ದರ್ಶನ್ ಅವರ ಮತ್ತೊಂದು ಆಸೆಯನ್ನು ಈಡೇರಿಸುತ್ತಾರಾ ಮುನಿರತ್ನ?
Recommended Video

ನಟ ದರ್ಶನ್ 'ಯಜಮಾನ' ಸಿನಿಮಾದ ಸಂತಸದಲ್ಲಿ ಇದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಈ ಸಿನಿಮಾಗೆ ಎಲ್ಲ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್ ನಟನೆ, ಡೈಲಾಗ್, ಸಿನಿಮಾದ ಸಂದೇಶ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಮನರಂಜನೆ ನೀಡುತ್ತಿದೆ.
'ಯಜಮಾನ' ಸಿನಿಮಾದ ನಂತರ 'ಕುರುಕ್ಷೇತ್ರ' ಸಿನಿಮಾ ಕೂಡ ಇದೇ ವರ್ಷ ಬಿಡುಗಡೆಯಾಗುತ್ತಿದೆ. ಇದು ದರ್ಶನ್ ಅಭಿನಯದ 50ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಮುನಿರತ್ನ. ತಮ್ಮ ಕನಸಿನ ಸಿನಿಮಾವನ್ನು ದರ್ಶನ್ ಜೊತೆಗೆ ಮುನಿರತ್ನ ಮಾಡಿದ್ದಾರೆ.
'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್ ದುರ್ಯೋದನ ಪಾತ್ರ ಮಾಡುತ್ತಿದ್ದಾರೆ. ಇದರ ನಂತರ ಮತ್ತೊಂದು ಮಹತ್ವದ ಪಾತ್ರವನ್ನು ದರ್ಶನ್ ಮಾಡುವ ಇಚ್ಛೆಯನ್ನು ತಿಳಿಸಿದ್ದಾರೆ. ಮುಂದೆ ಓದಿ...

ಶ್ರೀಕೃಷ್ಣದೇವರಾಯ ಪಾತ್ರ ಮಾಡುವ ಆಸೆ
ನಟ ದರ್ಶನ್ ಗೆ ವಿಜಯನಗರದ ದೊರೆ ಶ್ರೀಕೃಷ್ಣದೇವರಾಯರ ಪಾತ್ರವನ್ನು ಮಾಡುವ ಆಸೆಯಂತೆ. ಇದನ್ನು ಸ್ವತಃ ದರ್ಶನ್ ಅವರೇ ಹೇಳಿದ್ದಾರೆ. ಹಂಪಿ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್ ಶ್ರೀಕೃಷ್ಣದೇವರಾಯರ ಪಾತ್ರ ಮಾಡುವ ಬಯಕೆ ತಿಳಿಸಿದ್ದಾರೆ.

ಮುನಿರತ್ನ ಅವಕಾಶ ನೀಡಿದರೆ ಸಿನಿಮಾ ಮಾಡುತ್ತೇನೆ
ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದ ದರ್ಶನ್ ಇದೇ ಮೊದಲ ಬಾರಿಗೆ ಹಂಪಿಗೆ ಬಂದಿದ್ದರಂತೆ. ಈ ವೇಳೆ ಸುದ್ದಿಗಾರರು ಶ್ರೀಕೃಷ್ಣ ದೇವರಾಯರ ಬಗ್ಗೆ ಸಿನಿಮಾ ಮಾಡುತ್ತೀರ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಿದ ದರ್ಶನ್ ಮುನಿರತ್ನ ಅವರು ಅವಕಾಶ ನೀಡಿದರೆ ಖಂಡಿತ ಮಾಡುತ್ತೇನೆ ಎಂದರು.

ಸಿನಿಮಾ ಮಾಡುವುದು ಪಕ್ಕಾ ಎಂದ ಮುನಿರತ್ನ
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಮುನಿರತ್ನ ''ಶ್ರೀಕೃಷ್ಣ ದೇವರಾಯರ ಬಗ್ಗೆ ಶಾಲಾ ದಿನಗಳಿಂದನೇ ಓದಿದ್ದೇವೆ. ಮುತ್ತು ರತ್ನ ಎಲ್ಲವನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದರು. ನ್ಯಾಯ, ನೀತಿ, ಧರ್ಮ ಅಲ್ಲಿ ಉಳಿದಿತ್ತು. ಇಂತಹ ಶ್ರೀಕೃಷ್ಣದೇವರಾಯರ ಬಗ್ಗೆ ಸಿನಿಮಾ ಮಾಡುವ ಆಸೆ ಇದೆ. ಖಂಡಿತ ಮಾಡುತ್ತೇನೆ'' ಎಂದರು.

ಐತಿಹಾಸಿಕ ಚಿತ್ರಗಳಲ್ಲಿ ದರ್ಶನ್
ಮುನಿರತ್ನ ಅವರ ಶ್ರೀಕೃಷ್ಣದೇವರಾಯ ಸಿನಿಮಾದಲ್ಲಿ ದರ್ಶನ್ ನಾಯಕರಾಗಿರುತ್ತಾರೆಯೇ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ. ಆದರೆ, ಐತಿಹಾಸಿಕ ಸಿನಿಮಾಗಳಿಗೆ ದರ್ಶನ್ ಉತ್ತಮ ಆಯ್ಕೆ. ಈ ಹಿಂದೆಯೇ ಅಂತಹ ಪಾತ್ರಗಳಲ್ಲಿ ತಮ್ಮ ನಟನೆಯ ಮೂಲಕ ದರ್ಶನ್ ಮೆಚ್ಚಗೆ ಪಡೆದಿದ್ದಾರೆ.


Click it and Unblock the Notifications











