ಪ್ರಾಣಿಗಳನ್ನು 'ಶೂಟ್' ಮಾಡಬೇಕೆ? ಹಾಗಿದ್ದರೆ ದರ್ಶನ್ ಮಾತು ಕೇಳಿ
ನಟ ದರ್ಶನ್ ಎಷ್ಟು ದೊಡ್ಡ ನಟರೊ ಅಷ್ಟೆ ಕಾಳಜಿಯುಳ್ಳ ಪ್ರಾಣಿ ಪ್ರೇಮಿ. ತಮ್ಮದೇ ಆದ ಫಾರಂ ಹೌಸ್ ಹೊಂದಿರುವ ದರ್ಶನ್ ಅಲ್ಲಿ ಹಲವು ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ತಾವೇ ಅವುಗಳ ಆರೈಕೆಯನ್ನೂ ಮಾಡುತ್ತಾರೆ.
ಸಾಕು ಪ್ರಾಣಿಗಳ ಬಗ್ಗೆ ಮಾತ್ರವಲ್ಲ ವನ್ಯ ಜೀವಿಗಳ ಬಗ್ಗೆಯೂ ದರ್ಶನ್‌ಗೆ ಅಪಾರ ಕಾಳಜಿ, ಆಗಾಗ್ಗೆ ಅರಣ್ಯಗಳಿಗೆ ತೆರಳಿ ಪ್ರಾಣಿ ಪಕ್ಷಿಗಳ ಫೊಟೊಗ್ರಫಿ ಮಾಡುವುದು ದರ್ಶನ್‌ರ ಮೆಚ್ಚಿನ ಹವ್ಯಾಸ.
Recommended Video
ಕೇವಲ ಬಾಯಿ ಮಾತಿನ ಪ್ರಾಣಿ ಪ್ರೇಮಿಯಾಗದ ನಟ ದರ್ಶನ್, ಅಗತ್ಯ ಬಂದಾಗ ಪ್ರಾಣಿಗಳ ರಕ್ಷಣೆಗೆ ನಿಂತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಪ್ರಕಟಿಸಿದ್ದು ಪ್ರಕೃತಿ ಹಾಗೂ ವನ್ಯಜೀವಿಗಳ ಬಗ್ಗೆ ಮೌಲಿಕ ಸಂದೇಶ ನೀಡಿದ್ದಾರೆ.

''ಪ್ರಾಣಿಗಳನ್ನು ಶೂಟ್ ಮಾಡಬೇಕೆ ಹಾಗಿದ್ದರೆ ಕ್ಯಾಮೆರಾಗಳನ್ನು ಬಳಸಿ'' ಎಂದಿದ್ದಾರೆ ದರ್ಶನ್, ಆ ಮೂಲಕ ಪ್ರಾಣಿಗಳನ್ನು ಮೋಜಿಗಾಗಿ ಕೊಲ್ಲುವುದನ್ನು ವಿರೋಧಿಸಿದ್ದಾರೆ. ಸಂದೇಶದ ಜೊತೆಗೆ ತಾವೇ ಕ್ಲಿಕ್ಕಿಸಿರುವ ವನ್ಯಜೀವಿಗಳ ಕೆಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
''ವನ್ಯಜೀವಿಯನ್ನು ಉಳಿಸಿ ಅಥವಾ ಹಾಗೆಯೇ ಬಿಟ್ಟುಬಿಡಿ. ವನ್ಯಜೀವಿ ಒಂದು ಅದ್ಭುತ ಪ್ರಕೃತಿ ಸಂಪತ್ತು ಅದನ್ನು ನಿಮ್ಮ ಸಂತೋಶಕ್ಕಾಗಿ ಉಳಿಸಿ. ವನ್ಯಜೀವಿಗಳ ಬಗ್ಗೆ ಒಳ್ಳೆಯದು ಯೋಚಿಸಿ, ಒಳ್ಳೆಯದು ಮಾಡಿ, ವನ್ಯಜೀವಿಗಳಿಗೆ ಒಳ್ಳೆಯವರಾಗಿ ಇರಿ'' ಎಂದು ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.
ದರ್ಶನ್ ಕೇವಲ ಬಾಯಿ ಮಾತಿನ ಪ್ರಾಣಿ ಪ್ರೇಮಿಯಲ್ಲ ಈ ಹಿಂದೆ ಹಲವು ಬಾರಿ ಅದನ್ನು ಸಾಬೀತುಪಡಿಸಿದ್ದಾರೆ. ಕಳೆದ ಬಾರಿ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮೃಗಾಲಯಗಳು ಬಂದ್ ಆಗಿ ವೀಕ್ಷಕರಿಲ್ಲದೆ ಪ್ರಾಣಿಗಳಿಗೆ ಊಟ ಕೊಡುವುದಕ್ಕೂ ಹಣ ವಿಲ್ಲದೇ ಹೋದಾಗ ದರ್ಶನ್ ತಮ್ಮ ಅಭಿಮಾನಿಗಳಿಗೆ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಕರೆ ನೀಡಿದ್ದರು. ಅವರ ಒಂದು ಕರೆಯಿಂದ ರಾಜ್ಯದಲ್ಲಿದ್ದ ಎಲ್ಲ ಮೃಗಾಲಯಗಳ ಬಹುತೇಕ ಪ್ರಾಣಿಗಳನ್ನು ಅವರ ಅಭಿಮಾನಿಗಳು, ಪ್ರಾಣಿ ಪ್ರೇಮಿಗಳು ದತ್ತು ಪಡೆದುಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದರು.
ಇದು ಮಾತ್ರವೇ ಅಲ್ಲದೆ ತಾವು ತೆಗೆಯುವ ವನ್ಯಜೀವಿಗಳ ಚಿತ್ರಗಳನ್ನು ಮಾರಾಟ ಮಾಡುವ ದರ್ಶನ್ ಅದರಿಂದ ಬಂದ ಹಣವನ್ನು ವನ್ಯಜೀವಿಗಳ ಅಭಿವೃದ್ಧಿಗೆಂದು ಸರ್ಕಾರಕ್ಕೆ ದೇಣಿಗೆ ನೀಡಿಬಿಡುತ್ತಾರೆ. ಈ ಕಾರ್ಯವನ್ನು ಕೆಲವು ವರ್ಷಗಳಿಂದಲೂ ಅವರು ಮಾಡುತ್ತಾ ಬಂದಿದ್ದಾರೆ.
ದರ್ಶನ್ ಇದೀಗ 'ಕ್ರಾಂತಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಶಿಕ್ಷಣದ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ.


Click it and Unblock the Notifications











