ಪೈರಸಿ ವಿರುದ್ಧ ನಿಜವಾದ ಯುದ್ಧ ಆರಂಭಿಸಿದ ನಟ ಜಗ್ಗೇಶ್; ಒಬ್ಬ ಕಿಡಿಗೇಡಿ ಬಂಧನ
ಚಿತ್ರರಂಗಕ್ಕೆ ಪೈರಸಿ ಕಾಟ ಹೆಚ್ಚಾಗುತ್ತಲೇ ಇದೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಕಂಡ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದೆ. ಆಂಟಿ ಪೈರಸಿ ಟೀಮ್ ಎಷ್ಟೇ ಪ್ರಯತ್ನಿಸಿದ್ರು ಇದನ್ನು ತಡೆಯೋಕೆ ಸಾಧ್ಯವಾಗುತ್ತಿಲ್ಲ. ಇದೀಗ 'ಕೋಣ' ಚಿತ್ರದ ನಿರ್ಮಾಪಕ ರವಿಕಿರಣ್ ಜೊತೆ ಸೇರಿ ದೊಡ್ಡ ಪೈರಸಿ ಜಾಲವನ್ನು ನಟ ಜಗ್ಗೇಶ್ ಭೇದಿಸಿದ್ದಾರೆ.
ಇತ್ತೀಚೆಗೆ ನಟ ಸುದೀಪ್ ಪೈರಸಿ ವಿರುದ್ಧ ಯುದ್ಧ ಮಾಡುತ್ತೇವೆ ಎಂದಿದ್ದರು. ಅದು ದೊಡ್ಡದಾಗಿ ಚರ್ಚೆ ಹುಟ್ಟಾಕ್ಕಿತ್ತು. 'ಡೆವಿಲ್' ಚಿತ್ರದ 10 ಸಾವಿರ ಪೈರಸಿ ಲಿಂಕ್ ಡಿಲೀಟ್ ಮಾಡಿರುವುದಾಗಿ ಚಿತ್ರತಂಡ ಮಾಹಿತಿ ನೀಡಿತ್ತು. '45' ಚಿತ್ರದ ಪೈರಸಿ ಲಿಂಕ್ ನನಗೆ ಬರ್ತಿದೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದ್ದರು. 'ಮಾರ್ಕ್' ಚಿತ್ರತಂಡ ಕೂಡ ಪೈರಸಿ ತಡೆಯಲು ಯತ್ನಿಸುತ್ತಿದೆ. ಆದರೂ 2 ಸಿನಿಮಾಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದೀಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಲೈವ್ ಬಂದು ಈ ಬಗ್ಗೆ ನಟ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ನಾಳೆ ಪೊಲೀಸರು ಆರೋಪಿಯನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸಲಿದ್ದಾರೆ. ಇಡೀ ಚಿತ್ರರಂಗ ಈ ಬಗ್ಗೆ ದನಿ ಎತ್ತಲಿದೆ. ಎಲ್ಲರೂ ನಮಗೆ ಬೆಂಬಲ ಸೂಚಿಸುತ್ತಾರೆ ಎಂದು ಜಗ್ಗೇಶ್ ಹೇಳಿದ್ದಾರೆ. ಪೈರಸಿಯಿಂದ ಚಿತ್ರರಂಗಕ್ಕೆ ಹೇಗೆ ನಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ. ಬಳಿಕ ಈ ಪೈರಸಿ ಜಾಲ ಭೇದಿಸಿದ್ದು ಹೇಗೆ ಎಂದು ಮಾಹಿತಿ ನೀಡಿದ್ದಾರೆ.
ನಿರ್ಮಾಪಕರು ಸಾಲ ಮಾಡಿ ಸಿನಿಮಾ ಮಾಡಿರುತ್ತಾರೆ. ನೂರಾರು ಜನರ ಶ್ರಮ ಚಿತ್ರದಲ್ಲಿರುತ್ತದೆ. ಆದರೆ ಸಿನಿಮಾ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಪೈರಸಿ ಮಾಡುತ್ತಾರೆ. ಎಷ್ಟು ನೋಡುತ್ತಾ ಕೂರಲು ಸಾಧ್ಯವಿಲ್ಲ. ಪೈರಸಿ ಅನ್ನೋದು ಕೊಲೆ ಅಥವಾ ಬ್ಯಾಂಕ್ ದರೋಡೆಗೆ ಸಮ ಎಂದು ಜಗ್ಗೇಶ್ ಹೇಳಿದ್ದಾರೆ. ಆನ್‌ಲೈನ್ ಬಳಕೆ ಬಗ್ಗೆ ಚೆನ್ನಾಗಿ ಗೊತ್ತಿರುವ 'ಕೋಣ' ಚಿತ್ರದ ನಿರ್ಮಾಪಕ ರವಿಕಿರಣ್ ಇದೀಗ ಈ ಪೈರಸಿ ಜಾಲವನ್ನು ಭೇದಿಸಿದ್ದಾರೆ. ಜಗ್ಗೇಶ್ ಅವರಿಗೆ ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳು ಯಾವ ಜಾಗದಿಂದ ದುಷ್ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎಂದು ಮಾಹಿತಿ ಪಡೆದು ನಂದಿನಿ ಲೇಔಟ್ ಪೊಲೀಸರಿಗೆ ನಟ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಿಡಿಗೇಡಿ ಒಬ್ಬನನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಗ್ಗೇಶ್ ವಿವರವಾಗಿ ಮಾಹಿತಿ ನೀಡಿದ್ದಾರೆ. ಇಂತಹ ಸಾಕಷ್ಟು ಪೈರಸಿ ಜಾಲಗಳಿವೆ. ನೂರಾರು ಜನ ಇದರಲ್ಲಿ ಭಾಗಿ ಆಗಿದ್ದಾರೆ. ಅವರೆಲ್ಲರಿಗೂ ತಕ್ಕ ಬುದ್ಧಿ ಕಲಿಸುತ್ತೇವೆ ಎಂದು ಜಗ್ಗೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
ಯಾರ್ಯಾರು ಚಿತ್ರಮಂದಿರಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡ್ತೀರಾ, ಅಪ್‌ಲೋಡ್ ಮಾಡ್ತೀರಾ? ಡೌನ್‌ಲೋಡ್ ಮಾಡ್ತೀರಾ, ಲಿಂಕ್ ಫಾರ್ವರ್ಡ್ ಮಾಡ್ತೀರಾ ಎಲ್ಲರನ್ನು ಜೈಲಿಗೆ ಕಳುಹಿಸುತ್ತೇವೆ. ಯಾರ ಅಕೌಂಟ್ ಬಯೋದಲ್ಲಿ ಸಿನಿಮಾ ಲಿಂಕ್ ಇರುತ್ತದೆ ಅಂತಹವರಿಗೂ ಶಿಕ್ಷೆ ಕಾದಿದೆ ಎಂದು ನಿರ್ಮಾಪಕ ರವಿಕಿರಣ್ ಹೇಳಿದ್ದಾರೆ. ಈಗಾಗಲೇ ಬಂಧಿತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆತನನ್ನು ಕ್ಯಾಮರಾ ಮುಂದೆ ತೋರಿಸುವಂತಿಲ್ಲ. ನಾಳೆ(ಡಿಸೆಂಬರ್ 31) ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದು ಜಗ್ಗೇಶ್ ವಿವರಿಸಿದ್ದಾರೆ.
ಸಿನಿಮಾ ಪೈರಸಿ ಆಗುತ್ತಿರುವುದರಿಂದ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ಸಿನಿಮಾಗಳು ಓಡಲ್ಲ. ಈಗ ಬಂಧನ ಆಗಿರುವವನು ಇಂಜಿನಿಯರಿಂಗ್ ವಿದ್ಯಾರ್ಥಿ. ಅವನ ಖಾತೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣವಿದೆ. ಇತ್ತೀಚೆಗೆ ಸಿನಿಮಾ ಮಾಡಿ ಪೈರಸಿ ಆಗಿ ನಟ ಒಬ್ಬ ಅತ್ತಿದ್ದು ನೋಡಿ ನನಗೆ ಬೇಸರವಾಯಿತು. ಸದ್ಯಕ್ಕೆ ನಾನು ನಟಿಸುತ್ತಿಲ್ಲ. ಬಹಳ ಬೇಸರವಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











