ಕರುನಾಡ ಪ್ರಜಾ ಪಕ್ಷದಿಂದ ರಾಜಕೀಯಕ್ಕೆ ಬಂದ ದರ್ಶನ್, ಕರ್ನಾಟಕದ ಮುಖ್ಯಮಂತ್ರಿಯಾದ ದಾಸ..!
ದರ್ಶನ್ ಅವರಂತಹ ನಂಬರ್ 1 ಹೀರೋ ಸುಮ್ಮನೆ ಕೂತರೆ ಅವರಿಗೆ ಮಾತ್ರ ಅಲ್ಲ ಇಡೀ ಚಿತ್ರರಂಗಕ್ಕೆ ನಷ್ಟ ಗ್ಯಾರೆಂಟಿ. ಯಾಕೆಂದರೆ ವರ್ಷಕ್ಕೆ ಎರಡು ಚಿತ್ರಗಳನ್ನು ಕಡ್ಡಾಯವಾಗಿ ಮಾಡುತ್ತಾ ಬಂದವರು ದರ್ಶನ್. ಆದರೆ ಕಳೆದ ವರ್ಷ ದುರಾದೃಷ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆನ್ನು ಹತ್ತಿತ್ತು. ಅ'ಪವಿತ್ರ' ಸಂಬಂಧ ಸೆರೆವಾಸ ಅನುಭವಿಸುವಂತೆ ಮಾಡಿತ್ತು. ಅಭಿಮಾನಿಗಳ ದುಃಖಕ್ಕೆ ಕಾರಣವೂ ಆಗಿತ್ತು.
ಇಂಥಾ ದರ್ಶನ್ ಒಂದಿಲ್ಲೊಂದು ದಿನ ರಾಜಕೀಯಕ್ಕೆ ಬಂದೇ ಬರುತ್ತಾರೆ ಎನ್ನುವ ಭವಿಷ್ಯವಾಣಿಯನ್ನು ಅರ್ಜುನ್ ಗುರೂಜಿ ಅವರನ್ನೊಳಗೊಂಡಂತೆ ಅನೇಕರು ಹೇಳಿದ್ದಾರೆ. ರಾಜಕೀಯದಲ್ಲಿ ದರ್ಶನ್ ಅವರಿಗೆ ಉಜ್ವಲವಾದ ಭವಿಷ್ಯ ಇದೆ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷಗಳೇ ದರ್ಶನ್ ಅವರ ದುಂಬಾಲು ಬೀಳುತ್ತಾವೆ ಎಂದು ಕೂಡ ಹೇಳಿದ್ದಾರೆ.

ಈ ಭವಿಷ್ಯ ಎಷ್ಟರ ಮಟ್ಟಿಗೆ ಸತ್ಯವಾಗಲಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಸದ್ಯ ದರ್ಶನ್ ನಿಜ ಜೀವನದಲ್ಲಿ ಅಲ್ಲ ಬದಲಿಗೆ ಚಿತ್ರದಲ್ಲಿ ಕರುನಾಡಿನ ಮುಖ್ಯಮಂತ್ರಿಯಾಗಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಜೈಲಿಂದ ಹೊರ ಬಂದ ದರ್ಶನ್ ಸದ್ಯ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಕೆಲ ದಿನಗಳ ಹಿಂದೆಯಷ್ಟೇ ರಾಜಸ್ಥಾನದಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಮರಳಿ ಬಂದಿದ್ದಾರೆ.
ಸದ್ಯ ಈ ಚಿತ್ರದ ಚಿತ್ರೀಕರಣದ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಲೀಕ್ ಆದ ಈ ಫೋಟೊದಲ್ಲಿ ದರ್ಶನ್ ಮುಖ್ಯಮಂತ್ರಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಸ್ತ ನಾಡಿನ ಜನತೆಗೆ ಕೈ ಮುಗಿದಿದ್ದಾರೆ.
ಇನ್ನು ಫೋಟೊ ಕೆಳಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂದು ಬರೆಯಲಾಗಿದ್ದು ದರ್ಶನ್ ಪಕ್ಷಕ್ಕೆ ಕರುನಾಡ ಪ್ರಜಾ ಪಕ್ಷ ಎಂದು ಹೆಸರನ್ನು ಇಡಲಾಗಿದೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಡೆವಿಲ್ ಚಿತ್ರವನ್ನು ಅನೇಕರು ಮಾಸ್ ಕಥೆಯನ್ನು ಹೊಂದಿರುವ ಚಿತ್ರ ಎಂದು ಅಂದುಕೊಂಡಿದ್ದರು. ದರ್ಶನ್ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ ಈಗ ದರ್ಶನ್ ಮುಖ್ಯಮಂತ್ರಿಯ ರೂಪದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಸಹಜವಾಗಿ ಇದರಿಂದ ಈಗ ಚಿತ್ರದ ಮೇಲಿನ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಎಲ್ಲಿಯ ಡಾನ್, ಎಲ್ಲಿಯ ಮುಖ್ಯಮಂತ್ರಿ, ಒಂದಕ್ಕೊಂದು ಏನು ಸಂಬಂಧ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ದರ್ಶನ್ ಅವರದ್ದು ಚಿತ್ರದಲ್ಲಿ ಡಬಲ್ ರೋಲಾ ಅಥವಾ ಹಣಬಲದಿಂದ ಅಧಿಕಾರದ ಬಲವನ್ನು ಡಾನ್ ಪಡೆಯುತ್ತಾನಾ ? ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಆ ನಂತರ ಡಾನ್ ಆಗುತ್ತಾನಾ ? ಎಂದೆಲ್ಲ ಕಥೆಯ ಕುರಿತು ದರ್ಶನ್ ಅಭಿಮಾನಿ ಬಳಗ ಚರ್ಚೆಯನ್ನು ಮಾಡುತ್ತಿದೆ.
ಇನ್ನುಳಿದಂತೆ ಜೈಲಿಂದ ಹೊರ ಬಂದ ನಂತರ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ದರ್ಶನ್, ಆ ನಂತರ ರಾಜಸ್ಥಾನಕ್ಕೆ ತೆರಳಿದ್ದರು. ಸದ್ಯ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇನ್ನು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೈ ಮಾತ ಕಂಬೈನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಡೆವಿಲ್ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











