ಸಾಕು ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ನಟ ಜಗ್ಗೇಶ್
ನಟ ಜಗ್ಗೇಶ್ ಇತ್ತೀಚಿಗಷ್ಟೆ ತಮ್ಮ ಸಾಕು ತಾಯಿ ಮೋರು ಬಾಯ್ ಅವರ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ, ಇಂದು ಜಗ್ಗೇಶ್ ರನ್ನು ಆ ತಾಯಿ ಅಗಲಿದ್ದಾರೆ.
ಜಗ್ಗೇಶ್ ಸಾಕು ತಾಯಿ ಮೋರು ಬಾಯ್ ಇಂದು (ಜುಲೈ 7) ನಿಧನರಾಗಿದ್ದಾರೆ. ಸಾಕು ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ. ಜನ್ಮ ನೀಡಿದ ತಾಯಿಯ ಬಳಿ ಈ ತಾಯಿಯೂ ಹೋದರು ಎಂದು ಜಗ್ಗೇಶ್ ನೋವು ಹಂಚಿಕೊಂಡಿದ್ದಾರೆ.
ಜಗ್ಗೇಶ್ ತಮ್ಮ ತಾಯಿಯನ್ನು ತುಂಬ ಪ್ರೀತಿಸುತ್ತಾರೆ. ಅವರ ಅಗಲಿಕೆಯ ನಂತರ ಆ ತಾಯಿಯ ತಾಳಿಯನ್ನು ತಾವೇ ಹಾಕಿಕೊಂಡಿದ್ದಾರೆ. ಜನ್ಮ ನೀಡಿದ ತಾಯಿಯ ಸಾವಿನ ದುಃಖವನ್ನು ಸಾಕು ತಾಯಿಯ ಮೂಲಕ ಅವರು ಮರೆಯುತ್ತಿದ್ದರು. ಆದರೆ, ಇಂದು ಅವರ ಪಾಲಿಗೆ ಇಬ್ಬರು ಇಲ್ಲವಂತೆ ಆಗಿದೆ. ಮುಂದೆ ಓದಿ..

ಜನ್ಮ ನೀಡಿದ್ದು ನಂಜಮ್ಮ, ಸಾಕಿದ್ದು ಮೋರು ಬಾಯ್
ಜಗ್ಗೇಶ್ ತಾಯಿಯ ಹೆಸರು ನಂಜಮ್ಮ. ಅವರ ಗೆಳತಿಯೇ ಮೋರು ಬಾಯ್. ಜಗ್ಗೇಶ್ ಸಣ್ಣ ವಯಸ್ಸಿನಿಂದ ಇವರ ಜೊತೆಗೆ ಬೆಳೆದರು. ತಾಯಿಯ ಜೊತೆಗೆ ಇದ್ದಷ್ಟು ಬಾಂದವ್ಯ ಇವರ ಜೊತೆಗೆ ಇತ್ತು. ನಂಜಮ್ಮ ಜನ್ಮ ನೀಡಿದ ತಾಯಿಯಾದರೆ, ಮೋರು ಬಾಯ್ ಸಾಕು ತಾಯಿಯಾಗಿದ್ದರು.

ಕಾಣದ ದೂರದ ಊರಿಗೆ ಹೋಗಿ ಬಿಟ್ಟಳು
ಸಾಕು ತಾಯಿ ಕಳೆದುಕೊಂಡ ದುಃಖವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ. ''ನನ್ನ ಸಾಕು ತಾಯಿ ಮೋರುಬಾಯ್ ಜನ್ಮ ಕೊಟ್ಟ ನನ್ನ ತಾಯಿ ಬಳಿ ಸಂಗಾತಿಯಾಗಲು ಹೋಗಿಬಿಟ್ಟಳು. ಕಳೆದ ವಾರ ಹರಸಿ ಕಳಿಸಿದಳು. ಇಂದು ಹರಸಲಾಗದ ಕಣ್ಣಿಗೆ ಕಾಣದ ದೂರದ ಊರಿಗೆ ಹೋಗಿ ಬಿಟ್ಟಳು!. ಇಷ್ಟೆ ಅಲ್ಲವೆ ಮನು ಜನ್ಮ..'' ಎಂದಿದ್ದಾರೆ.

ಅವಳ ಮರೆಯಲು ಸಾಧ್ಯವೇ!
''ಅವಳ ಕೈ ತುತ್ತು ತಿಂದ ನಾನು ಅವಳ ಮರೆಯಲು ಸಾಧ್ಯವೇ!. ನನಗೆ ಮಮತೆ ತೋರಿ ತುತ್ತು ತಿನ್ನಿಸಿದ ಕಡೆ ತಾಯಿ ಪ್ರೀತಿಯ ಕೊಂಡಿಯು ಹೋಯಿತು! ಅಮ್ಮನಂತೆ ಇವಳು ಇನ್ನುಮುಂದೆ ನೆನಪು ಮಾತ್ರ..ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ..ಓಂ ಶಾಂತಿ...'' ಎಂದು ಭಾವುಕವಾಗಿ ಜಗ್ಗೇಶ್ ಸಾಲುಗಳನ್ನು ಬರೆದಿದ್ದಾರೆ.

ನಮ್ಮನ್ನು ನೋಡಿಕೊಂಡ ತಾಯಿ ಆಕೆ
''ನನ್ನ ಸಾಕು ತಾಯಿ ಮೌರುಬಾಯ್, ಅಮ್ಮನ ಗೆಳತಿ ಹಾಗು ಆಕೆಗೆ ಆಧ್ಯಾತ್ಮಿಕ ದಾರಿ ತೊರಿದವರು. ಅಪ್ಪ ಇಂದಿನ ಮಂತ್ರಿಮಾಲ್ ಜಾಗದಲ್ಲಿದ್ದ ರಾಜಾಮಿಲ್ ನಲ್ಲಿ ಬಂಡಲಿಂಗ್ ಸೆಕ್ಷನ್ ನಲ್ಲಿ ಕಾರ್ಯ ಮಾಡುತ್ತಾ ಶ್ರೀರಾಮಪುರದ 2ನೆ ಕ್ರಾಸ್ ನಲ್ಲಿ ರೇಷನ್ ಡಿಪೊ ನಡೆಸುತ್ತಿದ್ದರು ಅದರ ಜವಾಬ್ದಾರಿ ಅಮ್ಮನದಾಗಿತ್ತು..ಆಗ ಅಪ್ಪ ಅಮ್ಮನಿಗೆ 4 ಮಕ್ಕಳು..ಇನ್ನು ಕೋಮಲ್ ಹುಟ್ಟಿರಲಿಲ್ಲಾ..ಆಗ ಅಮ್ಮನಿಗೆ ಮಕ್ಕಳು ನೋಡಿಕ್ಕೊಂಡು ಡಿಪೋ ನಡೆಸಲು ಕಷ್ಟ ಅಂತ ಮೌರು ಬಾಯ್ ರವರನ್ನ ನಮ್ಮನ್ನ ನೋಡಿಕ್ಕೊಳ್ಳಲು ನೇಮಿಸಿಕ್ಕೊಂಡರು ಅಪ್ಪ.'' ಎಂದು ಸಾಕು ತಾಯಿಯನ್ನು ನೆನೆದಿದ್ದಾರೆ.


Click it and Unblock the Notifications











