"ಕೆಲ ಕೈಗೆಟಕದ ದ್ರಾಕ್ಷಿಯ ಕಣ್ಣಿಗೆ ಕಾಮಿಡಿಪೀಸು" ಹೀಗಂದಿದ್ಯಾಕೆ ನವರಸ ನಾಯಕ ಜಗ್ಗೇಶ್?
80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದು ಇವತ್ತಿಗೂ ಬೇಡಿಕೆ ಉಳಿಸಿಕೊಂಡಿರುವ ನಟರಲ್ಲಿ ಶಿವರಾಜ್‌ಕುಮಾರ್, ರವಿಚಂದ್ರನ್, ಜಗ್ಗೇಶ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಸೋತಾಗಲೆಲ್ಲಾ ಮತ್ತೆ ಮತ್ತೆ ಗೆದ್ದು ಬಂದು ಕ್ರೇಜ್ ಉಳಿಸಿಕೊಂಡಿದ್ದಾರೆ. ಜಗ್ಗಣ್ಣ ಇವತ್ತಿಗೂ ನಿರ್ಮಾಪಕರ ಪಾಲಿನ ಮಿನಿಮಮ್ ಗ್ಯಾರೆಂಟಿ ನಟ. ಆದರೆ ಇತ್ತೀಚೆಗೆ ಬಂದ 'ರಂಗನಾಯಕ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.
ನವರಸ ನಾಯಕ ಜಗ್ಗೇಶ್ ಕಾಮಿಡಿ ಟೈಮಿಂಗ್, ಹಾವಭಾವ, ಡೈಲಾಗ್ ಡೆಲಿವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ತೆರೆಮೇಲೆ ಅಷ್ಟೇ ಅಲ್ಲ, ತೆರೆ ಹಿಂದೆ ಕೂಡ ಜಗ್ಗೇಶ್ ನಗಿಸುವುದರಲ್ಲಿ ನಿಸ್ಸೀಮರು. ಜಗ್ಗಣ್ಣನ ಮಾತಿನ ಶೈಲಿ, ನಗು ಬೆರೆಸಿದ ಮಾತುಗಳು, ಮಿಮಿಕ್ರಿ ಸಖತ್ ಮಜಾ ಕೊಡುತ್ತದೆ. ಇನ್ನು ತಮ್ಮ ನೇರಾನೇರ ಮಾತುಗಳಿಂದಲೂ ಜಗ್ಗೇಶ್ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಜಗ್ಗಣ್ಣ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಜಗ್ಗಣ್ಣನ ನಟನೆ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ನವರಸ ನಾಯಕ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಿನಿಪಯಣದ ಬಗ್ಗೆ ಮೆಲುಕು ಹಾಕಿದ್ದಾರೆ. ಸದ್ಯ ಆ ಟ್ವೀಟ್ ವೈರಲ್ ಆಗುತ್ತಿದೆ.
ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಎದ್ದೇಳು ಮಂಜುನಾಥ' ಸಿನಿಮಾ ಹಿಟ್ ಆಗಿತ್ತು. 2009ರಲ್ಲಿ ಬಂದಿದ್ದ ಈ ಚಿತ್ರದಲ್ಲಿ ಬಹಳ ಸೋಂಬೆರಿ ವ್ಯಕ್ತಿಯಾಗಿ ಜಗ್ಗಣ್ಣ ನಟಿಸಿದ್ದರು. ಡ್ರಾಮಾ ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಸನ್ನಿವೇಶವೊಂದರಲ್ಲಿ ಜಗ್ಗಣ್ಣ ವೇದಿಕೆ ಏರಿ ನಗಿಸಿದ್ದನ್ನು ಪ್ರೇಕ್ಷಕರು ಇನ್ನು ಮರೆತ್ತಿಲ್ಲ. ಟೈಗರ್ ಪ್ರಭಾಕರ್, ಅಂಬರೀಶ್ ಹೀಗೆ ಹಲವರ ವಾಯ್ಸ್ ಮಿಮಿಕ್ರಿ ಮಾಡಿ ಧಾರಾವಾಹಿ, ಸಿನಿಮಾ, ಡ್ರಾಮಾದಲ್ಲಿ ಹೇಗೆ ನಟಿಸೋದು ಎಂದು ತೋರಿಸುವ ಸನ್ನಿವೇಶ ಹಿಟ್ ಆಗಿತ್ತು.

ಅಭಿಮಾನಿಯೊಬ್ಬರು ಈ ವಿಡಿಯೋ ಹಂಚಿಕೊಂಡು "ಇವರನ್ನು ನವರಸ ನಾಯಕ ಎಂದು ಕರೆಯುವುದು ಯಾಕೆ ಗೊತ್ತಾ? 4 ನಿಮಿಷಗಳ ಭರ್ಜರಿ ಮನರಂಜನೆ. ನೋಡುತ್ತಿದ್ದರೆ ಬೋರ್ ಎನಿಸುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಸಾಕಷ್ಟು ಜನ ಕಾಮೆಂಟ್ ಮಾಡಿ ಜಗ್ಗೇಶ್ ಕಾಮಿಡಿ ಟೈಮಿಂಗ್ ಬಗ್ಗೆ ಮೆಚ್ಚಿಕೊಂಡಿದ್ದಾರೆ.
ಸದ್ಯ ನಟ ಜಗ್ಗೇಶ್ ಈ ಟ್ವೀಟ್ ರೀಟ್ವೀಟ್ ಮಾಡಿ "45ವರ್ಷ ಸಿನಿ ಪಯಣ 100+ ನಿರ್ದೇಶಕರು, 100+ಸಂಕಲನಕಾರರು
100+ ಚಿತ್ರಕಥೆ ಸಂಭಾಷಣೆಕಾರರ ಜೊತೆಗಿನ ಚರ್ಚೆ. ಹಿರಿಯ ನಟರ ನಟನೆ ಕಣ್ಣಮುಂದೆ ನೋಡಿ ಅಳವಡಿಸಿಕೊಂಡ ಕ್ಷಣ. ವರ್ಷಗಳು ಅನ್ನಕ್ಕೆ ಕಣ್ಣೀರಿಟ್ಟು ಬದುಕು ಕಟ್ಟಿಕೊಂಡ ದಿನಗಳು. ಭಯವಿಲ್ಲದ ಶ್ರಮಶ್ರದ್ಧೆಯ ಬದುಕು. ಕೆಲ ಕೈಗೆಟಕದ ದ್ರಾಕ್ಷಿಯ ಕಣ್ಣಿಗೆ ಕಾಮಿಡಿಪೀಸು. ಇದು ನನ್ನ ಕಲೆಯಬದುಕು" ಎಂದು ಬರೆದುಕೊಂಡಿದ್ದಾರೆ.
ಸದ್ಯ 'ಕಾಲಾಯ ನಮಃ' ಚಿತ್ರದಲ್ಲಿ ಸಹೋದರ ಕೋಮಲ್ ಜೊತೆಗೆ ಜಗ್ಗೇಶ್ ನಟಿಸುತ್ತಿದ್ದಾರೆ. ಇನ್ನು ಮಾರ್ಚ್ 8ರಂದು ಜಗ್ಗಣ್ಣನ 'ರಂಗನಾಯಕ' ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರದಲ್ಲಿನ ಡಬಲ್ ಮೀನಿಂಗ್ ಡೈಲಾಗ್ಸ್ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಒಂದೇ ವಾರಕ್ಕೆ ಸಿನಿಮಾ ಥಿಯೇಟರ್‌ಗಳಿಂದ ಎತ್ತಂಗಡಿ ಆಗಿತ್ತು. ಜಗ್ಗೇಶ್-ಗುರುಪ್ರಸಾದ್ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಲೇಯಿಲ್ಲ.
ಹುಟ್ಟುಹಬ್ಬದ ವೇಳೆ ಮಂತ್ರಾಲಯದಿಂದ ವೀಡಿಯೋ ಮಾಡಿ 'ರಂಗನಾಯಕ' ಸಿನಿಮಾ ಬಗ್ಗೆ ಜಗ್ಗೇಶ್ ಮಾತನಾಡಿದ್ದರು. "ಮೊನ್ನೆ ಒಂದು ಸಿನ್ಮಾ ಮಾಡ್ದೆ. ನಿಮಗೆಲ್ಲಾ ಹರ್ಟ್ ಆಗಿದೆ. ನನ್ನ ತಪ್ಪಿಲ್ಲ. ನಾನು ಮಾಡಿದ ಆ ಚಿತ್ರ ನನ್ನದಲ್ಲ. ಒಬ್ಬ ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ ಆತ ತನಗಿದ್ದ ಆಸೆ ಪ್ರಕಾರ ತನ್ನ ಕರ್ತವ್ಯ ನಿರ್ವಹಿಸಿಬಿಟ್ಟಿದ್ದಾನೆ. ನನಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅಕಸ್ಮಾತ್ ನಿಮಗೆ ಬೇಸರವಾಗಿದ್ದರೆ ಕ್ಷಮೆ ಇರಲಿ. ಮುಂದೆ ಒಳ್ಳೆ ಸಿನಿಮಾಗಳನ್ನು ಮಾಡುತ್ತೇನೆ" ಎಂದಿದ್ದರು.


Click it and Unblock the Notifications











