"ನಾನು ಕ್ಷೇಮ, ನನ್ನ ಕೇಡು ಬಯಸುವವರು ಸುಖವಾಗಿ ಬಾಳಿ"; ನಟ ಜಗ್ಗೇಶ್
ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ಜಗ್ಗೇಶ್. ತಮ್ಮ ವಿಭಿನ್ನ ಪಾತ್ರಗಳ ಮೂಲಕ ನವರಸ ನಾಯಕ ಮೋಡಿ ಮಾಡುತ್ತಾ ಬರುತ್ತಿದ್ದಾರೆ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ರಾಜ್ಯಸಭೆ ಬಿಜೆಪಿ ಸಂಸದನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ನವರಸನಾಯಕ ಜಗ್ಗೇಶ್ ಇತ್ತೀಚೆಗೆ ನಟಿಸಿದ 'ರಂಗನಾಯಕ' ಸಿನಿಮಾ ಹೀನಾಯವಾಗಿ ಸೋತಿತ್ತು. ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಯಿತು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಜಗ್ಗಣ್ಣ ದೇಶದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಕುರಿತು ಜಗ್ಗೇಶ್ ಆಡಿದ್ದ ಕೆಲ ಮಾತುಗಳು ವೈರಲ್ ಆಗಿತ್ತು. ಭಾರೀ ಚರ್ಚೆಗೆ ಕಾರಣವಾಗಿತ್ತು.

ಇತ್ತೀಚೆಗೆ ಜಗ್ಗೇಶ್ ತಮ್ಮದೇ ಒಂದು ಸ್ಟುಡಿಯೋ ಆರಂಭಿಸಿದ್ದರು. ಒಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಬೇಕಾದ ಸೌಲಭ್ಯ ಈ ಸ್ಟುಡಿಯೋದಲ್ಲಿದೆ. 40 ವರ್ಷಗಳ ತಮ್ಮ ಕನಸ್ಸನ್ನು ಈ ರೀತಿ ಈಡೇರಿಸಿಕೊಂಡಿದ್ದರು. ಇದೆಲ್ಲದರ ನಡುವೆ ಇತ್ತೀಚೆಗೆ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ ಬಗ್ಗೆ ನವರಸ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.
ವೀವ್ಸ್, ಲೈಕ್ಸ್, ಸಬ್‌ಸ್ಕ್ರೈಬ್‌ಗಾಗಿ ಕೆಲ ಯೂಟ್ಯುಬ್ ಚಾನಲ್ ಹಾಗೂ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಚೆನ್ನಾಗಿ ಇರುವವರ ಬಗ್ಗೆ ಆಸ್ಪತ್ರೆ ಸೇರಿದ್ದಾರೆ, ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ, ಅಥವಾ ಸತ್ತೇ ಹೋದರು ಎಂದು ಫೇಕ್ ನ್ಯೂಸ್ ಹಾಕುತ್ತಿದ್ದಾರೆ. ತಮ್ಮ ಬಗ್ಗೆ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದ ಇಂತದ್ದೇ ಸುಳ್ಳು ಸುದ್ದಿ ಬಗ್ಗೆ ಜಗ್ಗೇಶ್ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
"ವಿಚಿತ್ರ ಕಾಲದಲ್ಲಿ ಬಾಳುತ್ತಿದ್ದೇವೆ ನಾವೆಲ್ಲಾ. ಆರೋಗ್ಯ ಇದ್ದವರಿಗೆ ರೋಗ. ಬದುಕಿರುವವರು ಸತ್ತಿದ್ದಾರೆ. ಒಂದು ಮಾತಿಗೆ ನೂರರ್ಥ ಕಲ್ಪಿಸಿ ಅದರಿಂದ ಬದುಕು ಕಾಣುವುದು. ವಿಪರ್ಯಾಸ ದಿನಗಳು" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
"ರಾಯರಕೃಪೆ ಇರುವವರೆಗೆ ನಾನು ಕ್ಷೇಮ ಹಾಗು ನನ್ನ ಕೇಡು ಬಯಸುವವರು ಸುಖವಾಗಿ ಬಾಳಿ. ನನ್ನ ಪಿಎಗೆ ನನ್ನ ಆರೋಗ್ಯ ವಿಚಾರಿಸಿದ ಮಾಧ್ಯಮಮಿತ್ರರಿಗೆ ಧನ್ಯವಾದ" ಎಂದು ಟ್ವೀಟ್ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಹರಿದಾಡಿದ ಒಂದು ಸುಳ್ಳು ಸುದ್ದಿಯಿಂದ ಇಷ್ಟೆಲ್ಲಾ ಆಯಿತು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಆ ಸುದ್ದಿ ನೋಡಿ ಸಾಕಷ್ಟು ಜನ ಫೋನ್ ಮಾಡಿ ಜಗ್ಗೇಶ್ ಅವರ ಬಗ್ಗೆ ವಿಚಾರಿಸಿದ್ದರು. ಅದಕ್ಕೆ ಬೇಸರಗೊಂಡು ಈ ರೀತಿ ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕೂಡ ಕೆಲ ನಟ, ನಟಿಯರ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಕೆಲವರು ನಿಜ ಎಂದು ನಂಬಿದ್ದು ಇದೆ. ಬಳಿಕ ಸುಳ್ಳು ಎಂದು ಗೊತ್ತಾಗಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಇದೀಗ ನವರಸ ನಾಯಕನ ಬಗ್ಗೆಯೂ ಇಂತದ್ದೆ ಸುದ್ದಿ ಹರಿದಾಡಿ ಗೊಂದಲ ನಿರ್ಮಾಣವಾಗಿತ್ತು. ಇನ್ನು 'ರಂಗನಾಯಕ' ಸಿನಿಮಾ ಬಳಿಕ ಕಥೆಗಳ ಆಯ್ಕೆ ವಿಚಾರದಲ್ಲಿ ಜಗ್ಗೇಶ್ ಬಹಳ ಚೂಸಿ ಆಗಿದ್ದಾರೆ.
ಎರಡ್ಮೂರು ಕತೆಗಳನ್ನು ಈಗಾಗಲೇ ಜಗ್ಗೇಶ್ ಕೇಳಿದ್ದು ಶೀಘ್ರದಲ್ಲೇ ಹೊಸ ಸಿನಿಮಾ ಶುರುವಾಗಲಿದೆ. ಹಣಕ್ಕಾಗಿ ಸಿನಿಮಾ ಮಾಡಬಾರದು, ನಿರ್ದೇಶಕ, ಕಥೆ, ನಿರ್ಮಾಪಕನ ವಿಚಾರದಲ್ಲಿ ಸ್ಪಷ್ಟತೆ ಇದ್ದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳಬೇಕು ಎಂದು ನಿರ್ಧರಿಸಿರುವುದಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜಗ್ಗಣ್ಣ ಹೇಳಿಕೊಂಡಿದ್ದಾರೆ.
ತಮ್ಮದೇ ಲವ್‌ಸ್ಟೋರಿಯನ್ನು ಸಿನಿಮಾ ಮಾಡುವ ಕನಸು ಜಗ್ಗೇಶ್ ಅವರಿಗಿದೆ. ಆ ಚಿತ್ರದಲ್ಲಿ ಮಗ ಗುರು ಹೀರೊ ಆಗಬೇಕು ಎನ್ನುವುದು ಪತ್ನಿ ಆಸೆ ಎಂದು ನವರಸ ನಾಯಕ ಆಗಾಗ್ಗೆ ಹೇಳುತ್ತಿರುತ್ತಾರೆ. ಯಾವಾಗ ಆ ಸಿನಿಮಾ ಆಗುತ್ತೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದರು.


Click it and Unblock the Notifications











