ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!
ನಟ, ರಾಜಕಾರಣಿ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ. ಅಭಿಮಾನಿಗಳೊಟ್ಟಿಗೆ ಆಗಾಗ್ಗೆ ಸಂವಾದ ಮಾಡುತ್ತಿರುತ್ತಾರೆ ಈ ನಟ.
ಅಭಿಮಾನಿಗಳಿಗೆ ಸಲಹೆಗಳನ್ನು ನೀಡುವುದು, ಜೀವನ ಪಾಠ ಹೇಳುವುದು, ಅಧ್ಯಾತ್ಮದ ಮಾತುಗಳನ್ನು ಹೇಳುವುದು, ರಾಜಕಾರಣದ ವಿಷಯ, ದೇಶಭಕ್ತಿಯ ವಿಷಯಗಳು ಇನ್ನಿತರೆ ವಿಷಯಗಳ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ತಮ್ಮ ಕುಟುಂಬದ ವಿಷಯವನ್ನೂ ಹಂಚಿಕೊಳ್ಳುತ್ತಿರುತ್ತಾರೆ.
ತಮ್ಮ ಮನೆ, ಕುಟುಂಬದ ಸದಸ್ಯರ ಬಗ್ಗೆಯೂ ಆಗಾಗ್ಗೆ ಪೋಸ್ಟ್ ಹಾಕುವ ಜಗ್ಗೇಶ್ ಇಂದು ತಮ್ಮ ಮನೆಯ ವಿಶೇಷ ಸದಸ್ಯನ ಕುರಿತಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಬಹಳ ಮಜವಾಗಿದೆ.

ಜಗ್ಗೇಶ್ ತಮ್ಮ ಸಾಕುನಾಯಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಜಗ್ಗೇಶ್, ''ನಾನಿಂದು ಅದ್ಭುತವಾದ ವ್ಯಕ್ತಿಯನ್ನು ಪರಿಚಯಿಸುತ್ತೇನೆ. ನಾನು ಹಾಡಿದರೆ ಅವನು ನನ್ನೊಟ್ಟಿಗೆ ಹಾಡುತ್ತಾನೆ. ಒಳ್ಳೆಯ ಸಂಗೀತ ವಿಧ್ವಾಂಸ'' ಎಂದು ಹೇಳಿ ಆ... ಎಂದು ರಾಗ ಆಲಾಪಿಸುತ್ತಾರೆ. ಕೂಡಲೇ ಅವರ ನಾಯಿ ಸಹ ಅವರಂತೆಯೇ ರಾಗವಾಗಿ ಊಳಿಡಲು ಆರಂಭಿಸುತ್ತದೆ.
ಜಗ್ಗೇಶ್ ಹಾಡು ನಿಲ್ಲಿಸುವವರೆಗೂ ನಿಲ್ಲದೇ ರಾಗವಾಗಿ ಊಳಿಡುತ್ತದೆ ನಾಯಿ. ಈ ವಿಡಿಯೋ ಬಹಳ ತಮಾಷೆಯಾಗಿದೆ. ವಿಡಿಯೋವನ್ನು ಈಗಾಗಲೇ ಹಲವಾರು ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ. ವಿಡಿಯೋದಲ್ಲಿರುವುದು ಜಗ್ಗೇಶ್ ಅವರ ಸಾಕು ನಾಯಿ, ಅದನ್ನು ತಮ್ಮ ಸ್ನೇಹಿತ ಎಂದೇ ಜಗ್ಗೇಶ್ ಭಾವಿಸಿದ್ದಾರೆ. ವಿಡಿಯೋದ ಜೊತೆಗೆ ''ನನ್ನ ಸ್ನೇಹಿತ ನನ್ನ ಪ್ರಾಣ.. ಪ್ರಾಣಿಗಳೆ ಗುಣದಲಿ ಮೇಲು ದಯೆ ಇರಲಿ ಸಕಲ ಪ್ರಾಣಿಗಳ ಮೇಲೆ'' ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಇತ್ತೀಚೆಗಷ್ಟೆ ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ರಾಜ್ಯಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ ಸಹ. ಇತ್ತೀಚೆಗೆ ರಾಜ್ಯಸಭಾ ಕಲಾಪದ ವಿಡಿಯೋ ಅನ್ನು ಸಹ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಈ ಸಮಯಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಆದರೆ ಜಗ್ಗೇಶ್ ಅವರ ನಟನೆಯ ಮತ್ತೊಂದು ಸಿನಿಮಾ 'ತೋತಾಪುರಿ' ಮುಂದಿನ ತಿಂಗಳು ಬಿಡುಗಡೆ ಆಗಲಿದೆ.


Click it and Unblock the Notifications











