ವೈರಲ್ ಫೋಟೊ, ವೀಡಿಯೋ ಕಾಲ್ ಬಗ್ಗೆ ವಿಚಾರಣೆ ವೇಳೆ ನಟ ದರ್ಶನ್ ಹೇಳಿದ್ದೇನು?
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ನಟ ದರ್ಶನ್‌ನನ್ನು ಈಗಾಗಲೇ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಜೈಲಿನಲ್ಲಿ ನಟೋರಿಯಸ್ ರೌಡಿಗಳ ಜೊತೆ ದರ್ಶನ್ ಕೂತು ಮಾತನಾಡುತ್ತಾ ಸಿಗರೇಟ್ ಸೇದುತ್ತಿದ್ದ ಫೋಟೊ, ವೀಡಿಯೋ ಕಾಲ್‌ನಲ್ಲಿ ಮಾತನಾಡಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ನಟ ದರ್ಶನ್ ಜೈಲು ನಿಯಮಗಳನ್ನು ಉಲ್ಲಂಘಿಸಲು ಜೈಲು ಸಿಬ್ಬಂದಿಯೇ ಸಹಕರಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈಗಾಗಲೇ 9 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ಫೋಟೊ, ವೀಡಿಯೋ ಸಂಬಂಧ 3 ಎಫ್‌ಐಆರ್ ಸಹ ದಾಖಲಾಗಿದೆ. ಎರಡರಲ್ಲಿ ದರ್ಶನ್ ಎ1 ಆಗಿದ್ದಾರೆ. ಇದೇ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ದರ್ಶನ್ ವಿಚಾರಣೆ ನಡೆಸಿದ್ದಾರೆ.

ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಎದುರಿಸಿರುವ ದರ್ಶನ್ ಈ ಜೈಲು ರಾಜಾತಿಥ್ಯದ ಬಗ್ಗೆಯೂ ವಿಚಾರಣೆಗೆ ಗುರಿಯಾಗಿದ್ದರು. ಈಗಾಗಲೇ ಒಂದು ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಾಗಾಗಿ ಹೊಸ ಎಫ್‌ಐಆರ್ ಸಂಬಂಧ ವಿಚಾರಣೆ ನಡೆಸಲು ಪೊಲೀಸರು ಕೋರ್ಟ್‌ನಿಂದ ವಿಶೇಷ ಅನುಮತಿ ಪಡೆದಿದ್ದರು.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವತ್ತು ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಅದೇ ದಿನ ಈ ಘಟನೆ ನಡೆದಿದೆ. "ಅವತ್ತು ನಾನು ರಚಿತಾ ರಾಮ್ ಅವರನ್ನು ಭೇಟಿ ಮಾಡಿ ವಾಪಸ್ ಬರುತ್ತಿದ್ದೆ. ಈ ವೇಳೆ ನಾಗನ ಗ್ಯಾಂಗ್‌ನವರು ಅಲ್ಲಿ ಕ್ರಿಕೆಟ್ ಆಡುತ್ತಿದ್ದರು"

"ನಾಗ ಅವನ ಹುಡುಗರು ಕ್ರಿಕೆಟ್ ಆಡುವುದನ್ನು ನೋಡುತ್ತಾ ಕುಳಿತ್ತಿದ್ದ. ನನ್ನನ್ನು ಕರೆದರು. ಆಗ ನಾನು ಚೇರ್ ಮೇಲೆ ಹೋಗಿ ಕುಳಿತುಕೊಂಡೆ. ಬಳಿಕ ನಾಗನ ಹುಡುಗರು ಸಿಗರೇಟ್ ಹಾಗೂ ಟೀ ತಂದುಕೊಟ್ಟರು. ಅಷ್ಟೇ, ಆ ಫೋಟೊ ಯಾರು ತೆಗೆದರು ಎನ್ನುವುದು ನನಗೆ ಗೊತ್ತಿಲ್ಲ. ಅಷ್ಟೇ ನಡೆದಿದ್ದು. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ" ಎಂದು ದರ್ಶನ್ ಹೇಳಿದ್ದಾರೆ.
ಇನ್ನು ವೈರಲ್ ವೀಡಿಯೋ ಕಾಲ್ ಬಗ್ಗೆ ದರ್ಶಣ್ ವಿಚಾರಣೆ ವೇಳೆ ಸ್ಪಷ್ಟನೆ ನೀಡಿದ್ದಾರೆ. "ಒಬ್ಬರು ವೀಡಿಯೋ ಕಾಲ್‌ನಲ್ಲಿ ಮಾತನಾಡಿಕೊಂಡೇ ನನ್ನ ಬಳಿ ಬಂದರು. ದರ್ಶನ್ ಸರ್ ಇಲ್ಲದೇ ಇದ್ದಾರೆ ನೋಡು ಎನ್ನುತ್ತಾ ನನ್ನ ಕಡೆಗೆ ಮೊಬೈಲ್ ತಿರುಗಿಸಿದ್ದರು. ಆಗ ನಾನು ವಿಶ್ ಮಾಡಿದೆ ಅಷ್ಟೇ. ನಾನು ಯಾವುದೇ ಮೊಬೈಲ್ ಬಳಕೆ ಮಾಡುತ್ತಿಲ್ಲ. ನನ್ನ ಬಳಿ ಮೊಬೈಲ್ ಫೋನ್ ಇಲ್ಲ" ಎಂದು ತಿಳಿಸಿರುವುದಾಗಿ ಸುದ್ದಿಯಾಗಿದೆ.
ಜೈಲಿನಲ್ಲಿ ದರ್ಶನ್ ಅಂಡ್ ಟೀಂ ಜಾಲಿ ಮಾಡುತ್ತಿರುವುದು ಸುದ್ದಿ ಆಗುತ್ತಿದ್ದಂತೆ ಎಲ್ಲರನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಒಬ್ಬೊಬ್ಬರಾಗಿ ಬೇರೆ ಬೇರೆ ಜೈಲುಗಳಿಗೆ ಹೋಗುತ್ತಿದ್ದಾರೆ. ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಸೆಪ್ಟೆಂಬರ್ 9ರವರೆಗೆ ಮುಂದುವರೆದಿದೆ.
ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ(ಆಗಸ್ಟ್ 28) ಆರೋಪಿಗಳನ್ನು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿತು.


Click it and Unblock the Notifications











