಲ್‌ವೊಂದಕ್ಕೆ ತಮ್ಮ ಫಾರ್ಮ್‌ಹೌಸ್ ತೋರಿಸುತ್ತಾ ಒಂದು ಸಂದರ್ಶನ ನೀಡಿದ್ದರು. ಈ ವೇಳೆ 'ಬಾರ್ ಹೆಡೆಡ್ ಗೂಸ್' ಪಕ್ಷಗಳು ಅಲ್ಲಿರುವ ಬಗ್ಗೆ ಗೊತ್ತಾಗಿತ್ತು. ಬಳಿಕ ದೂರು ದಾಖಲಾಗಿ ತನಿಖೆ ನಡೆಸಲಾಗಿತ್ತು.
ಈಗಾಗಲೇ ತನಿಖೆ ನಡೆದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಕೂಡ ಸಲ್ಲಿಕೆ ಆಗಿದೆ ಎನ್ನಲಾಗ್ತಿದೆ. ಹಾಗಾಗಿ ಪ್ರಕರಣದ ವಿಚಾರಣೆ ಮುಂದುವರೆಯುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೊನ್ನೆ(ಮೇ 21) ನಡೆಯಬೇಕಿದ್ದ ಅರ್ಜಿ ವಿಚಾರಣೆ ಮುಂದೂಡಲಾಗಿತ್ತು. ಮೇ16ರಿಂದ ಜುಲೈ 13ರರವರೆಗೆ ಸುಪ್ರೀಂ ಕೋರ್ಟ್ ರಜೆ ಇರುತ್ತದೆ. ಹಾಗಾಗಿ ವಿಚಾರಣೆಯನ್ನು ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.
ಎರಡು ತಿಂಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ನಡೆಯುವುದಿಲ್ಲ. ಹಾಗಾಗಿ ನಟ ದರ್ಶನ್‌ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಆದರೆ ಮೇ 20ರಂದು ರೇಣುಕಾಸ್ವಾಮಿ ಪ್ರಕರಣ ಸಂಬಂಧ 132 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷಿಗಳನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಕಷ್ಟ ಇನ್ನು ತಪ್ಪಿಲ್ಲ. ಅದರ ನಡುವೆ ಫಾರ್ಮ್‌ಹೌಸ್‌ನಲ್ಲಿ 'ಬಾರ್ ಹೆಡೆಡ್ ಗೂಸ್' ಪಕ್ಷಿ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತಾಗಿದೆ. ಒಂದರ ಹಿಂದೆ ಒಂದು ಸಮಸ್ಯೆಗಳು ನಟ ದರ್ಶನ್‌ನ ಕಾಡುತ್ತಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಕೊಂಚ ಚೇತರಿಸಿಕೊಂಡಿದ್ದಾರೆ. 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ. ಮೊದಲಿನಂತೆ ಕಾರ್ಯಕ್ರಮ, ಪಾರ್ಟಿ ಎಂದು ಬ್ಯುಸಿಯಾಗುತ್ತಿದ್ದಾರೆ.


Click it and Unblock the Notifications











