ಪ್ರಾರ್ಥನೆ ಕೇಳಲಿಲ್ಲ, ಮಾದೇಗೌಡರ ಮಗ ಇನ್ನಿಲ್ಲ: ನನ್ನ ದೇಹ ಸುಟ್ಟಂತೆ ಆಗಿದೆ
''ಎಷ್ಟೇ ಪ್ರಾರ್ಥಿಸಿದರೂ ಆ ಜೀವ ಉಳಿಯಲಿಲ್ಲ. ನನ್ನ ದೇಹ ಸುಟ್ಟಂತೆ ಆಗಿದೆ. ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ'' ಎಂದು ಹಿರಿಯ ನಟ ಜಗ್ಗೇಶ್ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.
ಜಗ್ಗೇಶ್ ಅವರ ಬಳಿ ಸುಮಾರು 35 ವರ್ಷದಿಂದ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಮಾದೇಗೌಡ ಅವರ ಪುತ್ರ ಕೊರೊನಾ ವೈರಸ್‌ಗೆ ಪ್ರಾಣ ಕಳೆದುಕೊಂಡಿದ್ದಾರೆ. ತನ್ನ ಮಗನಿಗಿಂತ ಒಂದು ವರ್ಷ ಚಿಕ್ಕವನಾಗಿದ್ದ ಮಾದೇಗೌಡರ ಪುತ್ರನಿಗೆ ಆರು ತಿಂಗಳ ಹಿಂದೆಯಷ್ಟೇ ಮಗು ಹುಟ್ಟಿತ್ತು. ಈ ನೋವು ಜಗ್ಗೇಶ್ ಅವರನ್ನು ಬಹಳ ಕಾಡಿದೆ. ಈ ಕುರಿತು ಟ್ವಿಟ್ಟರ್‌ನಲ್ಲಿ ತೀರಾ ನೋವು ವ್ಯಕ್ತಪಡಿಸಿದ್ದಾರೆ.
''ನನ್ನ ಉಸಿರಿನಂತೆ ಬೆನ್ನಿಗೆ ನಿಂತು ನನ್ನ ಬದುಕಿನ ಬಹುಭಾಗ ಒಡಹುಟ್ಟಿದವನಂತೆ ಬಾಳಿದವ ಮಾದೇಗೌಡ. ಅವನ ಮಗನ ಈ ಪೀಡೆರೋಗ ನುಂಗಿಹಾಕಿತು. ಇದ್ದವನು ಒಬ್ಬನೆ ಮಗ ಮಸಣಸೇರಿಬಿಟ್ಟ. ಬಹಳ ನೊಂದು ಹೋಗಿರುವೆ. ನನ್ನ ಮಗನಿಗಿಂತ 1 ವರ್ಷ ಕಿರಿಯ. ಅವನಿಗೆ ಮಗಳು ಹುಟ್ಟಿ 6 ತಿಂಗಳು ಆಗಿದೆ. ಹೇಗೆ ಸಹಿಸುತ್ತಾನೆ ದುಃಖ ಮಾದೆಗೌಡ. ನನ್ನ ದೇಹವೆ ಸುಟ್ಟಂತೆ ಆಗಿದೆ. ಕ್ರೂರವಿಧಿ'' ಎಂದು ಆಕ್ರೋಶ ಹೊರಹಾಕಿದ್ದಾರೆ.

'ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ. ಮಾದೇಗೌಡನ ಮಗನ ಸಾವಿನಿಂದ ನನ್ನಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರು ಸಮಾಧಾನ ಆಗುತ್ತಿಲ್ಲಾ. ಬಂಗಾರದಂತ ನನ್ನ ಆತ್ಮೀಯ ಹೃದಯಗಳೆ ನಿಮ್ಮ ನೀವು ಕಾಪಾಡಿಕೊಳ್ಳಿ ಯಾರು ನಮಗಾಗಿ ಬರರು ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ. ಸ್ವಾರ್ಥ ಮೋಸ ಧನಧಾಹಿ ಜಗತ್ತು. ಒಳ್ಳೆಯವರಿಗಲ್ಲಾ ಇಂದಿನ ಜಗತ್ತು. ಕ್ಷಮೆಯಿರಲಿ' ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ಅದಕ್ಕೂ ಮುಂಚೆ ಮಾದೇಗೌಡ ಅವರ ಪುತ್ರ ಕೋವಿಡ್‌ನಿಂದ ಗುಣಮುಖರಾಗಲಿ ಎಂದು ನಟ ಜಗ್ಗೇಶ್ ಪ್ರಾರ್ಥಿಸಿದ್ದರು.
''35 ವರ್ಷದಿಂದ ನನ್ನ ಮುಖಕ್ಕೆ ಬಣ್ಣ ಬಳಿದು ನನ್ನ ಬೆಳವಣಿಗೆಗೆ ಸಹಾಯ ಮಾಡಿದ ಹಾಗು ನನ್ನ ಮ್ಯಾನೇಜರ್ ಮದೇಗೌಡರ ಒಬ್ಬನೆ ಮಗ ಮಹಾಮಾರಿ ಕೋವಿಡ್ ನಿಂದ ಸಾವು-ಬದುಕಿನಲ್ಲಿ ಹೋರಾಡುತ್ತಿರುವ ದಯಮಾಡಿ ಅವನ ಕ್ಷೇಮಕ್ಕೆ ಪ್ರಾರ್ಥಿಸಿ..ನಿಮ್ಮ ಪ್ರಾರ್ಥನೆ ದೇವರಿಗೆ ಮುಟ್ಟಲಿ..'' ಎಂದು ವಿನಂತಿಸಿ ಟ್ವೀಟ್ ಮಾಡಿದ್ದರು.


Click it and Unblock the Notifications











