ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ
ನಿಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ಹೊರಬಂದು ಸೂಪರ್ ಹಿಟ್ ಆಗಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗುತ್ತಿದೆ.
ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಎದುರು ರಾವಣನಾಗಿ ಯಶ್ ಅಬ್ಬರಿಸಲು ಬರ್ತಿದ್ದಾರೆ. ರಾವಣ ರಾಕ್ಷಸನಾಗಿದ್ದರೂ, ಆತ ಮಹಾನ್ ವಿದ್ವಾಂಸ ಮತ್ತು ಮಹಾನ್ ಪಂಡಿತನಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ರಾವಣ ಶಿವಭಕ್ತ. ರಾಮಾಯಣ ಕಾವ್ಯದಲ್ಲಿ ರಾಮನ ಪಾತ್ರದಷ್ಟೆ ರಾವಣನ ಪಾತ್ರಕ್ಕೂ ಮಹತ್ವ ಇದೆ. ಆ ಪಾತ್ರವನ್ನು ಅಷ್ಟೇ ಸೊಗಸಾಗಿ ತೆರೆಗೆ ತರಲಾಗುತ್ತಿದೆ. ಆ ಪಾತ್ರವನ್ನು ಯಶ್ ಒಂದು ಸವಾಲಾಗಿ ಸ್ವೀಕರಿಸಿದ್ದಾರೆ.

ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ ಸಣ್ಣ ಝಲಕ್ ತೋರಿಸಲಾಗಿದೆ. ಆದರೆ ರಾವಣನಾಗಿ ಬರೀ ಕಣ್ಣಲ್ಲೇ ಯಶ್ ಮ್ಯಾಜಿಕ್ ಮಾಡಿದ್ದಾರೆ. ಯಶ್ ಸ್ಕ್ರೀನ್ ಪ್ರಸೆನ್ಸ್ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ಕಿದೆ. ಇನ್ನು 'ರಾಮಾಯಣ' ಟೀಸರ್ ಅನ್ನು ನಟ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
"ರಾಮ vs ರಾವಣನ ಅಮರ ಕಥೆ. ರಾಮಾಯಣ.. ನಮ್ಮ ಸತ್ಯ.. ನಮ್ಮ ಇತಿಹಾಸ.. ಚಿತ್ರವನ್ನು ಐಮ್ಯಾಕ್ಸ್‌ಗಾಗಿ ಚಿತ್ರೀಕರಿಸಲಾಗಿದೆ. ಉತ್ತಮ ಪ್ರಪಂಚಕ್ಕಾಗಿ ಭಾರತದಿಂದ" ಎಂದು ಯಶ್ ಕ್ಯಾಪ್ಷನ್ ಕೊಟ್ಟಿದ್ದರು. ಅದಕ್ಕೆ ಕನ್ನಡದ ಖ್ಯಾತ ಕವಿ ನಾಗಚಂದ್ರನ ಕಾವ್ಯದ ಸಾಲು ಒಂದನ್ನು ಉಲ್ಲೇಖಿಸಿ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಮಾಡಿರುವ ಕಾಮೆಂಟ್ ಈಗ ವೈರಲ್ ಆಗುತ್ತಿದೆ. ನಟ ಯಶ್ ಕೂಡ ಶೆಟ್ರ ಕಾಮೆಂಟ್‌ಗೆ ರಿಪ್ಲೇ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ಕಾಮೆಂಟ್ ಮಾಡಿ "ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ", ಕನ್ನಡದ ಒಬ್ಬ ಕವಿ ತನ್ನ ಪ್ರತಿನಾಯಕನನ್ನು ಸಮರ್ಥಿಸಿಕೊಳ್ಳುತ್ತಾ, ಮಹಾ ಸಾಗರವು ಕಾಲದ ಕಾರಣದಿಂದಾಗಿ ತನ್ನ ಮಿತಿಗಳನ್ನು ದಾಟಿ ಸುನಾಮಿಯಂತಹ ಘಟನೆಗಳನ್ನು ತರುತ್ತದೆ ಎಂದು ಹೇಳಿತ್ತಾನೆ. ಅವನ ಪ್ರತಿನಾಯಕ ರಾವಣ. ನನ್ನ ಪ್ರಕಾರ, ಮೊದಲ ಬಾರಿಗೆ ನಾವು ನಮ್ಮ ರಾವಣನನ್ನು ಸಮರ್ಥಿಸಿಕೊಳ್ಳುವ ಶಪಥ ಮಾಡುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಯಶ್ ರಿಪ್ಲೇ ಮಾಡಿ "ಥ್ಯಾಂಕ್ಯೂ ಶೆಟ್ರೆ" ಎಂದಿದ್ದಾರೆ. ಅದ್ಯ ಈ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.
ವಾಲ್ಮೀಕಿ ರಾಮಾಯಣದಲ್ಲಿ ರಾವಣನ ಶಕ್ತಿ, ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ಇದೆ. ಅದೇ ರೀತಿ ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಕೆಲ ಕನ್ನಡ ಕವಿಗಳು ಕಾವ್ಯಗಳನ್ನು ರಚಿಸಿದ್ದಾರೆ. ಕೆಲವರು ರಾವಣನ ಪಾತ್ರವನ್ನು ವಿಜೃಂಭಿಸಿ ಕಾವ್ಯ ರಚಿಸಿರುವುದು ಇದೆ. ಕ್ರಿಶ 1100ರಲ್ಲಿ ಕನ್ನಡ ಕವಿ ನಾಗಚಂದ್ರ 'ರಾಮಚಂದ್ರ ಚರಿತ ಪುರಾಣ' ಎಂಬ ಕಾವ್ಯ ರಚಿಸಿದ್ದನು. ಅಭಿನವ ಪಂಪ ಎಂದೇ ಪ್ರಸಿದ್ಧಿಯಾಗಿದ್ದ ನಾಗಚಂದ್ರನ ಈ ಕಾವ್ಯಕ್ಕೆ 'ಪಂಪ ರಾಮಾಯಣ' ಎಂಬ ಹೆಸರು ಇದೆ.
ನಾಗಚಂದ್ರ ತನ್ನ ಕಾವ್ಯದಲ್ಲಿ ರಾವಣನನ್ನು ಪ್ರತಿನಾಯಕನಾಗಿ ತೆಗೆದುಕೊಂಡಿದ್ದನು. ಆತ ತನ್ನ ಕಾವ್ಯದಲ್ಲಿ ರಾವಣ ದುಷ್ಟನಲ್ಲ, ಆಕಸ್ಮಿಕವಾಗಿ ಸೀತೆಯನ್ನು ಕಂಡು ಆಕೆಯ ಮೇಲೆ ಮೋಹಗೊಂಡು ಕೊನೆಗೆ ಸಾಯುವಂತಾಯಿತು ಎಂದು ಬರೆದಿದ್ದಾನೆ. ಈ ಸಂದರ್ಭದಲ್ಲಿ "ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ"(ಅರ್ಥ ಸಮುದ್ರ ಕೂಡ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆ ಮೀರುತ್ತದೆ ಅಲ್ಲವೇ?) ಎಂದು ಹೋಲಿಕೆ ಮಾಡಿದ್ದಾನೆ. ಇದನ್ನೇ ಪ್ರಸ್ತಾಪಿಸಿ ರಾಜ್. ಬಿ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ.
ಎರಡು ಭಾಗಗಳಾಗಿ 'ರಾಮಾಯಣ' ಚಿತ್ರ ನಿರ್ಮಾಣವಾಗುತ್ತಿದೆ. ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಮುಂದಿನ ವರ್ಷ ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಕೆಲವೇ ನಿಮಿಷಗಳು ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ. ಸೀತಾಪಹರಣದವರೆಗೆ ಕಥೆ ಮೊದಲ ಭಾಗದಲ್ಲಿ ಇರಲಿದೆ. ಎರಡನೇ ಭಾಗದಲ್ಲಿ ರಾವಣನಾಗಿ ಯಶ್ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











