ದರ್ಶನ್ ಅಭಿಮಾನಿಗಳಿಂದ ಅನಾಥಾಶ್ರಮಗಳಿಗೆ ದವಸ-ಧಾನ್ಯಗಳ ವಿತರಣೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನೆಚ್ಚಿನ ನಟನ ಹುಟ್ಟುಹಬ್ಬನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಈಗಾಗಲೆ ಸಿದ್ಧರಾಗುತ್ತಿದ್ದಾರೆ. ಹುಟ್ಟುಹಬ್ಬ ಅಂದ್ಮೇಲೆ ಅಭಿಮಾನಿಗಳು ಕೇಕ್, ಹಾರ, ಗಿಫ್ಟ್ ಗಳನ್ನು ತರುವುದು ಸಾಮಾನ್ಯ. ಆದರೆ ದರ್ಶನ್ ಇದ್ಯಾವುದನ್ನು ತರಬಾರದು ಎಂದು ಈಗಾಗಲೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಡಿ ಬಾಸ್ ಮನವಿ ಮಾಡಿಕೊಂಡಿದ್ದರು. ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಬದಲು ದವಸ ಧಾನ್ಯಗಳನ್ನು ತಂದು ಕೊಡಿ, ತಲುಪಬೇಕಾದ ಜಾಗಕ್ಕೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದರು. ಹಾಗಾಗಿ ಅಭಿಮಾನಿಗಳು ದವಸ ಧಾನ್ಯಗಳನ್ನು ತಂದು ದರ್ಶನ್ ಅವರಿಗೆ ತಲುಪಿಸುತ್ತಿದ್ದಾರೆ.
ದಚ್ಚು ಈ ಮಾತನ್ನು ಹೇಳುತ್ತಿದ್ದಂತೆ ಅಭಿಮಾನಿಗಳು ದವಸ-ಧಾನ್ಯಗಳನ್ನು ತಂದು ನೀಡುತ್ತಿದ್ದಾರೆ. ಅಕ್ಕಿ ಬೇಳೆ ಸೇರಿದಂತೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಭಿಮಾನಿಗಳು ತಂದು ನೀಡಿದ್ದ ದವಸ ಧಾನ್ಯಗಳ ಮೂಟೆಯ ರಾಶಿಯೆ ದರ್ಶನ್ ಮನೆಯಲ್ಲಿದೆ. ಅಭಿಮಾನಿಗಳು ತಂದು ನೀಡಿದ್ದ ರಾಶಿ ರಾಶಿ ಮೂಟೆಯನ್ನು ಈಗ ವಿತರಿಸುವ ಕೆಲಸ ನಡೆಯುತ್ತಿದೆ.

ಹೌದು, ಈಗ ಇದನ್ನೆಲ್ಲ ಸೇರಿಸಬೇಕಾದ ಜಾಗಕ್ಕೆ ಸೇರಿಸುವ ಕೆಲಸ ನಡೆಯುತ್ತಿದೆ. ಈಗಾಗಲೆ ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಆಹಾರದ ಅಗತ್ಯವಿರುವವರಿಗೆ ಇದನ್ನೆಲ್ಲ ನೀಡಲಾಗುತ್ತಿದೆ. ಅಭಿಮಾನಿಗಳು ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ಅಕ್ಕಿ, ಬೇಳೆ ಧಾನ್ಯಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಮಕ್ಕಳು ದರ್ಶನ್ ಅವರಿಗೆ ಧನ್ಯವಾದ ಹೇಳಿ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಇನ್ನು ವೃದ್ಧೆಯೊಬ್ಬರು ದರ್ಶನ್ ಅವರು ನಮಗೆ ಅನ್ನ ದಾನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನೂರು ವರ್ಷ ಚೆನ್ನಾಗಿ ಇರಲಿ ಎಂದು ಹರಿಸಿದ್ದಾರೆ. ಸಾಕಷ್ಟು ಕಡೆಗಳಿಗೆ ದವಸ ಧಾನ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಡಿ ಬಾಸ್ ಅಭಿಮಾನಿಗಳು.


Click it and Unblock the Notifications











