ಯಶ್ ಬರ್ತ್‌ಡೇ ದುರಂತದ ಬೆನ್ನಲ್ಲೇ ದುನಿಯಾ ವಿಜಯ್ ಹುಟ್ಟುಹಬ್ಬ: ಫ್ಯಾನ್ಸ್‌ಗೆ ಕೈ ಮುಗಿದು ಕೇಳಿಕೊಂಡಿದ್ದೇನು 'ಭೀಮ'?
ಈ ವರ್ಷದ ಆರಂಭದಲ್ಲೇ ಸ್ಟಾರ್ ನಟರಿಗೆ ಹುಟ್ಟುಹಬ್ಬ ಅಂದರೆ ಭಯವಾಗುವಂತಹ ದೊಡ್ಡ ದುರಂತವೊಂದು ನಡೆದಿದೆ. ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬ್ಯಾನರ್ ಕಟ್ಟಲು ಹೋಗಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಮೂವರು ಯುವಕ ಮೃತ ಪಟ್ಟಿದ್ದರು.
ಇದು ಸ್ಟಾರ್ ನಟರ ಹುಟ್ಟುಹಬ್ಬದ ವಿಷಾರದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನೆಚ್ಚಿನ ನಟನ ದೊಡ್ಡ ದೊಡ್ಡ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಕಟ್ಟುವ ಆತುರದಲ್ಲಿ ನಡೆಯುವ ಅಚಾತುರ್ಯಗಳು ಒಂದೆರಡಲ್ಲ. ಹೀಗಾಗಿಯೇ ನಟರ ಹುಟ್ಟುಹಬ್ಬ ಎಂದರೇ ಆತಂಕ ಹುಟ್ಟುವ ಸಮಯವಿದು. ಈ ದುರ್ಘಟನೆ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಸಲಗ ದುನಿಯಾ ವಿಜಯ್ ಹುಟ್ಟುಹಬ್ಬ ಬಂದಿದೆ.

ಸ್ಯಾಂಡಲ್‌ವುಡ್‌ನ ಸಲಗ ದುನಿಯಾ ವಿಜಯ್ ಹುಟ್ಟುಹಬ್ಬ
ಇದೇ ಜನವರಿ 20ರಂದು ದುನಿಯಾ ವಿಜಯ್ ಹುಟ್ಟುಹಬ್ಬವಿದೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ವಿಜಯ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಈ ಬಗ್ಗೆ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಜನವರಿ 20ರಂದು ನಟ ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅಲ್ಲಿಯೇ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ನಟ ಯಶ್ ಬರ್ತ್‌ಡೇ ದಿನ ನಡೆದ ದುರಂತಗಳನ್ನು ಗಮನದಲ್ಲಿಟ್ಟುಕೊಂಡು ನಟ ದುನಿಯಾ ವಿಜಯ್ ತಮ್ಮ ಫ್ಯಾನ್ಸ್ ಬಳಿ ಕೈ ಮುಗಿದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಬಾರಿ ಅಭಿಮಾನಿಯೊಬ್ಬರು ನಡೆದುಕೊಂಡೇ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಬಂದಿದ್ದರು. ಇದನ್ನು ಪ್ರಸ್ತಾಪಿಸಿ ಮಾತನಾಡಿರುವ ಅವರು, "ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ . ನನಗೆ ನಿಮ್ಮ ಜೊತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ" ಎಂದಿದ್ದಾರೆ.

"ಜನವರಿ 20ರಂದು ಬೆಳಗ್ಗೆ ಎಲ್ಲರೂ ಸೇಫಾಗಿ ಬನ್ನಿ. ಜನವರಿ 19ನೇ ತಾರಿಖಿನ ವರೆಗೂ ನಮಗೆ ಕೆಲಸ ಇದೆ. ಹೀಗಾಗಿ 20ರಂದು ಬಳಗ್ಗೆ ಎಲ್ಲರು ಬನ್ನಿ ಜೊತೆಯಲ್ಲಿಕುಳಿತು ಊಟ ಮಾಡೋಣ. ಯಾರು ಹುಟ್ಟುಹಬ್ಬದ ದಿನ ಪ್ಲೆಕ್ಸ್, ಬ್ಯಾನರ್ ಹಾಕಬೇಡಿ" ಎಂದು ವಿಶೇಷವಾಗಿ ಮನವಿ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಮರೆಯದ ವರ್ಷದ ಮೊದಲ ದುರಂತ!
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಮೂವರು ಯುವಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಧ್ಯರಾತ್ರಿ ಯಶ್ ಬ್ಯಾನರ್ ಕಟ್ಟಲು ಹೋಗಿದ್ದ ವೇಳೆ ಗದಗದ ಸೂರಣಗಿ ಗ್ರಾಮದ ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ವಿದ್ಯುತ್ ಸ್ಪರ್ಶಿಸಿ ಮೃತರಾಗಿದ್ದರು. ಇದು ಈ ವರ್ಷ ಚಂದನವನದಲ್ಲಿ ಮರೆಯಲಾಗದ ದುರಂತವಾಗಿಬಿಟ್ಟಿದೆ.
ಇದಾದ ನಂತರ ಮೃತರ ಕುಟುಂಬದವರನ್ನು ಭೇಟಿಯಾಗಲು ಹೋಗಿದ್ದ ನಟ ಯಶ್ ಅವರ ಬೆಂಗಾವಲನ್ನು ಹಿಂಬಾಲಿಸಲು ಹೋಗಿ ಮತ್ತೊಬ್ಬ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ "ಪ್ರತಿ ವರ್ಷ ಬರ್ತ್‌ಡೇ ಬಂದಾಗ ಈತರ ಒಂದೊಂದು ಘಟನೆ ನಡೆದಾಗ, ನನಗೆ ಹುಟ್ಟುಹಬ್ಬ ಅಂದರೇನೆ ಭಯ ಬಂದುಬಿಟ್ಟಿದೆ. ನಿಜ ಹೇಳಬೇಕು ಅಂದರೆ, ನನ್ನ ಬಗ್ಗೆ ನನಗೆ ಅಸಹ್ಯ ಆಗಿಬಿಟ್ಟಿದೆ" ಎಮದು ನಟ ಯಶ್ ಭಾವುಕರಾಗಿ ಮಾತನಾಡಿದ್ದರು.


Click it and Unblock the Notifications











