ಶಿಕ್ಷಕಿಗೆ ಅಶ್ಲೀಲ ಕಾಮೆಂಟ್, ಅತ್ಯಾಚಾರ ಬೆದರಿಕೆ; ದರ್ಶನ್ ಫ್ಯಾನ್ಸ್ ವಿರುದ್ಧ ಎಫ್‌ಐಆರ್
ನಟ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ ಎನ್ನುವ ಆರೋಪ ಕೇಳಿಬರುತ್ತಲೇ ಇರುತ್ತದೆ. ಈ ಹಿಂದೆ ನಟಿ ರಮ್ಯಾ ಹಾಗೂ ಸೋನು ಶೆಟ್ಟಿ ಈ ಬಗ್ಗೆ ದೂರು ನೀಡಿದ್ದರು. ಇದೀಗ ಸರ್ಕಾರಿ ಶಾಲಾ ಶಿಕ್ಷಕಿ ವಿರುದ್ಧ ಅಶ್ಲೀಲವಾಗಿ ಟ್ರೋಲ್ ಮಾಡಿ, ಅತ್ಯಾಚಾರದ ಬೆದರಿಕೆ ಹಾಕಿರುವ ಆರೋಪದಡಿ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ದಾಖಲಾಗಿರುವುದಾಗಿ ಟಿವಿ9 ವರದಿ ಮಾಡಿದೆ.
ಅಜಿತ್ ಆನಂದ್ ಹೆಗಡೆ ಎಂಬವವರು ದರ್ಶನ್ ಅಭಿಮಾನಿಗಳು ತಮ್ಮ ಪತ್ನಿ ವಿರುದ್ಧ ಟ್ರೋಲ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ. 4 ದಿನಗಳ ಹಿಂದೆ (ಸೆಪ್ಟೆಂಬರ್ 24) ತಮ್ಮ ಪತ್ನಿ ಪತ್ನಿ ವಿರುದ್ಧ 'ಖದರ್ ಕನ್ನಡಿಗ' ಎಂಬ ಫೇಸ್ ಬುಕ್ ಖಾತೆಯಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದರು. ಅನುಮತಿ ಇಲ್ಲದೆ ಮಕ್ಕಳ ಫೋಟೋಗಳನ್ನು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದರ್ಶನ್ ಅಭಿಮಾನಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದು ತಮ್ಮ ಪತ್ನಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದು ಈಗ ಜಾತಿಗಣತಿ ಕರ್ತವ್ಯ ನಿಭಾಯಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಮಾನಸಿಕವಾಗಿ ನಮ್ಮನ್ನು ಹಿಂಸಿಸುತ್ತಿದ್ದಾರೆ. ತಮ್ಮ ಪತ್ನಿಯ ಭದ್ರತೆ ಹಾಗೂ ಖಾಸಗಿತನಕ್ಕೆ ಧಕ್ಕೆಯಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕು ಎಂದು ದೂರುದಾರ ಅಜಿತ್ ಆಗ್ರಹಿಸಿದ್ದಾರೆ. ಈ ದೂರಿನ ಅನ್ವಯ 'ಖದರ್ ಕನ್ನಡಿಗ' ಫೇಸ್‌ಬುಕ್ ಪೇಜ್ ಸೇರಿ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಫೇಕ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿ ಕೆಲವರನ್ನು ಟ್ರೋಲ್ ಮಾಡುವ ಹುಚ್ಚಾಟ ಮೆರೆಯುತ್ತಿದ್ದಾರೆ. ಈ ಹಿಂದೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಗಜಪಡೆ ಎಂಬ ಟ್ವಿಟರ್ ಖಾತೆಯಲ್ಲಿ ಇದೇ ರೀತಿ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಅದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸಿಎಂ ಸಿದ್ಧರಾಮಯ್ಯ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಸಾಕಷ್ಟು ನಟ, ನಟಿಯರು ಸೋಶಿಯಲ್ ಮೀಡಿಯಾದಲ್ಲಿ ತಮಗೆ ಎದುರಾಗುತ್ತಿರುವ ಕಿರುಕುಳದ ಬಗ್ಗೆ ಮಾತನಾಡುತ್ತಾ ಬರ್ತಿದ್ದಾರೆ. ಸೈಬರ್ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಇದಕ್ಕೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಕಿಡಿಗೇಡಿಗಳ ಉಪಟಳ ಹೆಚ್ಚುತ್ತಲೇ ಇದೆ. ಈ ಹಿಂದೆ ನಟಿ ರಮ್ಯಾ ನೇರವಾಗಿಯೇ ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ದೂರು ನೀಡಿದ್ದರು. ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಬುದ್ಧಿ ಕಲಿಸಿದ್ದರು.
"ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ" ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೇ ಆಕೆಯನ್ನು ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡಿದ್ದರು. ಟ್ರೋಲ್ ಮಾಡಿದ್ದು ಮಾತ್ರವಲ್ಲ ಇನ್‌ಸ್ಟಾಗ್ರಾಮ್‌ನಲ್ಲಿ ನೇರವಾಗಿ ಆಕೆಗೆ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸಿದ್ದರು. ಅದನ್ನು ಸ್ಕ್ರೀನ್‌ಶಾಟ್ ಸಮೇತ ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.
ಸೆಲೆಬ್ರೆಟಿಗಳು ಮಾತ್ರವಲ್ಲ ಸಾಮಾನ್ಯ ಜನರನ್ನು ಟ್ರೋಲ್ ಮಾಡುವ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಕಾನೂನಿನ ಭಯವಿಲ್ಲದೇ ಕೆಲವರು ಅಟ್ಟಹಾಸ ಮೆರೆಯುತ್ತಿದ್ದಾರೆ. 2 ವರ್ಷಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆಯೂ ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಸಂಬಂಧ ಇತ್ತೀಚೆಗೆ ದೂರು ದಾಖಲಾಗಿತ್ತು. ಆದರೆ ವಿಚಾರಣೆಗೆ ವಿಜಯಲಕ್ಷ್ಮಿ ಆಸಕ್ತಿ ತೋರಿಸಿರಲಿಲ್ಲ.


Click it and Unblock the Notifications











