ಅಗಲಿದ ಆಪ್ತ ಸ್ನೇಹಿತ ಪಿ.ಎನ್.ಸತ್ಯ ಬಗ್ಗೆ ನಟ ದರ್ಶನ್ ನುಡಿ
Recommended Video

ಸ್ಯಾಂಡಲ್ ವುಡ್ ನ ಮಾಸ್ ನಿರ್ದೇಶಕ ಎಂದೇ ಹೆಸರು ಮಾಡಿದ್ದ ನಿರ್ದೇಶಕ ಪಿ.ಎನ್.ಸತ್ಯ ನಿನ್ನೆ (ಭಾನುವಾರ) ಸಂಜೆ 7.30ರ ಸುಮಾರಿಗೆ ವಿಧಿವಶರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪಿ.ಎನ್.ಸತ್ಯ ಅವರಿಗೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಸತ್ಯ ನಿಧನರಾದರು.
ಕನ್ನಡ ಚಿತ್ರರಂಗ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಿದೆ. ಇನ್ನು ಪಿ.ಎನ್.ಸತ್ಯ ಸಾವಿನ ಸುದ್ದಿ ಕೇಳಿ ಎಲ್ಲರೂ ಕಣ್ಣೀರು ಹಾಕಿದ್ದಾರೆ. ನಟ ದರ್ಶನ್ ಕೂಡ ಆಪ್ತ ಸ್ನೇಹಿತನ ಅಗಲಿಕೆಯ ನಂತರ ದುಖಃದಲ್ಲಿ ಇದ್ದಾರೆ. ತಮಗೆ ಹೀರೋ ಪಟ್ಟ ನೀಡಿದ್ದ ಗೆಳೆಯ ಪಿ.ಎನ್.ಸತ್ಯ ಅವರ ನಿಧನದಿಂದ ದರ್ಶನ್ ತುಂಬ ಬೇಸರಗೊಂಡಿದ್ದಾರೆ.
ಅಂದಹಾಗೆ, ನಟ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪಿ.ಎನ್.ಸತ್ಯ ಅವರಿಗೆ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ..
ಆತ್ಮಕ್ಕೆ ಶಾಂತಿ ಸಿಗಲಿ
ದರ್ಶನ್ ತಮ್ಮ ಗೆಳೆಯ ಪಿ.ಎನ್.ಸತ್ಯ ಅವರ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ನಾಲ್ಕು ಸಾಲು ಬರೆದುಕೊಂಡಿದ್ದಾರೆ. ''ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ ‘ಮೆಜೆಸ್ಟಿಕ್' ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ರವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ದರ್ಶನ್ ಗೆ ಹೀರೋ ಪಟ್ಟ ಕೊಟ್ಟಿದ್ದ ಸತ್ಯ
ಚಿಕ್ಕ ಪುಟ್ಟ ಪಾತ್ರ ಮಾಡುತ್ತಿದ್ದ ದರ್ಶನ್ ಅವರಿಗೆ ಮೊದಲು ಹೀರೋ ಪಟ್ಟ ನೀಡಿದ್ದು ಪಿ.ಎನ್.ಸತ್ಯ. ದರ್ಶನ್ ನಟನೆಯ ಮೊದಲ ಸಿನಿಮಾ 'ಮೆಜೆಸ್ಟಿಕ್' ಚಿತ್ರವನ್ನು ಪಿ.ಎನ್.ಸತ್ಯ ಅವರೇ ನಿರ್ದೇಶನ ಮಾಡಿದ್ದರು. ಇದು ದರ್ಶನ್ ಗೆ ಮಾತ್ರವಲ್ಲದೆ ಪಿ.ಎನ್.ಸತ್ಯ ಅವರಿಗೆ ಸಹ ಮೊದಲ ಸಿನಿಮಾ ಆಗಿತ್ತು. ಈ ಚಿತ್ರದ ಮೂಲಕ ದರ್ಶನ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ, ಸತ್ಯ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು.

ದರ್ಶನ್ ಜೊತೆಗೆ ಐದು ಸಿನಿಮಾ
'ಮೆಜೆಸ್ಟಿಕ್' ಚಿತ್ರದ ಮೂಲಕ ಶುರು ಆದ ಪಿ.ಎನ್.ಸತ್ಯ ಮತ್ತು ದರ್ಶನ್ ಕಾಂಬಿನೇಶನ್ ಮುಂದೆ ಯಶಸ್ವಿಯಾಗಿ ಮುಂದುವರೆಯಿತು. 'ದಾಸ', 'ಶಾಸ್ತ್ರಿ', 'ಸರ್ದಾರ', 'ತಂಗಿಗಾಗಿ' ಚಿತ್ರಗಳು ಸತ್ಯ ಮತ್ತು ದರ್ಶನ್ ಜೋಡಿಯ ಸಿನಿಮಾಗಳಾಗಿವೆ.

ಅಂತಿಮ ದರ್ಶನ ಪಡೆಯಲಿದ್ದಾರೆ ದರ್ಶನ್
ಇನ್ನು ಪಿ.ಎನ್.ಸತ್ಯ ಅವರ ಮೃತ ದೇಹದ ಅಂತಿಮ ದರ್ಶನ ವ್ಯವಸ್ಥೆಯನ್ನು ಅವರ ಸಹೋದರಿಯ ಮನೆಯಲ್ಲಿ ಮಾಡಲಾಗಿದೆ. ನಟ ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಕನ್ನಡದ ಹಲವು ನಟ ನಟಿಯರು ಅಂತಿಮ ದರ್ಶನ ಪಡೆಯಲಿದ್ದಾರೆ.

ಅಂತ್ಯ ಸಂಸ್ಕಾರ ಎಲ್ಲಿ?
ಪಿ.ಎನ್.ಸತ್ಯ ಅವರ ಮೃತ ದೇಹವನ್ನು ಅಂತಿಮ ದರ್ಶನಕ್ಕಾಗಿ 11.30ರ ವರೆಗೆ ಇಡಲಾಗುವುದು. ಆ ಬಳಿಕ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಮದ್ಯಾಹ್ನ 3 ಗಂಟೆಗೆ ಬನಶಂಕರಿಯ ಹಿಂದೂ ರುಧ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.


Click it and Unblock the Notifications











