'ಕಾಟೇರ'ನ ಜೊತೆ ತೂಗುದೀಪ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ: ಚಂದು ಹಿನ್ನೆಲೆ ಏನು?
ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದೇನು ಅಲ್ಲ. ಹಲವು ದಶಕಗಳಿಂದ ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೂ ಈ ಪರಂಪರೆ ಮುಂದುವರೆದಿದೆ. ಕೆಲವರು ನೆಪೊಟಿಸಂ ಎಂದು ಟೀಕಿಸಿದರೂ ಕೂಡ ತಾರೆಯರ ಮಕ್ಕಳು, ಮೊಮ್ಮಕ್ಕಳು, ಕುಟುಂಬ ಸದಸ್ಯರು ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಲೇ ಇದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮಧ್ಯರಾತ್ರಿಯಿಂದಲೇ ಸಿನಿಮಾ ತೆರೆಗಪ್ಪಳಿಸಲಿದೆ. ದರ್ಶನ್ ಜೊತೆಗೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈ ವಾರ ರಾಜ್ಯಾದ್ಯಂತ ಸಿನಿಮಾ ಬಹಳ ಅದ್ದೂರಿಗೆ ತೆರೆಗೆ ಬರಲಿದೆ.

'ಕಾಟೇರ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಬೆಳ್ಳಿ ಪರದೆ ಮೇಲೆ ತಮ್ಮನ್ನು ತಾವು ನೋಡಿಕೊಳ್ಳಲು ಕಾಯುತ್ತಿದ್ದಾರೆ. ಸಿದ್ದೇಶ್ವರ ಚಿತ್ರಮಂದಿರದಲ್ಲಿ ಚಿತ್ರದ ಮಧ್ಯರಾತ್ರಿ 12 ಗಂಟೆ ಶೋನ ಮೊದಲ ಟಿಕೆಟ್ ಖರೀದಿಸಿದ್ದಾರೆ. ಆರಾಧನಾ ಜೊತೆ ಮತ್ತೆ ಕೆಲವರು ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಡುತ್ತಿದ್ದಾರೆ.
ನಟ ದರ್ಶನ್ ಸಹೋದರಿ ದಿವ್ಯಾ ಅವರ ಪುತ್ರ ಚಂದು 'ಕಾಟೇರ' ಚಿತ್ರದಿಂದ ಚಂದನವನಕ್ಕೆ ಆರಂಗೇಟ್ರಂ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕ ದರ್ಶನ್ ಟೀನೇಜ್ ದಿನಗಳಲ್ಲಿ ಚಂದು ನಟಿಸಿದ್ದಾರೆ. ಈ ಸಿನಿಮಾ ಮೂಲಕ ಚಂದು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್ ಬಳಿಕ ಆ ಕುಟುಂಬದಿಂದ ದರ್ಶನ್ ಹಾಗೂ ದಿನಕರ್ ಚಿತ್ರರಂಗಕ್ಕೆ ಬಂದಿದ್ದರು. ಇದೀಗ ಮತ್ತೊಂದು ತಲೆಮಾರಿನ ಸಿನಿಪಯಣ ಆರಂಭವಾಗುತ್ತಿದೆ.

ಇದಕ್ಕೂ ಮುನ್ನ ದರ್ಶನ್ ಸೋದರಳಿಯ ಮನೋಜ್ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದರು. 'ಟಕ್ಕರ್' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಇನ್ನು ದರ್ಶನ್ ಪುತ್ರ ವಿನೀಶ್ 'ಮಿ. ಐರಾವತ' ಹಾಗೂ 'ಯಜಮಾನ' ಚಿತ್ರದ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದ. ಇದೀಗ ಚಂದು ಸರದಿ. ದರ್ಶನ್ ಸಹೋದರಿ ಪುತ್ರ ಚಂದು ಬಹಳ ದಿನಗಳಿಂದ ಚಿತ್ರರಂಗಕ್ಕೆ ಬರುವ ಕನಸು ಕಂಡಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿಯನ್ನು ಸಹ ನಡೆಸಿದ್ದಾರೆ.
ಕಲಾವಿದರು ಕ್ಯಾಮರಾ ಎದುರಿಸುವ ಮುನ್ನ ಕ್ಯಾಮರಾ ಹಿಂದೆ ಸಿನಿಮಾವನ್ನು ನೋಡಬೇಕು. ಬಳಿಕ ಮುಂದೆ ಬರಬೇಕು ಎನ್ನುವುದು ದರ್ಶನ್ ನೀಡುವ ಸಲಹೆ. ತಾವು ಕೂಡ ಲೈಟ್ ಬಾಯ್ ಆಗಿ ಬಳಿಕ ಕ್ಯಾಮರಾ ಅಸಿಸ್ಟಿಂಟ್ ಆಗಿ ಕೆಲಸ ಮಾಡಿ ಕೊನೆಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದರು. ಮುಂದೆ ಹೀರೊ ಆಗಿಯೂ ಗೆದ್ದರು. ಯಾರೇ ಚಿತ್ರರಂಗಕ್ಕೆ ಬರಬೇಕು ಎಂದು ದರ್ಶನ್ ಬಳಿ ಹೋದರೂ ಅವರಿಗೂ ಚಾಲೆಂಜಿಂಗ್ ಸ್ಟಾರ್ ಇದನ್ನೇ ಹೇಳುತ್ತಾರೆ.
ಚಂದು ಕೂಡ ಚಿತ್ರರಂಗಕ್ಕೆ ಬರಬೇಕು ಎಂದಾಗ ದರ್ಶನ್ ಮೊದಲು ಇದನ್ನೇ ಹೇಳಿದ್ದರು. ಮೊದಲು ತಮ್ಮ ಸಿನಿಮಾಗಳಲ್ಲಿ ಸಹಾಯಕನಾಗಿ ಕೆಲಸ ಮಾಡಲು ಹೇಳಿದ್ದರು. ಸಿನಿಮಾ ಎಬಿಸಿಡಿ ಎಲ್ಲಾ ಕಲಿತ ಮೇಲೆ ನಟನೆ ಎಂದಿದ್ದರು. ಅದರಂತೆ 'ಕ್ರಾಂತಿ' ಚಿತ್ರದಲ್ಲಿ ತೆರೆ ಹಿಂದೆ ಚಂದು ಕೆಲಸ ಮಾಡಿದ್ದರು. 'ಕಾಟೇರ' ಚಿತ್ರದಲ್ಲಿ ತೆರೆಹಿಂದೆ ತೆರೆಮುಂದೆಯೂ ಕಾಣಿಸಿಕೊಂಡಿದ್ದಾರೆ. 'ಕಾಟೇರ' ಚಿತ್ರದಲ್ಲಿ ಚಂದು ಪಾತ್ರವನ್ನು ತರುಣ್ ಸುಧೀರ್ ಸೀಕ್ರೆಟ್ ಆಗಿಯೇ ಇಟ್ಟಿದ್ದರು.
'ಕಾಟೇರ' ಚಿತ್ರದ 'ಅನುರಾಗವ ಕಲಿಸಲು' ಮೆಲೋಡಿ ಸಾಂಗ್ ರಿಲೀಸ್ ಆಗಿದೆ. ಯೋಗರಾಜ್ ಭಟ್ ಸಾಹಿತ್ಯದ ಹಾಡನ್ನು ವಾಣಿ ಹರಿಕೃಷ್ಣ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಚಂದು ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ನಾಯಕ ನಾಯಕಿಯರ ಟೀನೇಜ್ ಲವ್ ಸ್ಟೋರಿಯನ್ನು ತೋರಿಸಲಾಗಿತ್ತು. ಆ ಭಾಗದಲ್ಲಿ ಚಂದು ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ. ಸಿನಿಮಾದಲ್ಲೂ ಆ ಪಾತ್ರ ಇರುತ್ತಾ? ಇದ್ದರೆ ಎಷ್ಟು ಹೊತ್ತು? ಎನ್ನುವ ಪ್ರಶ್ನೆಗಳಿಗೆಲ್ಲಾ ಶೀಘ್ರದಲ್ಲೇ ಉತ್ತರ ಸಿಗಲಿದೆ. ಇನ್ನು ಈಗಾಗಲೇ ವಿಜಯಲಕ್ಷ್ಮಿ ದರ್ಶನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಚಂದುಗೆ ಶುಭ ಹಾರೈಸಿದ್ದಾರೆ.


Click it and Unblock the Notifications











