ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ, ಗುಬ್ಬಿ ಮೇಲೆ ದರ್ಶನ್ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು ನ್ಯಾಯವೆ ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ಅವರದ್ದು. ಆದರೆ ಈಗ ಈ ಇರಾದೆ ಬದಲಾದಂತೆ ಇದೆ. ಬೇರೆಯವರ ಕಥೆ ಹಾಗಿರಲಿ ತಮ್ಮ ಮನೆಯ ಮಕ್ಕಳನ್ನೇ ಬೆಳೆಸದಿರಲು ದರ್ಶನ್ ನಿರ್ಧಾರ ಮಾಡಿದ್ದಾರೆ.
ಹೌದು, ಅಪ್ಪ ಸ್ಟಾರ್ ಆದರೆ ಮಗನೂ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿ ಆಗುವುದು ಕಾಮನ್ನು. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ. ರಾಜಕೀಯ ಗೊತ್ತಿಲ್ಲದಿದ್ದರೂ ರಾಜಕಾರಣಕ್ಕೆ ಬರುತ್ತಾರೆ. ಅಭಿನಯದ ಗಂಧ ಗಾಳಿ ಗೊತ್ತಿಲ್ಲದಿದ್ದರೂ ಸ್ಟಾರ್ ಆಗುವ ಕನಸು ಕಾಣುತ್ತಾರೆ.

ಆದರೆ ದರ್ಶನ್ ಅವರ ಅಕ್ಕನ ಮಗ ಚಂದು ಇದಕ್ಕೆ ತದ್ವಿರುದ್ದ. ಯಾಕೆಂದರೆ ದರ್ಶನ್ ಹೆಸರು ಬಳಿಸಿಕೊಂಡು ಅಥವಾ ದರ್ಶನ್ ಅವರ ಬೆಂಬಲವನ್ನು ಪಡೆದು ಚಂದು ಯಾವತ್ತೋ ಸ್ಟಾರ್ ಆಗಬಹುದಿತ್ತು. ಆದರೆ, ನೋಡಲು ಸ್ಫುರದ್ರೂಪಿಯಾಗಿರುವ ಚಂದು ಏಕಾಏಕಿ ನಾಯಕನಾಗದೇ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆಯನ್ನು ಇಡುತ್ತಿದ್ದಾರೆ. ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಅದ್ಯಾರೋ ಮಾಡಿದ ತಪ್ಪಿಗೆ ತಮ್ಮ ಅಕ್ಕನ ಮಗ ಚಂದುಗೆ ಶಿಕ್ಷೆಯನ್ನು ದರ್ಶನ್ ನೀಡಿದ್ದಾರೆ.
ಹೌದು, ಅಸಲಿಗೆ ದರ್ಶನ್ ಜೈಲು ಪಾಲಾದಾಗ ಚಂದು, ವಿಜಯಲಕ್ಷ್ಮಿ ಅವರ ನೆರಳಾಗಿದ್ದರು. ಸಹಾಯಕ್ಕೆ ನಿಂತಿದ್ದರು. ಹೀಗಾಗಿ ಚಂದು ಕಂಡರೆ ದರ್ಶನ್ ಅವರ ಅಭಿಮಾನಿಗಳಿಗೆ ವಿಶೇಷವಾದ ಪ್ರೀತಿ. ಆದರೆ ಅಭಿಮಾನಿಗಳಿ ಈ ಪ್ರೀತಿಯೇ ಚಂದುಗೆ ಈಗ ಮುಳ್ಳಾಗಿದೆ. ಯಾಕೆಂದರೆ ದರ್ಶನ್ ಅಭಿಮಾನಿಯೊಬ್ಬನ ಎಡವಟ್ಟಿನಿಂದ ಡೆವಿಲ್ ಚಿತ್ರದಲ್ಲಿ ಚಂದು ಅವಕಾಶ ಕಳೆದುಕೊಂಡಿದ್ದಾರೆ. ಬೇರೆ ಯಾರು ಅಲ್ಲ ಬದಲಿಗೆ ಖುದ್ದು ದರ್ಶನ್ ನಿರ್ದಯವಾಗಿ ತಮ್ಮ ಅಕ್ಕನ ಮಗ ಚಂದುನ ತಮ್ಮ ಚಿತ್ರದಿಂದ ಹೊರ ಹಾಕಿದ್ದಾರೆ. ಖಡಕ್ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದ್ದಾರೆ. ಚಂದು ಕಾಲಿಗೆ ಬಿದ್ದರೆ ನನ್ನ ಹೃದಯದಲ್ಲಿ ನೀವು ಸ್ಥಾನ ಪಡೆಯಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಕೇವಲ ನಿಮ್ಮ ಭ್ರಮೆ ಮಾತ್ರ ಎಂಬರ್ಥದಲ್ಲಿ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ದರ್ಶನ್ '''ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ ಆದ್ದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ, ಚಂದು ಅಥವಾ ನನ್ನ ಮಗ ವಿನೀಶ್‌ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ." ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಅವರ ಈ ಬರಹ, ಮನದ ಮಾತು, ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಯಾರೋ ಮಾಡಿದ ತಪ್ಪಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಎಷ್ಟು ಸರಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಜಾ ಕೆಲವರು ಜೈ ಜೈ ಎಂದು ದರ್ಶನ್ ಅವರ ಈ ನಿರ್ಧಾರವನ್ನು ಕೂಡ ಸಮರ್ಥಿಸಿಕೊಂಡಿದ್ದಾರೆ. ಆದರೆ ಬಹುತೇಕರು ಚಂದು ಪರ ವಕಾಲತ್ತು ವಹಿಸಿದ್ದಾರೆ. ನೀವೆ ಜೀವ ನೀವೆ ಜೀವನ ಎಂದು ನಂಬಿರುವ ಜೀವ ಅದು ಸಾಧ್ಯವಾದರೆ ಕ್ಷಮಿಸಿ ಎಂದು ಹೇಳಿದ್ದಾರೆ. ಅವಕಾಶವನ್ನು ನೀಡಿ ಮತ್ತೆ ಕಿತ್ಕೋಬೇಡಿ ಎಂದು ಕೂಡ ದರ್ಶನ್ ಅವರಿಗೆ ಹೇಳಿದ್ಧಾರೆ. ಆದರೆ ಎಲ್ಲರಿಗೆ ಗೊತ್ತು ದರ್ಶನ್ ನಡೆದಿದ್ದೇ ದಾರಿ. ಹೀಗಾಗಿ ಚಿತ್ರರಂಗದಲ್ಲಿ ಚಂದು ಉಳಿಯಬೇಕು ಇನ್ನೂ ಬೆಳೆಯಬೇಕು ಅಂದರೆ ಬೆವರು ಸುರಿಸಬೇಕು.


Click it and Unblock the Notifications











