ಸಿನಿಮಾಗಳಲ್ಲಿ ಆಫರ್ ಇಲ್ಲ.. ಚೆನ್ನೈನಲ್ಲಿ ಕೆಲಸಕ್ಕೆ ಸೇರ್ಕೊಂಡಿದ್ದ ಧರ್ಮ ಕೀರ್ತಿರಾಜ್
ಕನ್ನಡ ಚಿತ್ರರಂಗದ ಅದ್ಬುತ ಕಲಾವಿದರಲ್ಲಿ ಕೀರ್ತಿರಾಜ್ ಕೂಡ ಒಬ್ಬರು. ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದವರು. ಹಾಗೇ ಅವರ ಪುತ್ರ ಧರ್ಮ ಕೀರ್ತಿರಾಜ್ ಕನ್ನಡ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಧರ್ಮ ಕೀರ್ತಿರಾಜ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 16 ವರ್ಷಗಳಾಗಿವೆ. ದರ್ಶನ್ ನಟಿಸಿದ 'ನವಗ್ರಹ' ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಕಣ್ ಕಣ್ಣ ಸಲಿಗೆ ಅಂತ ಚಾಕೊಲೇಟ್ ಬಾಯ್ ಇಮೇಜ್ ಕೊಟ್ಟು ಗಮನ ಸೆಳೆದಿದ್ದ ಧರ್ಮ ಕೀರ್ತಿರಾಜ್‌ಗೆ ಆ ಬಳಿಕ ಅಂದುಕೊಂಡ ಯಶಸ್ಸು ಸಿಗಲಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟ ಪಡಬೇಕಾಗಿತ್ತು.

ಈಗ ಧರ್ಮ ಕೀರ್ತಿರಾಜ್ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಬೆಂಗಳೂರು ಇನ್' ಎಂಬ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅವರಿಗೆ ಅನುಷಾ ರೈ ಹಾಗೂ ರಿಶಾ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ನಲ್ಲಿ ಈ ಮೂವರು ಒಟ್ಟಿಗೆ ಭಾಗವಹಿಸಿದ್ದರು. ಅವರೇ ಈಗ 'ಬೆಂಗಳೂರು ಇನ್'ನಲ್ಲಿ ಕಾಣಿಸುತ್ತಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಚೆನ್ನೈನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಧರ್ಮ ಕೀರ್ತಿರಾಜ್ ಸ್ಯಾಂಡಲ್‌ವುಡ್‌ನ ಚಾಕೊಲೇಟ್ ಬಾಯ್ ಆಗಬಹುದೆಂಬ ನಿರೀಕ್ಷೆಯಿತ್ತು. ಯಾಕಂದ್ರೆ 'ನವಗ್ರಹ' ಅವರಿಗೆ ಆ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ಇಲ್ಲಿಂದ ಕನ್ನಡದ ಮತ್ತೊಂದು ಸೂಪರ್‌ಸ್ಟಾರ್ ಸಿಗಬಹುದೆಂದು ಸಿನಿಮಾ ಮಂದಿನೂ ನಂಬಿತ್ತು. ಆದರೆ, ನಂತರ ಅವರು ಆಯ್ಕೆ ಮಾಡಿಕೊಂಡ ಸಿನಿಮಾಗಳು ಅವರಿಗೆ ಯಶಸ್ಸು ಕೊಡಲಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಫ್ಲಾಪ್ ಆದ ಬಳಿಕ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಆಗ ಚೆನ್ನೈನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಸೋಲಿನ ಸುಳಿಗೆ ಸಿಲುಕಿದ್ದ ಧರ್ಮ್ ಕೀರ್ತಿರಾಜ್ ಚೆನ್ನೈನಲ್ಲಿ ಕೆಲಸಕ್ಕೆ ಸೇರಿದ್ದು, ಬಳಿಕ ನಿರ್ಮಾಪಕರೊಬ್ಬರು ಕರೆದುಕೊಂಡು ಬಂದಿದ್ದನ್ನು ಮಾಧ್ಯಮಗಳ ಮುಂದೆ ನೆನಪಿಸಿಕೊಂಡಿದ್ದಾರೆ. "ನನ್ನ ಸಿನಿಮಾ ಸೋತಾಗ ಒಂದೆರಡು ವರ್ಷ ಕೆಲಸ ಇರಲಿಲ್ಲ. ಆಗ ನಾನು ಚೆನ್ನೈಗೆ ಹೋಗಿ ಅಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಕೆಲವು ದಿನಗಳ ಕಾಲ ಅಲ್ಲೇ ಕೆಲಸ ಮಾಡುತ್ತಿದ್ದೆ. ಆ ವೇಳೆ ಮತ್ತೆ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದು ವೆಂಕಟೇಶ್ ಮೂರ್ತಿ ಸರ್. ಅವರ ಚಾಣಾಕ್ಷ್ಯ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಕೊಟ್ಟರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ." ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.

ಇದೇ ವೇಳೆ ತನ್ನ 16 ವರ್ಷಗಳ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಈ ಜರ್ನಿಯಲ್ಲಿ ತನ್ನ ತಂದೆಯೇ ತನಗೆ ಗುರು ಎಂದಿದ್ದಾರೆ. 75 ವರ್ಷದ ಕೀರ್ತಿರಾಜ್ ಈಗಲೂ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರೋ ಕೀರ್ತಿರಾಜ್ ಅವರಿಂದ ಸಿನಿಮಾ ಮೇಲಿನ ಶ್ರದ್ಧೆಯನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ಮೇಲಿನ ಶ್ರದ್ಧೆಯನ್ನು ತಂದೆ-ತಾಯಿಯಿಂದಲೇ ಕಲಿತಿದ್ದಾಗಿ ಹೇಳಿದ್ದಾರೆ.
ಸಿನಿಮಾದಲ್ಲಿ ಪ್ರಯತ್ನ ಅನ್ನೋದನ್ನು ಎಂದಿಗೂ ಬಿಟ್ಟಿಲ್ಲ. ಕೆಲವು ಯಶಸ್ಸು ದಿಢೀರನೇ ಸಿಕ್ಕಿಬಿಡುತ್ತೆ. ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ಪ್ರಯತ್ನ ಮಾಡಬೇಕು. ಹೀಗಾಗಿ ಸಿನಿಮಾದಲ್ಲಿ ಯಶಸ್ಸು ಪಡೆಯುವ ನಿಟ್ಟಿನಲ್ಲಿ ಕುಗ್ಗಿಲ್ಲ. ಈ ಹಾದಿಯಲ್ಲಿದ್ದು, ದೇವರು, ಜನರು ಕೂ ಹಿಡಿಯುತ್ತಾರೆ. ಒಂದಲ್ಲ ಒಂದು ದಿನ ಒಳ್ಳೆಯ ದಿನ ಬಂದೇ ಬರುತ್ತೆ ಅನ್ನೋ ನಂಬಿಕೆ ಇದೆ. ಆ ನಂಬಿಕೆಯಲ್ಲಿಯೇ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.


Click it and Unblock the Notifications
