ಬೈಕ್‌ನಿಂದ ಬಿದ್ದು ಕೋಮಾ ಸ್ಥಿತಿಗೆ ತಲುಪಿದ ಧ್ರುವ ಸರ್ಜಾ ಅಭಿಮಾನಿ: ಆಸ್ಪತ್ರೆಗೆ ಭೇಟಿ ಪೋಷಕರಿಗೆ 5 ಲಕ್ಷ ನೀಡಿ ಆಸರೆಯಾದ ನಟ
ಫೆಬ್ರವರಿ 14ರಂದು ನಟ ಧ್ರುವ ಸರ್ಜಾ ಅಭಿಮಾನಿ ಪೃಥ್ವಿರಾಜ್ ಎಂಬುವವರು ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರವಾಗಿ ಪೆಟ್ಟಾಗಿ ಕೋಮಾ ಸ್ಥಿತಿ ತಲುಪಿದ್ದಾರೆ. ಸದ್ಯ ಬೆಂಗಳೂರಿನ ಎಂ.ಎಸ್.ರಾಮಯ್ಯ ಮೇಮೊರಿಯಲ್ ಆಸ್ಪತ್ರೆಯಲ್ಲಿ ಪೃಥ್ವಿರಾಜ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಟ ಧ್ರುವ ಸರ್ಜಾ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಧ್ರುವ ಸರ್ಜಾ ಅಪ್ಪಟ ಅಭಿಮಾನಿಯಾಗಿದ್ದ ಪೃಥ್ವಿರಾಜ್‌ಗೆ ನೆಚ್ಚಿನ ನಟನನ್ನು ನೋಡುವ ಆಸೆಯಿತ್ತು. ಇನ್ನು ಗಾಯಾಳು ಪೃಥ್ವಿರಾಜ್ ಪೋಷಕರು ಮಗನ ದೇಹವನ್ನು ದಾನ ಮಾಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ 4 ದಿನಗಳ ಹಿಂದೆ ಅಪಘಾತ ಸಂಭವಿಸಿತ್ತು.

ನೋವಿನಲ್ಲೂ ಪೃಥ್ವಿರಾಜ್ ಪೋಷಕರು ಮಗನ ದೇಹವನ್ನು ದಾನ ಮಾಡಲು ಮನಸ್ಸು ಮಾಡಿದ್ದಾರೆ. ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಟ ಧ್ರುವ ಸರ್ಜಾ ಎದುರು ಪೃಥ್ವಿರಾಜ್ ತಂದೆ ಮಗನ ಬಗ್ಗೆ ಕಂಡ ಕನಸುಗಳನ್ನೆಲ್ಲಾ ಹೇಳಿಕೊಂಡಿದ್ದಾರೆ. ನಾವು ಅವನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದೇವೆ, ಅವನ ಈಗ ಈ ಸ್ಥಿತಿಯಲ್ಲಿ ಮಲಗಿದ್ದಾನೆ ಎಂದು ನೋವು ತೋಡಿಕೊಂಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ನಟ ಧ್ರುವ ಸರ್ಜಾ, "ಭಾನುವಾರ ಬಂತು ಅಂದ್ರೆ ಪೃಥ್ವಿ ಬರ್ತಿದ್ರು, ಬಹಳ ಸಲ ಭೇಟಿ ಮಾಡಿದ್ದೇನೆ. ತುಂಬಾ ನೋವಾಗುತ್ತಿದೆ. ಅವರ ತಂದೆ ತಾಯಿಗೆ ಎನು ಹೇಳಿ ಸಮಾಧಾನ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಹೆಲ್ಮೆಟ್ ಹಾಕಿಕೊಂಡು ಬೈಕ್ ಚಾಲನೆ ಮಾಡಬೇಕು. ಪೃಥ್ವಿ ತಂದೆ ತಾಯಿ ಬಹಳ ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಆತನ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಎಲ್ಲಿದ್ದರೂ ಆತನ ಆತ್ಮಕ್ಕೆ ಶಾಂತಿ ಸಿಗಲಿ, ಎಲ್ಲರಲ್ಲೂ ನನ್ನ ವಿನಂತಿ ಏನು ಅಂದ್ರೆ, ದಯವಿಟ್ಟು ಹೆಲ್ಮೆಟ್ ಧರಿಸಿ, ನಮ್ಮ ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದುಕೊಂಡಿದ್ದೆ. ಆದರೆ ಈಗ ಬರುವಂತಾಯಿತು" ಎಂದಿದ್ದಾರೆ.
ಇನ್ನು ಮಗನ ಆಸ್ಪತ್ರೆ ಖರ್ಚಿಗಾಗಿ ಪೃಥ್ವಿರಾಜ್ ತಂದೆ ಜಗದೀಶ್ ಸಾಲ ಮಾಡಿದ್ದರು. ಇದೀಗ ನಟ ಧ್ರುವ ಸರ್ಜಾ 5 ಲಕ್ಷ ಹಣ ನೀಡುವ ಮೂಲಕ ಅಭಿಮಾನಿಯ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಒಂದು ಕಡೆ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು, ಮತ್ತೊಂದು ಕಡೆ ಸಾಲ ಮಾಡಿ ಕಂಗೆಟ್ಟಿದ್ದರು. ನಟ ಧ್ರುವ ಸರ್ಜಾ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.


Click it and Unblock the Notifications











