ಮಲೆನಾಡಿಗರು ಮೀನು ಬೇಟೆ ಮಾಡೋದು ಹೇಗೆ ಗೊತ್ತಾ? 'ಕೆರೆಬೇಟೆ' ಸಿನಿಮಾವೇ ಬರ್ತಿದೆ ನೋಡಿ
ನಮ್ಮಲ್ಲಿ ಹಳ್ಳಿ ಸೊಗಡಿನ ಸಿನಿಮಾಗಳಿಗೆ ಅದರದ್ದೇ ಆದ ಶಕ್ತಿಯಿದೆ. ನಮ್ಮ ಬೇರನ್ನು ನೆನಪಿಸುವ ಈ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ನಾವು ಎಂಜಾಯ್ ಮಾಡುತ್ತೇವೆ. ಹಳ್ಳಿಯ ಕಲೆ, ಜೀವನ ಶೈಲಿಯ ಬಗ್ಗೆ ಅನೇಕ ಸಿನಿಮಾಗಳು ಬಂದಿವೆ ಮತ್ತು ಬರುತ್ತಿವೆ. ಈ ಮಲೆನಾಡಿನ ಪ್ರಸಿದ್ಧ ಪದ್ಧತಿಯೊಂದನ್ನು ತೆರೆ ಮೇಲೆ ತರಲು ಒಂದು ತಂಡ ಹೊರಟಿದೆ.
ಅಪ್ಪಟ ಮಲೆನಾಡಿನ ಕಥೆಯನ್ನು ಹೇಳಲು ಹೊರಟಿರುವ ಈ ತಂಡ ಚಿತ್ರಕ್ಕೆ 'ಕೆರೆಬೇಟೆ' ಎಂದು ಹೆಸರು ಇಟ್ಟಿದೆ. ಕೆರೆಬೇಟೆ ಗೌರಿ ಶಂಕರ್ ನಾಯಕನಾಗಿ ನಟಿಸಿರುವ ಸಿನಿಮಾ. ಈ ಚಿತ್ರಕ್ಕೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ಐದು ವರ್ಷಗಳ ನಂತರ ನಟ ಗೌರಿ ಶಂಕರ್ ಕೆರೆಬೇಟೆ ಸಿನಿಮಾ ಮೂಲಕ ನಾಯಕನಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ.

ಐದು ವರ್ಷಗಳ ಬಳಿಕ ಮತ್ತೆ ನಾಯಕರಾಧ ಗೌರಿ ಶಂಕರ್
ನಟ ಗೌರಿ ಶಂಕರ್ ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದರು. ರಾಜಹಂಸ ಸಿನಿಮಾ ರಿಲೀಸ್ ಆಗಿ 5 ವರ್ಷಗಳ ಮೇಲಾಗಿದೆ. ಇದೀಗ ಗೌರಿ ಶಂಕರ್ ಕೆರೆಬೇಟೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕೆರೆಬೇಟೆ ಸಿನಿಮಾಗೆ ರಾಜ್ ಗುರು ಆಕ್ಷನ್ ಕಟ್ ಹೇಳಲಿದ್ದಾರೆ.
ಈ ಹಿಂದೆ ಎ.ಆರ್ ಬಾಬು, ಪವನ್ ಒಡೆಯರ್ ಹಾಗೂ ಇತರೆ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ರಾಜ್ ಗುರು ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದಾರೆ. ಸಿನಿಮಾ ರಂಗದಲ್ಲಿ ಹತ್ತು ವರ್ಷಗಳ ಅನುಭವ ಅವರಿಗಿದೆ.
ಕೆರೆಬೇಟೆ ಎಂದರೇನು..?
ಮಲೆನಾಡ ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿಯಿದೆ. ಇದಕ್ಕೆ ಕೆರೆಬೇಟೆ ಎಂದು ಕರೆಯುತ್ತಾರೆ. ಮಲೆನಾಡ ಭಾಗದಲ್ಲಿ ವರ್ಷಕೊಮ್ಮೆ ಕೆರೆಬೇಟೆಯಾಡುತ್ತಾರೆ. ಇದು ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಈ ಎಳೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.
'ಕೆರೆಬೇಟೆ ಜನಮನ ಸಿನಿಮಾ ಸಂಸ್ಥೆಯ ಹೆಮ್ಮೆಯ ಕಾಣಿಕೆ. ಇದುವರೆಗೂ ನೋಡಿರದ ಒಂದು ಹಳ್ಳಿ ಸೊಗಡಿನ ಕಥೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಅಕ್ಟೋಬರ್ 27 ರಂದು ಶುಕ್ರವಾರ ಮಧ್ಯಾಹ್ನ 12.01 ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ' ಎಂದು ನಾಯಕ ಗೌರಿ ಶಂಕರ್ ಹೇಳಿದ್ದಾರೆ.
ಕೆರೆಬೇಟೆ ಚಿತ್ರಕ್ಕೆ ಜೈ ಶಂಕರ್ ಪಟೇಲ್ ಹಾಗೂ ನಾಯಕ ಗೌರಿ ಶಂಕರ್ ಇಬ್ಬರೂ ತಮ್ಮ ಜನಮನ ಸಿನಿಮಾ ಬ್ಯಾನರ್‌ನಲ್ಲಿ ಬಂಡವಾಳ ಹೂಡಿದ್ದಾರೆ. ಕೆರೆಬೇಟೆ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂಧೂರು ಹಾಗೂ ಸೊರಬ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.


Click it and Unblock the Notifications











