ಕರುನಾಡ ಸಂಭ್ರಮ 2023: ಕನ್ನಡ ಕಲಾಭೂಷಣ ಪ್ರಶಸ್ತಿ ಸ್ವೀಕರಿಸಲಿರುವ ನಟ ರಮೇಶ್ ಅರವಿಂದ್
ಈ ವರ್ಷದ ಕರುನಾಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳು ಡಿಸೆಂಬರ್ 14 ರಿಂದ 17ರವರೆಗೆ ನಾಲ್ಕು ದಿನ ಈ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. 12ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಮಾರಂಭದಲ್ಲಿ ಈ ಬಾರಿ ನಟ ರಮೇಶ್ ಅರವಿಂದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್ ಫುಲ್‌ನಿಂದ ಕರುನಾಡ ಸಂಭ್ರಮ ನಡೆಯಲಿದೆ. ಈ ವರ್ಷ ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಶಂಕರ್ ನಾಗ್ ವೃತ್ತದ ಬಳಿಯಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.

ನಟ ರಮೇಶ್ ಅರವಿಂದ್‌ಗೆ ಕನ್ನಡ ಕಲಾಭೂಷಣ ಪ್ರಶಸ್ತಿ
2023ರ ಕರುನಾಡ ಸಂಭ್ರಮ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವರುಣ್ ಸ್ಟುಡಿಯೋಸ್, ರಾಜ್ ಇವೆಂಟ್ಸ್ ಜೊತೆಗೂಡಿ ವಹಿಸಿಕೊಂಡಿವೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸ್ಯಾಂಡಲ್‌ವುಡ್ ಮತ್ತು ತಮಿಳು ಚಿತ್ರರಂಗದಲ್ಲಿ ದಶಕಗಳಿಂದ ಸಿನಿ ರಸಿಕರನ್ನು ರಂಜಿಸುತ್ತಿರುವ ಸುರಸುಂದರ ರಮೇಶ್ ಅರವಿಂದ್ ಅವರನ್ನು 'ಕನ್ನಡ ಕಲಾಭೂಷಣ ಪ್ರಶಸ್ತಿ' ನೀಡಿ ಗೌರವಿಸಲಾಗುತ್ತಿದೆ. ನಟನೆ ಜೊತೆಗೆ ನಿರ್ದೇಶಕರಾಗಿಯೂ ಹೆಸರು ಗಳಿಸಿರುವ ಅವರು, ತಮಿಳುನಲ್ಲಿಯೂ ಸಿನಿಮಾಗಳನ್ನು ಮಾಡಿದ್ದಾರೆ.
ಕಿರುತೆರೆಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅತ್ಯಂತ ಜನಪ್ರಿಯವಾದದ್ದು. ಚಿತ್ರರಂಗ ಮತ್ತು ಕರುನಾಡಿನ್ಲಲಿ ಸಾಧನೆ ಮಾಡಿದವರನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಅವರ ಜೀವನ ಪ್ರಯಾಣವನ್ನು ತೋರಿಸುವ ಕೆಲಸ ರಮೇಶ್ ಅರವಿಂದ್ ಮಾಡಿದ್ದಾರೆ. ಈಗ ಮತ್ತೆ ನಿರ್ಮಾಪಕರಾಗಿ 'ಆಸೆ' ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕರುನಾಡ ಸಂಭ್ರಮ
ಕರುನಾಡ ಸಂಭ್ರಮ ಎಂದರೆ ಕಲರ್ ಫುಲ್ ಕಾರ್ಯಕ್ರಮ, ಸ್ಯಾಂಡಲ್‌ವುಡ್ ನಟ, ನಟಿಯರು ಒಂದೆಡೆ ಸೇರಿ ಸಂಭ್ರಮಿಸುವ ಸಮಾರಂಭ. ಇದರಲ್ಲಿ ಸ್ಟಾರ್ ಗಾಯಕರ ಹಾಡು, ನಟ, ನಟಿಯರ ಡಾನ್ಸ್ ಕೂಡ ಇರಲಿದೆ. ಈ ಬಾರಿಯೂ ಈ ಸಂಭ್ರಮ ಇನ್ನಷ್ಟು ರಂಗಿನಿಂದ ಕೂಡಿರಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕರುನಾಡ ಸಂಭ್ರಮದಲ್ಲಿ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್, ರಾಜೇಶ್ ಕೃಷ್ಣನ್, ನವೀನ್ ಸಜ್ಜು ಅವರ ಗಾಯನ ಕಾರ್ಯಕ್ರಮದ ಮೆರಗು ಹೆಚ್ಚಿಸಲಿದೆ. ರಮೇಶ್ ಅರವಿಂದ್, ನೀನಾಸಂ ಸತೀಶ್, ಅಜಯ್ ರಾವ್, ವಿಜಯ್ ರಾಘವೇಂದ್ರ, ಚಿಕ್ಕಣ್ಣ ಸೇರಿದಂತೆ ಹಲವು ಕನ್ನಡ ತಾರೆಯರು ಕರುನಾಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.


Click it and Unblock the Notifications











