"ನಮ್ಮ ಹುಡುಗರಿಂದ ತಪ್ಪಾಗಿಬಿಟ್ಟಿದೆ": ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ ಸಂಬಂಧ ವಿಚಾರಣೆಗೆ ದರ್ಶನ್ ಹಾಜರ್
ತಮ್ಮ ಮನೆಯ ನಾಯಿ ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪೊಲೀಸ್ ಠಾಣೆಗೆ ಹಾಜರಾಗಿದ್ಧಾರೆ. ಪ್ರಕರಣದಲ್ಲಿ A2 ಆಗಿರುವ ದರ್ಶನ್ ಆರ್ ಆರ್ ನಗರದ ಪೊಲೀಸ್ ಠಾಣೆಗೆ ಬಂದು ವಿಚಾರಣೆಯಲ್ಲಿ ಭಾಗಿದ್ದು ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದರ್ಶನ್ ಹೊರಟಿದ್ದಾರೆ.
"ಅವತ್ತು ನಾನು ಗುಜರಾತ್‌ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿದ್ದೆ. ನಮ್ಮ ಹುಡುಗರಿಂದ ತಪ್ಪಾಗಿಬಿಟ್ಟಿದೆ. ನಾನು ಮೊದಲೇ ಹೇಳಿದ್ದೇನೆ. ಮನೆಯ ಬಳಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಅಂತ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಿದ್ದೇನೆ. ಇನ್ನು ಮುಂದೆ ನಮ್ಮಿಂದ ಈ ರೀತಿ ಆಗಲ್ಲ. ನಮ್ಮ ಸಿಬ್ಬಂದಿಗಳಿಗೂ ಹೇಳಿದ್ದೇನೆ. ಸಿಸಿಟಿವಿ ವರ್ಕ್ ಆಗ್ತಿರಲಿಲ್ಲ.. ಘಟನೆ ಬಳಿಕ ಸಿಸಿಟಿವಿ ಮೈಂಟೇನ್ ಮಾಡುವಂತೆ ಹೇಳಿದ್ದೀನಿ" ಎಂದು ದರ್ಶನ್ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಆರ್ ಆರ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಎದುರು ದರ್ಶನ್ ಹೇಳಿಕೆ ನೀಡಿದ್ದಾರೆ. ದರ್ಶನ್ ಹೇಳಿಕೆ ದಾಖಲಿಸಿಕೊಂಡು, ಹೇಳಿಕೆ ಪ್ರತಿ ಸಹಿಗೆ ಹಾಕಿಸಿಕೊಂಡು ಇನ್ಸ್ ಪೆಕ್ಟರ್ ಕಳಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಸಿಸಿಟಿವಿ ಫೂಟೇಜ್ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಫುಟೇಜ್ ಪಡೆದು ಮುಂದೆ ಆರ್ ಆರ್ ನಗರ ಪೊಲೀಸರು ಚಾರ್ಜ್ ಶೀಟ್ ಹಾಕಲಿದ್ದಾರೆ. 15 ನಿಮಿಷಗಳ ವಿಚಾರಣೆ ಬಳಿಕ ಸ್ಟೇಷನ್ ಆವರಣಕ್ಕೆ ಜೀಪ್ ಕರೆಸಿಕೊಂಡು ದರ್ಶನ್ ಹೊರಟಿದ್ದಾರೆ.
ಅಕ್ಟೋಬರ್ 28ರಂದು ಅಮಿತಾ ಜಿಂದಾಲ್ ಎಂಬ ಮಹಿಳೆ ಎಂಬ ಮಹಿಳೆ ನಟ ದರ್ಶನ್ ನಿವಾಸದ ಬಳಿ ತೆರಳಿದ್ದರು. ಈ ವೇಳೆ ತಮ್ಮ ಕಾರನ್ನು ದರ್ಶನ್‌ರವರ ಮನೆಯ ಪಕ್ಕದ ಖಾಲಿ ಜಾಗದ ಎದುರು ರಸ್ತೆಯಲ್ಲಿ ನಿಲ್ಲಿಸಿದ್ದರು. ಆದರೆ ಕಾರು ಪಾರ್ಕಿಂಗ್ ವಿಚಾರಕ್ಕೆ ದರ್ಶನ್ ಮನೆ ಸಿಬ್ಬಂದಿ ಜೊತೆ ವಾಗ್ವಾದ ನಡೆದಿದೆ. ಬಳಿಕ ದರ್ಶನ್ ಮನೆ ನಾಯಿ ತನ್ನ ಮೇಲೆ ದಾಳಿ ಮಾಡಿ ಕಚ್ಚಿದೆ. ನಾಯಿಯನ್ನು ಹಿಡಿದುಕೊಳ್ಳಲು ಹೇಳಿದರೂ ಸಿಬ್ಬಂದಿ ಕೇಳಲಿಲ್ಲ, ಬಳಿಕ ನನ್ನನ್ನು ಆಸ್ಪತ್ರೆಗೂ ಸೇರಿಸಲಿಲ್ಲ ಎಂದು ಅಮಿತಾ ಜಿಂದಾಲ್ ದೂರು ದಾಖಲಿಸಿದ್ದರು.
ಎಫ್‌ಐಆರ್‌ನಲ್ಲಿ ದರ್ಶನ್ ಮನೆಯ ಸಿಬ್ಬಂದಿ ಹೇಮಂತ್ A1 ಹಾಗೂ ನಟ ದರ್ಶನ್ A2 ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ದೂರಿನ ಅನ್ವಯ ಇತ್ತೀಚೆಗೆ ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಇನ್ನು ಪ್ರಕರಣ ಸಂಬಂಧ ನಾಯಿಯನ್ನು ನೋಡಿಕೊಳ್ಳುವ ವ್ಯಕ್ತಿ ಹೇಮಂತ್ ವಿಚಾರಣೆ ನಡೆಸಿದ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ಗೆ ನೊಟೀಸ್ ನೀಡಿದ್ದರು. ಇದೀಗ ದರ್ಶನ್ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಯಲ್ಲಿ ಎದುರಿಸಿದ್ದಾರೆ. ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ವಿಚಾರಣೆಗಾಗಿ ಆರ್ ಆರ್ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ನಟ ದರ್ಶನ್ ನೋಡಲು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟನನ್ನು ನೋಡಿ ಜೈಕಾರ ಹಾಕಿದ್ದರು. ಸದಾ ಒಂದಿಲ್ಲೊಂದು ಕಾರಣಕ್ಕೆ ದರ್ಶನ್ ಸುದ್ದಿಯಾಗುತ್ತಲೇ ಇದ್ದಾರೆ. ಪದೇ ಪದೆ ವಿವಾದಗಳು ದರ್ಶನ್ ಸುತ್ತಾ ಸುತ್ತಿಕೊಳ್ಳುತ್ತಿವೆ. ತಮ್ಮದಲ್ಲದ ತಪ್ಪಿಗೂ ಕೆಲವೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ.
ಇತ್ತೀಚೆಗೆ ನಟ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಹೊಂದಿರುವ ಆರೋಪದಲ್ಲೂ ಸಮಸ್ಯೆ ಎದುರಾಗಿತ್ತು. ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಹೊಂದಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಇದರ ಬೆನ್ನಲ್ಲೇ ನಟ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಹಳೇ ಫೋಟೊ ವೈರಲ್ ಆಗಿತ್ತು. ಕೇಸ್ ದಾಖಲಿಸಿ ದರ್ಶನ್ ವಿರುದ್ಧ ಕೂಡ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.
ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ದರ್ಶನ್ ನಿವಾಸದಲ್ಲಿ ಒಂದಲ್ಲ ಎರಡಲ್ಲ 8ರಿಂದ 10 ಹುಲಿ ಉಗುರಿನ ಪೆಂಡೆಂಟ್ ಸಿಕ್ಕಿದ್ದವು, ಆದರೆ ಅದ್ಯಾವುದೂ ಅಸಲಿ ಅಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ರಿಲೀಸ್ ಆಗಿದೆ. 'ಕಾಟೇರ' ಚಿತ್ರೀಕರಣ ಕೊನೆ ಹಂತದಲ್ಲಿದೆ. ಬಳಿಕ ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಈಗಾಗಲೇ ಸರಳವಾಗಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. 'ಕಾಟೇರ' ಸಿನಿಮಾ ಬಳಿಕ 'ಡೆವಿಲ್' ಚಿತ್ರೀಕರಣ ಶುರುವಾಗಲಿದೆ.


Click it and Unblock the Notifications











