ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಬಿಗ್ ರಿಲೀಫ್
ನಟ ದರ್ಶನ್ ಜೈಲು ಸೇರಿ ಬರೋಬ್ಬರಿ 4 ತಿಂಗಳು ಕಳೆದಿದೆ. ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಮತ್ತೊಂದು ಕಡೆ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿರುವುದಾಗಿ ಹೇಳಲಾಗ್ತಿದೆ. ಇತ್ತೀಚೆಗೆ ಪ್ರಕರಣದಲ್ಲಿ ಜಾಮೀನು ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರ ನಿರೀಕ್ಷೆ ಹುಸಿಯಾಗಿತ್ತು.
ಅಭಿಮಾನಿಗಳು ಕೂಡ ನಟ ದರ್ಶನ್ ಬೇಗ ಜೈಲಿನಿಂದ ಹೊರ ಬರಲು ಎಂದು ಪ್ರಾರ್ಥಿಸುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ವಕೀಲರ ಮೂಲಕ ಕಾನೂನು ಹೋರಾಟ ಮುಂದುವರೆಸಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸೋಮವಾರ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ದರ್ಶನ್ ಸೇರಿದಂತೆ 6 ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯ ಆದೇಶ ಹೊರಬಿದ್ದಿತ್ತು. ಇಬ್ಬರಿಗೆ ಮಾತ್ರ ಜಾಮೀನು ಸಿಕ್ಕಿತ್ತು.

ಜಾಮೀನು ಸಿಗದೆ, ಬೆನ್ನು ನೋವಿನ ಸಮಸ್ಯೆ ನಿವಾರಣೆ ಇಲ್ಲದೇ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಬಳಲುತ್ತಿದ್ದಾರೆ. ಇದು ಅಭಿಮಾನಿಗಳಿಗೂ ಬೇಸರ ತಂದಿದೆ. ನಿನ್ನೆಯಷ್ಟೆ(ಅಕ್ಟೋಬರ್ 18) 9ನೇ ಬಾರಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿ ದರ್ಶನ್ ಭೇಟಿ ಮಾಡಿದರು. ಈ ವೇಳೆ ದರ್ಶನ್ ಸಹೋದರ ದಿನಕರ್ ಕೂಡ ಜೊತೆಗಿದ್ದರು. ಸಂದರ್ಶಕರ ಕೊಠಡಿಯಲ್ಲಿ ಕೆಲ ನಿಮಿಷ ಮಾತುಕತೆ ನಡೆಸಿದ್ದರು.
ಸೆಷನ್ ಕೋರ್ಟ್‌ನಲ್ಲಿ ಜಾಮೀನು ಯಾಕೆ ಸಿಗಲಿಲ್ಲ, ಮುಂದೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಬಗ್ಗೆ ಈ ವೇಳೆ ದರ್ಶನ್ ಜೊತೆ ವಿಜಯಲಕ್ಷ್ಮಿ ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಕೂಡ ತಮ್ಮ ಬೆನ್ನು ನೋವಿನ ಸಮಸ್ಯೆ, ಜೈಲಿನಲ್ಲಿ ಮೆಡಿಕಲ್ ಬೆಡ್, ದಿಂಬು ಸಿಕ್ಕಿರುವ ಬಗ್ಗೆ ಪತ್ನಿ ಜೊತೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ದರ್ಶನ್ ಪರ ವಕೀಲರು ಮೆಡಿಕಲ್ ರಿಪೋರ್ಟ್ ಪಡೆದು ಮುಂದೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಲೆಕ್ಕಾಚಾರದಲ್ಲಿದ್ದಾರೆ.
ಸದ್ಯ ನಟ ದರ್ಶನ್‌ಗೆ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ ಎಂದು ವರದಿಯಾಗಿದೆ. ದರ್ಶನ್ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿತ್ತು. ಈಗ ಅವರು ಇರುವ ಜೈಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿಯೇ ಥೆರೆಪಿ ಮಾಡಿದ್ದು ಕೊಂಚ ರಿಲೀಫ್ ಸಿಕ್ಕಿದೆ ಎನ್ನಲಾಗ್ತಿದೆ. ಬುಧವಾರವೇ ಫಿಜಿಯೋಥೆರೆಪಿ ಮಾಡಿ ಆರಂಭವಾಗಬೇಕಿತ್ತು. ಆದರೆ ಎರಡು ದಿನ ತಡವಾಗಿದೆ.
ಕೆಲ ದಿನಗಳ ಹಿಂದೆ ನ್ಯೂರೋ & ಆರ್ಥೋಪಿಡಿಷನ್ ವೈದ್ಯರು ದರ್ಶನ್‌ಗೆ ಸ್ಕ್ಯಾನಿಂಗ್ ಮಾಡಿದ್ದರು. ಬಳಿಕ ಫಿಜಿಯೋಥೆರಪಿ ಹಾಗೂ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದ್ದರು. ಬೆಂಗಳೂರಿನಲ್ಲೇ ಶಸ್ತ್ರ ಚಿಕಿತ್ಸೆ ಮಾಡಿಸುವುದಾಗಿ ದರ್ಶನ್ ಹೇಳುತ್ತಾ ಬರ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಸದ್ಯಕ್ಕೆ ಫಿಜಿಯೋಥೆರಪಿ ಆರಂಭಿಸಲಾಗಿದೆ.
ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಬಹಳ ಹಿಂದೆಯೇ ತಿಳಿದುಬಂದಿತ್ತು. ಬಳ್ಳಾರಿ ಜೈಲಿನಲ್ಲಿರುಬ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರಲು ಕಷ್ಟವಾಗುತ್ತದೆ ಎಂದು ಹೇಳಿದ್ದರು. ಸರ್ಜಿಕಲ್ ಚೇರ್ ಕೇಳಿದ್ದರು. ವೈದ್ಯರು ತಪಾಸಣೆ ನಡೆಸಿ ವರದಿ ನೀಡದ ಬಳಿಕ ಜೈಲು ಅಧಿಕಾರಿಗಳು ಸರ್ಜಿಕಲ್ ಚೇರ್ ಪೂರೈಕೆ ಮಾಡಿದ್ದರು.
ಇತ್ತೀಚೆಗೆ ದರ್ಶನ್ ಕುಟುಂಬ ಸದಸ್ಯರ ಭೇಟಿ ಮಾಡಲು ಸೆಲ್‌ನಿಂದ ಬಂದು ವಾಪಸ್ ತೆರಳುವಾಗ ತಿಂಡಿ ತಿನಿಸುಗಳ ಬ್ಯಾಗ್ ಹಿಡಿದು ನಡೆಯಲು ಕಷ್ಟಪಟ್ಟ ವೀಡಿಯೋ ವೈರಲ್ ಆಗಿತ್ತು. ಈ ವೇಳೆ ದರ್ಶನ್ ಬೆನ್ನು ನೋವಿನ ಬಗ್ಗೆ ತಿಳಿದು ಅಭಿಮಾನಿಗಳು ಬೇಸರಗೊಂಡಿದ್ದರು.


Click it and Unblock the Notifications











