ವೀಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್‌ಗೆ ದರ್ಶನ್ & ಗ್ಯಾಂಗ್ ಹಾಜರ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೂನ್ 11ರಂದು ನಟ ದರ್ಶನ್ ಬಂಧನವಾಗಿತ್ತು. 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ಬಳಿಕ ಎಸಿಎಂಎಂ ನ್ಯಾಯಾಲಯ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇಂದು(ಜುಲೈ 4) ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು. ಇದೀಗ ಮತ್ತೆ ಕೋರ್ಟ್ 14 ದಿನಗಳ ಕಾಲ ಅಂದರೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದೆ. ಹೀಗಾಗಿ ಸದ್ಯಕ್ಕೆ ದರ್ಶನ್ & ಗ್ಯಾಂಗ್‌ಗೆ ಜೈಲೇ ಗತಿ ಎನ್ನುವಂತಾಗಿದೆ.

ಎಲ್ಲಾ ಆರೋಪಿಗಳು ಒಂದೇ ಕಡೆ ಇರುವುದು ಸೂಕ್ತವಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಈ ಹಿಂದೆ ಕೋರ್ಟ್‌ಗೆ ಮನವಿ ಮಾಡಿದ್ದರು. ಹಾಗಾಗಿ ಕೋರ್ಟ್ ವಿಚಾರಣೆ ನಡೆಸಿ ಆರೋಪಿಗಳಾದ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಮತ್ತು ರವಿಶಂಕರ್ ಅವರನ್ನ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಿತ್ತು. ಇದೀಗ ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ಎದುರು ಹಾಜರಾಗಿದ್ದರು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದ ಆರ್ಥಿಕ ಅಪರಾಧಗಳ ಕೋರ್ಟ್ ಆದೇಶ ನೀಡಿದೆ.
ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ರಿಮ್ಯಾಂಡ್ ಅರ್ಜಿ ಸಲ್ಲಿಸಲಾಗಿತ್ತು. ಇದರಲ್ಲಿ 15 ಕಾರಣಗಳನ್ನು ನೀಡಲಾಗಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿಹಾಕಿ ಆರೋಪಿಗಳು ಥಳಿಸಿದ್ದರು. ಬಹಳ ಚಿತ್ರಹಿಂಸೆ ಕೊಡಲಾಗಿದ್ದು ಈ ವೇಳೆ ಆತ ಮೃತಪಟ್ಟಿದ್ದಾನೆ. ಬಳಿಕ ಶವವನ್ನು ಸುಮನಹಳ್ಳಿ ರಿಂಗ್ ರೋಡ್ ಬಳಿ ಎಸೆಯಲಾಗಿತ್ತು.
ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ವೇಳೆಗೆ ಕೆಲವರು ನಾವೇ ಕೊಲೆ ಮಾಡಿದ್ದು ಎಂದು ಪೊಲೀಸರಿಗೆ ಶರಣಾಗಿದ್ದರು. ಆದರೆ ಹೆಚ್ಚಿನ ವಿಚಾರಣೆ ವೇಳೆ ರೇಣುಕಾಸ್ವಾಮಿ ಹತ್ಯೆ ಅಸಲಿ ಸತ್ಯ ಹೊರಬಿದ್ದಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಮೈಸೂರಿನಲ್ಲಿ ನಟ ದರ್ಶನ್ ವಶಕ್ಕೆ ಪಡೆದಿದ್ದರು. ಕೂಡಲೇ ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಬಳಿಕ ಪವಿತ್ರಾ ಗೌಡ ಸೇರಿದಂತೆ ಇನ್ನುಳಿದ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿತ್ತು.

ದರ್ಶನ್ ಜೈಲಿನಿಂದ ಬಿಡುಗಡೆ ಆಗಬೇಕು ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ಕೂಡ ವಕೀಲರ ಮೂಲಕ ಬೇಲ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕೆಲ ಆಪ್ತರು ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಭೇಟಿ ಮಾಡಿ ಬಂದಿದ್ದಾರೆ. ಘಟನೆ ಬಗ್ಗೆ ಕನ್ನಡ ಸಿನಿಮಾ ತಾರೆಯರು ಪ್ರತಿಕ್ರಿಯಿಸಿದ್ದಾರೆ. ನಟ ಸುಮಲತಾ ಸುದೀರ್ಘ ಪತ್ರ ಬರೆದು ಮೌನ ಮುರಿದಿದ್ದಾರೆ.
ಮತ್ತೊಂದು ಕಡೆ ದರ್ಶನ್‌ಗೆ ಸಿನಿಮಾ ಮಾಡಲು ಅಡ್ವಾನ್ಸ್ ನೀಡಿರುವ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಷ್ಟು ಬೇಗ ದರ್ಶನ್ ಹೊರಬಂದು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಶೀಘ್ರದಲ್ಲೇ ದರ್ಶನ್ ಹೊರಗೆ ಬರುತ್ತಾರೆ ಎನ್ನುವ ಆಶಾಭಾವನೆ ಕೆಲ ನಿರ್ಮಾಪಕರಲ್ಲಿದೆ.


Click it and Unblock the Notifications











