"ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಈ ಸೆಲೆಬ್ರಿಟಿಯ ಬದುಕು"; ನಟ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ. ಜಗ್ಗಣ್ಣನ ನಟನೆಗೆ ನವರಸ ನಾಯಕ ಎಂಬ ಬಿರುದು ಸಿಕ್ಕಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆದವರು ಜಗ್ಗೇಶ್.
ತಮ್ಮ ಕಾಮಿಡಿಯಿಂದ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್‌ರಂತಹ ಸ್ಟಾರ್‌ಗಳ ಫೇವರಿಟ್ ನಟ ಎನಿಸಿಕೊಂಡವರು ಜಗ್ಗಣ್ಣ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ನವರಸನಾಯಕ ಗೆದ್ದಿದ್ದಾರೆ. ಇವತ್ತಿಗೂ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಗ್ಗೇಶ್ ಹೇಳಿಕೆಗಳು ಟ್ರೋಲ್‌ಗೆ ಕಾರಣವಾಗುತ್ತಿದೆ. ಏನೋ ಹೇಳಿದರೆ ಅದು ಮತ್ತೇನೋ ಆಗಿ ವಿವಾದಕ್ಕೆ ಕಾರಣವಾಗುತ್ತಿದೆ.

ತಾರೆಯರ ಬದುಕು ಅಷ್ಟು ಸುಲಭವಲ್ಲ. ಸಾಮಾನ್ಯರಂತೆ ಬದುಕುವುದು ಅವರಿಗೆ ಕಷ್ಟವಾಗುತ್ತದೆ ಎಂದು ಸಾಕಷ್ಟು ನಟ-ನಟಿಯರೇ ಹೇಳಿಕೊಂಡಿದ್ದಾರೆ. ಸದ್ಯ ನಟ ಜಗ್ಗೇಶ್ ತಮ್ಮ ಫೇಸ್‌ಬುಕ್‌ನಲ್ಲಿ ಸೆಲೆಬ್ರಿಟಿಗಳ ಬದುಕು ಎಷ್ಟು ಕಷ್ಟ ಎನ್ನುವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.
"ಸೆಲೆಬ್ರಿಟಿ ಆಗಲು ಎಲ್ಲರು ಒಂದಿಲ್ಲಾ ಒಂದುರೀತಿ ಯತ್ನಿಸುತ್ತಾರೆ. ಕೆಲವರು ನಟ-ನಟಿ ಕೆಲವರು ರಂಗಕಲಾವಿದರಾಗಿ, ಕೆಲವರು ಟೀವಿ ಕೆಲವರು ತಮ್ಮ ಮೊಬೈಲ್ ಮೂಲಕ ಮತ್ತೆ ಕೆಲವರು ಯೂಟ್ಯೂಬ್ ಮೂಲಕ ಒಟ್ಟಾರೆ ಹೇಗಾದರೂ ಸರಿ ಸೆಲೆಬ್ರಿಟಿ ಆಗಲೇಬೇಕು ಆಗದಿದ್ದರೆ ಡಿಪ್ರೇಶನ್‌ಗೆ ಒಳಗಾಗುತ್ತಾರೆ."
"ನಾನು ಸೆಲೆಬ್ರಿಟಿ ಕನಸು ಕಂಡವನಲ್ಲಾ ಕಟ್ಟಿಕೊಂಡ ಮಡದಿ ಹಾಗು ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸು ಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು. ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು. ಎಲ್ಲರಂತೆ ಎಲ್ಲಾಕಡೆ ಎಲ್ಲಾ ಸಂತೋಷ ನೋಡುವ ಯೋಗ ಇಲ್ಲವಾಯಿತು"
"ಪ್ರತಿದಿನ ಯಾರು ಏನು ಹೇಳುತ್ತಾರೋ, ಯಾರು ತಪ್ಪು ಕಂಡು ಹಂಗಿಸುತ್ತಾರೋ, ಯಾರು ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ, ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್‌ನಲ್ಲಿ ಚಿತ್ರಿಸಿ ಲೈಕ್ಸ್‌ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ ಯಾರು ನನ್ನ ಕೇಡು ಬಯಸುತ್ತಾರೋ? ಒಟ್ಟಾರೆ ಸೆಲೆಬ್ರಿಟಿ ಬದುಕು ಜೀವನಪರ್ಯಂತ ಜೈಲುವಾಸ ಬದುಕು. ಅಥವಾ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಸೆಲೆಬ್ರಿಟಿ ಯ ಬದುಕು"

"ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವಾ ಪಂಜರದಿಂದ ಹಾರಿ ಪರಿಸರ ಸವಿಯೋ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನಮಾಡುತ್ತಿದ್ದೇನೆ. ಇದರಲ್ಲಿ ಪೂರ್ಣ ಸಂತೋಷ ಸಿಗುತ್ತಿದೆಯೇ? ಸತ್ಯವಾಗಿಯೂ ಇಲ್ಲ. ಏನೋ ಒಂದೇ ಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೆ ಈ ಸೆಲಬ್ರಿಟಿಯ ಬದುಕು"
"ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳಲ್ಲಿ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಭಾಸವಾಯಿತು"
"ಸೆಲೆಬ್ರಿಟಿಯ ಬದುಕು ಕಂಡು ನೀವು ಸೆಲಬ್ರಿಟಿ ಆಗಬೇಕಾ? ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕಾ? ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ, ಸಮಾಜವೇ ರಂಗಮಂದಿರ, ದೇವರೇ ಸೂತ್ರದಾರ, ಅಭಿಮಾನಿಗಳೇ ಬಂಧುಮಿತ್ರರು" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.


Click it and Unblock the Notifications











