''ಶಿವಣ್ಣ ನಮ್ಮ ಅಣ್ಣ'' ಹೀಗೆ ಹೇಳಿದ್ರು ಧರ್ಮಣ್ಣ
ಹಾಸ್ಯ ನಟ ಧರ್ಮಣ್ಣ ಅವರ ಬಹು ದಿನದ ಆಸೆ ಇದೀಗ ಈಡೇರಿದೆ. ಕರುನಾಡ ಚಕ್ರವರ್ತಿ ಶಿವಣ್ಣನನ್ನು ಭೇಟಿ ಮಾಡಬೇಕು ಎನ್ನುವ ಕನಸು ನನಸಾಗಿದೆ.
'ಕನ್ನಡ ಗೊತ್ತಿಲ್ಲ' ಸಿನಿಮಾ ಪ್ರಮೋಷನ್ ನಲ್ಲಿ ಶಿವಣ್ಣರನ್ನು ಭೇಟಿ ಮಾಡುವ ಅವಕಾಶ ಧರ್ಮಣ್ಣಗೆ ಸಿಕ್ಕಿದೆ. ಈ ಹಿಂದೆ ಕೆಲವು ಬಾರಿ ಕಾರ್ಯಕ್ರಮಗಳಲ್ಲಿ ದೂರದಿಂದ ಶಿವಣ್ಣರನ್ನು ಧರ್ಮಣ್ಣ ನೋಡಿದ್ದರು. ಆದರೆ, ಅವರನ್ನು ಮೊದಲ ಬಾರಿಗೆ ಮೀಟ್ ಮಾಡಿ, ಫೋಟೋ ತೆಗೆದುಕೊಂಡಿದ್ದಾರೆ.
ಧರ್ಮಣ್ಣ ತಮ್ಮೂರಿನಲ್ಲಿ ಶಿವಣ್ಣನ ಸಿನಿಮಾಗಳೆನ್ನೇ ಹೆಚ್ಚು ನೋಡುತ್ತಿದ್ದರಂತೆ. ಚಿತ್ರಮಂದಿರ ಮುಂದೆ ಟಿಕೆಟ್ ಗಾಗಿ ಕಾಯುತ್ತಿದ್ದರಂತೆ. ಇಂದು ಅಂತಹ ದೊಡ್ಡ ನಟನನ್ನು ಭೇಟಿ ಮಾಡಿದ್ದು, ಬಹಳ ಖುಷಿಯಾಗಿದೆ ಎಂದ ಧರ್ಮಣ್ಣ, ಶಿವಣ್ಣನ ಸರಳತೆ ಕಂಡು ಅಚ್ಚರಿಗೊಂಡಿದ್ದಾರೆ.

ಒಬ್ಬ ಸೂಪರ್ ಸ್ಟಾರ್ ಆಗಿರುವ ಶಿವಣ್ಣ ನಮ್ಮಂತಹ ಹೊಸ ಕಲಾವಿದರನ್ನು ಮಾತನಾಡಿಸುವ ರೀತಿ ನೋಡಿ ಬಹಳ ಖುಷಿ ಆಯ್ತು. ಅವರ ಸರಳತೆ ನೋಡಿದರೆ, ನಮ್ಮ ಮನೆಯವರೇ ಅನಿಸಿ ಬಿಡುತ್ತದೆ. ಅವರು ಸಿಂಪಲ್ ಮನುಷ್ಯ. ಶಿವಣ್ಣ ನಮ್ಮ ಅಣ್ಣ ಎಂದು ಧರ್ಮಣ್ಣ ಹೇಳಿದ್ದಾರೆ.
ಮುಂದೆ ಶಿವಣ್ಣನ ಜೊತೆಗೆ ಸಿನಿಮಾ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ. ಏನೇ ತೊಂದರೆ ಇದ್ದರೂ ಅವರ ಜೊತೆಗೆ ನಟನೆ ಮಾಡುತ್ತೇನೆ ಎಂದರು ಧರ್ಮಣ್ಣ. ಅಂದಹಾಗೆ, ಧರ್ಮಣ್ಣನ 'ಕನ್ನಡ್ ಗೊತ್ತಿಲ್ಲ' ಸಿನಿಮಾಗೆ ಶಿವರಾಜ್ ಕುಮಾರ್ ಶುಭಾಶಯ ತಿಳಿಸಿದ್ದಾರೆ. ಈ ಸಿನಿಮಾ ನಾಳೆ (ನವೆಂಬರ್ 22) ಬಿಡುಗಡೆ ಆಗುತ್ತಿದೆ.


Click it and Unblock the Notifications











