ದಯವಿಟ್ಟು ಕ್ಷಮಿಸಿ, ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ, ಮನೆಯಲ್ಲೂ ಇರಲ್ಲ: ಧನಂಜಯ್
ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ನಟ ಧನಂಜಯ್ ಈ ಬಾರಿ ಹುಟ್ಟುಹಬ್ಬ ಅಚರಿಸದಿರಲು ನಿರ್ಧರಿಸಿದ್ದಾರೆ. ವಿಡಿಯೋ ಬೈಟ್ ಮೂಲಕ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಧನಂಜಯ್ ಮಂಗಳವಾರ(ಆಗಸ್ಟ್ 23) 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
"ನನ್ನ ಅಭಿಮಾನಿಗಳು, ಪ್ರೀತಿ ಪಾತ್ರರೆಲ್ಲರಿಗೂ ನಮಸ್ಕಾರ. ಬಹಳ ಖುಷಿಯಾಗುತ್ತದೆ. ನನ್ನ ಹುಟ್ಟುಹಬ್ಬ ಅಂದಾಕ್ಷಣ ತುಂಬಾ ಹಿಂದಿನಿಂದಲೇ ಸೆಲೆಬ್ರೆಷನ್ ಶುರು ಮಾಡುತ್ತೀರಾ. ಬೆಂಗಳೂರಿನಲ್ಲೂ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಎಲ್ಲಾ ನಡೆಸಿದ್ರೆ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಡೆಸಿದ್ದೀರಾ. ನನಗೂ ನಿಮ್ಮೊಟ್ಟಿಗೆ ಸೇರಿ ಹುಟ್ಟುಹಬ್ಬ ಆಚರಿಸಲು ಆಸೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣ ಸೆಲೆಬ್ರೇಟ್ ಮಾಡಲು ಸಾಧ್ಯವಾಗಲಿಲ್ಲ. ಈ ವರ್ಷ ಕೂಡ ಬರ್ತ್‌ಡೇ ಸೆಲೆಬ್ರೆಷನ್ ಮಾಡುವ ಪರಿಸ್ಥಿತಿಯಲ್ಲಿ ನಾನು ಕೂಡ ಇಲ್ಲ. ನಮ್ಮ ನಾಡು ಕೂಡ ಇಲ್ಲ. ಯಾಕೆಂದರೆ ಅಪ್ಪು ಅವರು ಅಗಲಿ ಇನ್ನು ವರ್ಷ ಕೂಡ ಆಗಿಲ್ಲ. ಶಿವಣ್ಣ ಸೇರಿದಂತೆ ಯಾರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಹಾಗಾಗಿ ಈ ವರ್ಷ ಕೂಡ ಬರ್ತ್‌ಡೇ ಆಚರಣೆ ಇರಲ್ಲ. ಹೇಗೆ ಎರಡು ವರ್ಷ ಕ್ಷಮಿಸಿ ಪ್ರೀತಿಸಿದ್ರೋ ಹಂಗೆ ಈ ವರ್ಷ ಕೂಡ ಕ್ಷಮಿಸಿ. ಮುಂದಿನ ವರ್ಷ ಎಲ್ಲರೂ ಸೇರಿ ಬರ್ತ್‌ಡೇ ಆಚರಿಸೋಣ" ಎಂದು ಧನಂಜಯ ಹೇಳಿದ್ದಾರೆ.
"ಮುಂದಿನ ವರ್ಷ ಒಳ್ಳೆ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸೋಣ. ನಾನು ಕೂಡ ನಿಮ್ಮ ಜೊತೆ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ. ಹಾಗಾಗಿ ಈ ವರ್ಷ ಎಲ್ಲಿದ್ದಿರೋ ಅಲ್ಲಿಂದಲೇ ಶುಭಾಶಯ ಕೋರಿ. ನನ್ನ ಹುಟ್ಟುಹಬ್ಬಕ್ಕೆ ತರುತ್ತಿದ್ದ ಕೇಕ್, ಹಾರ, ಶಾಲೂ ಮತ್ತೊಂದು ಎಲ್ಲದಕ್ಕೂ ಖರ್ಚು ಮಾಡುತ್ತಿದ್ದ ದುಡ್ಡಲ್ಲಿ ಒಂದಿಷ್ಟು ಅವಶ್ಯಕ ಇರುವ ಜೀವಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಅದರ ಮೂಲಕ ಹುಟ್ಟುಹಬ್ಬ ಆಚರಿಸೋಣ. ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತದೆ. ನಿಮ್ಮನ್ನು ಕಾಯುತ್ತದೆ. ಈ ವರ್ಷ ಬರ್ತ್‌ಡೇ ಆಚರಣೆ ಇರಲ್ಲ. ನಾನು ಸಹ ಬೆಂಗಳೂರಿನಲ್ಲಿ ಇರುವುದಿಲ್ಲ. ಮನೆ ಬಳಿ ಸಿಗುವುದಕ್ಕೂ ಆಗುವುದಿಲ್ಲ. ನಾನು ಆ ದಿನ ಸ್ನೇಹಿತರ ಜೊತೆ ಹೊರಗೆ ಹೋಗುತ್ತಿದ್ದೇನೆ. ಖಂಡಿತ ಹುಟ್ಟುಹಬ್ಬ ಮುಗಿದ ಮೇಲೆ ಯಾವುದಾದರೂ ಕಾರ್ಯಕ್ರಮದಲ್ಲಿ ಎಲ್ಲರೂ ಸಿಗೋಣ. ಥ್ಯಾಂಕ್ಯೂ" ಎಂದಿದ್ದಾರೆ.

ಸದ್ಯ ಧನಂಜಯ 'ಹೆಡ್‌ಬುಷ್' ಚಿತ್ರವನ್ನು ನಿರ್ಮಿಸಿ ನಟಿಸಿದ್ದಾರೆ. ಈ ಚಿತ್ರದ ಹಾಡು ಹುಟ್ಟುಹಬ್ಬದ ಸಂಭ್ರಮದಲ್ಲೇ ರಿಲೀಸ್ ಆಗ್ತಿದೆ. ಇನ್ನು 'ಹೊಯ್ಸಳ' ಚಿತ್ರದ ಸ್ಪೆಷಲ್ ಪೋಸ್ಟರ್ ಕೂಡ ಬರಲಿದೆ. ತಮಿಳಿನಲ್ಲಿ ಒಂದು ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. 'ಪುಷ್ಪ'-2 ಸಿನಿಮಾ ಶೂಟಿಂಗ್ , ಲಜಯ 67ತ ಶುರುವಾಗಬೇಕಿದೆ. ಇನ್ನುಳಿದಂತೆ 'ಮಾನ್ಸೂನ್ ರಾಗ', 'ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ', 'ತೋತಾಪುರಿ' ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಕಾಮನ್ ಡಿಪಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ.


Click it and Unblock the Notifications











