ತಂದೆ-ತಾಯಿಯನ್ನು ನೋಯಿಸಿದವ್ರು ನರಕ ಇಲ್ಲೇ ಅನುಭವಿಸುತ್ತಾರೆ; ಜಗ್ಗೇಶ್
ನಟ ಜಗ್ಗೇಶ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ಅನುಭವದ ಮಾತುಗಳಿಂದ ಗಮನ ಸೆಳೆಯುತ್ತಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರ್ತಿಸಿಕೊಂಡವರು. ಬಳಿಕ ಹೀರೊ ಆಗಿ ನಟಿಸಿ ಗೆದ್ದವರು ನವರಸ ನಾಯಕ.
ಸನಾತನದ ಧರ್ಮ, ನಮ್ಮ ಆಚರಣೆಗಳ ಬಗ್ಗೆ ಜಗ್ಗೇಶ್ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ವೇದಿಕೆಗಳಲ್ಲಿ ಮಾತನಾಡುತ್ತಾರೆ. ದೇಶದ ಆಗುಹೋಗುಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತಮ್ಮ ತಾಯಿಯಿಂದ ಪಡೆದ ಆಧ್ಯಾತ್ಮಿಕ ಜ್ಞಾನವನ್ನು ಮೊಮ್ಮಗನಿಗೆ ದಾಟಿಸುವ ಬಗ್ಗೆ ಅವರು ಬರೆದುಕೊಂಡಿದ್ದರು. ಇದೀಗ ಪತ್ರಿಕೆಯಲ್ಲಿ ಓದಿದ ಒಂದು ಸುದ್ದಿ ಕುರಿತು ಬೇಸರದಿಂದ ನವರಸ ನಾಯಕ ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ.

ಹೆತ್ತ ಮಗನೇ ತನ್ನ ತಾಯಿಯ ಕತ್ತು ಸೀಳಿ ಮಾಡಿರುವ ಅಮಾನುಷ ಕೃತ್ಯ ಇತ್ತೀಚೆಗೆ ವರದಿಯಾಗಿತ್ತು. ದೊಡ್ಡಬಳ್ಳಾಪುರ ಸಮೀಪದ ರಾಗರಾಳ್ಳಗುಟ್ಟೆ ಎಂಬಲ್ಲಿ ಈ ಘಟನೆ ನಡೆದಿತ್ತು. ರತ್ನಮ್ಮ ಎಂಬ ಮಹಿಳೆ ಮಗನಿಂದಲೇ ಹತ್ಯೆಯಾಗಿದ್ದಾರೆ. ತಾಯಿಯನ್ನು ಕೊಂದ ಆರೋಪದಲ್ಲಿ ಗಂಗರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸುದ್ದಿಯನ್ನು ದಿನಪತ್ರಿಕೆಯಲ್ಲಿ ಓದಿ ನಟ ಜಗ್ಗೇಶ್ ಕಳವಳ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
"ಇಂದು ಕನ್ನಡಪ್ರಭ ಪತ್ರಿಕೆಯಲ್ಲಿ ಮಗ, ಅಮ್ಮನ ಕತ್ತು ಸೀಳಿ ಕೊಂದ ಈ ವರದಿಯನ್ನು ನೋಡಿ ದುಃಖವಾಯಿತು. ಎತ್ತ ಸಾಗುತ್ತಿದೆ ಸಮಾಜ? ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು? ದೇಹ ಉಸಿರು ನೀಡಿ ಜನ್ಮಕೊಟ್ಟ ತಾಯಿ ದೇವರಿಗೆ ಸಮ ಎನ್ನುತ್ತದೆ. ಸನಾತನ ಧರ್ಮ ಅಂಥ ಮಾತುಗಳೆ ಸುಳ್ಳಾಗುತ್ತಿದೆ" ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
"ಇದಕ್ಕೆಲ್ಲಾ ಕಾರಣ ಯಾಂತ್ರಿಕ ಚಿಂತನೆ. ಸಸಿಯಲ್ಲೇ ಸರಿಮಾಡದೇ ಮರ ಹೆಮ್ಮರವಾದಾಗ ಸರಿಮಾಡಲಾಗುತ್ತದೆಯೇ? ಮಕ್ಕಳಿಗೆ ಭಯವಿಲ್ಲದೆ ಮುದ್ದು. ತಿದ್ದಲಾಗದ ವಿದ್ಯಾಲಯ. ನಮಗ್ಯಾಕೆ ಎನ್ನುವ ಸಮಾಜ. ಜಗತ್ತೇ ಮೊಬೈಲ್ ಆದ ದಿನಗಳು. ಆಡುವ ವಯಸಲ್ಲಿ ವ್ಯಸನ. ಹಣದ ಬೆಲೆ ಅರಿಯದವರ ಹಟಕ್ಕೆ ವಾಹನ ಕೊಡುಗೆ. ಅವನಿಗಿದೆ ನನಗಿಲ್ಲಾ ಎಂಬ ದ್ವೇಷಗುಣ. ಬೆವರು ಹರಿಸದೆ ಎಲ್ಲಾ ಸವಲತ್ತು ಬೇಕೆಂಬ ಆಸೆ. ತಾತ-ಅಜ್ಜಿ, ಅತ್ತೆ-ಮಾವ, ದೊಡ್ಡಪ್ಪ-ಚಿಕಪ್ಪ ಸಂಬಂಧ ಅರಿವಿರದೇ ಒಡೆದ ಕುಟುಂಬದ ಕಂದಮ್ಮಗಳು. ದೇವರು ಧರ್ಮದ ಭಯ ಆಚರಣೆ ಇಲ್ಲದ ಜೀವನದಲ್ಲಿ ಎಲ್ಲಿಂದ ಸುಸಂಸ್ಕೃತ ಜೀವಗಳು ಹುಟ್ಟಿ ವಂಶ ಬೆಳಗಬಲ್ಲವು? ಎಂದು ಪ್ರಶ್ನಿಸಿದ್ದಾರೆ.
ತಾಯಿಗಾಗಿ ಅವಳ ಸಂತಸಕ್ಕಾಗಿ ಬಾಳಿದ ನಮಗೆ 29ವರ್ಷಕ್ಕೆ ಅಮ್ಮನ ಕಳೆದುಕೊಂಡ ನತದೃಷ್ಟ ನಾನು.. ಅಮ್ಮ ಹಾಕಿದ ಗೆರೆ ಕಲಿಸಿದ ನೀತಿಪಾಠ ಕೈತೋರಿದ ದೇವರ ಪಾದ,ಕಲಿಸಿದ ನೀತಿ ಗುರುಹಿರಿಯರ ಮೇಲಿನ ಭಕ್ತಿ, ಬದುಕಿನ ಹಾಗು ಸಮಾಜದ ಮೇಲಿನ ಭಯ ನಮ್ಮ ಬದುಕಿನ ನಿತ್ಯ ಪೂಜೆಯಂತೆ ಆಚರಣೆ. ನನ್ನ 62ನೇ ವಯಸ್ಸಲ್ಲು ಪಾಲಿಸಿ ಅಮ್ಮನ ವಸ್ತುಗಳು ದೇವರ ಕೋಣೆಯಲ್ಲಿ ದೇವರ ಸಮವಾಗಿ ಪೂಜಿಸುತ್ತೇನೆ"
ಅಮ್ಮನನ್ನೇ ಕೊಲೆವಮಾಡಿದ ಮಗ ಎಂದು ಓದಿ ಭಾವುಕನಾಗಿ ನನ್ನ ದಿನಚರಿ ಕಾರ್ಯವೇ ಮರೆತು ಸ್ನಾನ ಪೂಜೆ ಇಲ್ಲದೇ ಶವದಂತೆ ಕೂತುಬಿಟ್ಟೆ. ತಾಯಿ ದೇವರು ಎಂದವರಿಗೆ ತಾಯಿ ಇಲ್ಲಾ ಗೌರವಿಸದಿರುವವರಿಗೆ ತಾಯಿ ಎಂಥ ವಿಚಿತ್ರ ದೇವರ ಲೀಲೆ. ಒಂದಂತು ಸತ್ಯ ತಂದೆತಾಯಿಯನ್ನು ನೋಯಿಸಿದವರು ನರಕ ಇಲ್ಲೇ ಅನುಭವಿಸುತ್ತಾರೆ. ಮಾತೃದೇವೋಭವ, ಧನ್ಯವಾದ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಜಗ್ಗೇಶ್ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಅವರ ಮಾತಿಗೆ ದನಿಗೂಡಿಸುತ್ತಿದ್ದಾರೆ. ಬದಲಾದ ಪ್ರಪಂಚದ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಸದ್ಯ ಜಗ್ಗೇಶ್ ಕಾಮಿಡಿ ಕಿಲಾಡಿಗಳು ಶೋ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ರಂಗನಾಯಕ' ಬಳಿಕ ಹೊಸ ಸಿನಿಮಾದಲ್ಲಿ ಪ್ರೇಕ್ಷಕರನ್ನು ನವರಸ ನಾಯಕ ರಂಜಿಸಲು ಸಿದ್ಧರಾಗುತ್ತಿದ್ದಾರೆ.


Click it and Unblock the Notifications











