"ಕರಗ ಉತ್ಸವದ ಮೇಲಿನ ವಿಶೇಷ ಪ್ರೀತಿಗೆ ಆ 2 ಘಟನೆಗಳು ಕಾರಣ"; ಜಗ್ಗೇಶ್
ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ದ್ರೌಪದಿಗೆ ಸಮರ್ಪಿತವಾದ ಕರಗ ಉತ್ಸವ ಆಚರಣೆ ನಡೆಯುತ್ತದೆ. ದ್ರೌಪದಿ ಮಾತ್ರವಲ್ಲದೇ ಕೆಲವೆಡೆ ಬೇರೆ ಶಕ್ತಿ ದೇವತೆಗಳ ಹೆಸರಿನಲ್ಲಿ ಕರಗ ಉತ್ಸವ ನಡೆಯುವುದು ರೂಢಿ. ಕರಗದ ಬಗೆಗಿನ ತಮ್ಮ ಪ್ರೀತಿಗೆ ನಟ ಜಗ್ಗೇಶ್ 2 ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ನಟ ಜಗ್ಗೇಶ್ ಮಹಾನ್ ದೈವಭಕ್ತರು. ಮಂತ್ರಾಲಯ ರಾಘವೇಂದ್ರ, ಕುಲದೈವ ಕಾಲಭೈರವನಲ್ಲಿ ಅಪಾರ ನಂಬಿಕೆ ಉಳ್ಳವರು. ಶ್ರೀರಾಮಪುರ ಕರಗ ಆಚರಣೆ ಅಂದರೆ ಜಗ್ಗೇಶ್ ಅವರಿಗೆ ಬಹಳ ಆಸಕ್ತಿ. ಈ ಬಾರಿ ಕರಗ ಆಚರಣೆಯಲ್ಲಿ ಪಾಲ್ಗೊಂಡಿದ್ದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಕರಗ ವಿಶೇಷ ಪ್ರೀತಿಗೆ ಕಾರಣ ಏನು ಎನ್ನುವ 2 ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

ನಗರದ ಶ್ರೀರಾಮಪುರದಲ್ಲಿ ದ್ರೌಪದಿ ದೇವಿ ಕರಗ ಉತ್ಸವ ಬಹಳ ಪ್ರಸಿದ್ಧ. ಈ ಬಗ್ಗೆ ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ. "ಶ್ರೀರಾಮಪುರ ಕರಗ ಆಚರಣೆಗೆ 61ವರ್ಷ.. ಈ ಬಾರಿ ಕರಗ ಪೂಜೆಯಲ್ಲಿ ನಾನು ಆರಂಭದಿಂದ ಪಾಲ್ಗೊಂಡೆ.. ಈ ಕರಗ ವಿಶೇಷ ಪ್ರೀತಿಗೆ ಕಾರಣ ನನ್ನ ಬದುಕಲ್ಲಿ ನಡೆದ ಎರಡು ಘಟನೆಗಳು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
"ಒಂದು ನಾನು ಬೆಳೆದು ಒಳ್ಳೆ ಸ್ಥಾನಮಾನ ಪಡೆದು ವಂಶಕ್ಕೆ ಒಳ್ಳೆ ಹೆಸರು ತರಬೇಕೆಂದು ಅಮ್ಮನ ಆಸೆಯಾಗಿತ್ತು. ಹಾಗಾಗಿ ನನ್ನ ಅನೇಕ ಜೋತಿಷಿಗಳು, ಆಲಯಗಳು, ಮಠಗಳು ಸುತ್ತಿಸಿ ಪ್ರಾರ್ಥಿಸುತ್ತಿದ್ದಳು ಅಮ್ಮ ಜಗತ್ತಿನ ಪ್ರತಿ ತಾಯಿಯ ಆಸೆಯು ಅದೆ ತಾನೆ? ತಾಯಿ ಆಸೆಯಂತೆ ಮಕ್ಕಳು ಬೆಳೆದರೆ ಅವರಿಗೆ ಸ್ವರ್ಗ ಮೇಲಲ್ಲಾ ನಮ್ಮಲ್ಲೆ ಕಂಡು ಹರ್ಷಿಸುತ್ತಾಳೆ. ಅಮ್ಮ ನನ್ನ ಯಶಸ್ಸು ಬೇಡಲು ಶ್ರೀರಾಮಪುರ ಕರಗ ಮುಂದೆ ನಿಲ್ಲಿಸಿ ಬೇಡುತ್ತಿದ್ದಳು. ಅವಳ ಆಶೀರ್ವಾದ ಇಂದು ಎಲ್ಲಾ ಯಶಸ್ಸು ಕಂಡವನಾಗಿ ನಿಂತಿರುವೆ, ಅಮ್ಮ ಮಾತ್ರ ಇಲ್ಲಾ ಕೊರಗು" ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ವಿಚಾರವನ್ನು ಕೂಡ ಜಗ್ಗೇಶ್ ಹಂಚಿಕೊಂಡಿದ್ದಾರೆ. "1983ರಲ್ಲಿ ಇದೆ ಕರಗ ಅಡ್ಡಗಟ್ಟಿ ನನ್ನ ಮನದ ಆಸೆ ಪರಿಮಳನ ಸಂಗಡ ಮದುವೆ ಹಾಗು ಚಿತ್ರರಂಗದಲ್ಲಿ ಯಶಸ್ಸಿಗೆ ಬೇಡಿಕೆ ಇಟ್ಟೆ. ಆಗ ಕರಗ ಗಟ್ಟಿ ಧ್ವನಿಯಲ್ಲಿ ಎಲ್ಲಾ ಆಗುತ್ತದೆ ಗೆದ್ದು ಬಾ ಎಂದು ಆಶೀರ್ವಾದ ಮಾಡಿತು. ಇಂದು ಎಲ್ಲಾ ಕರುಣಿಸಿದೆ ಕಾಣದ ದೇವರು. ನಿನ್ನೆ ಇದೇ ಶ್ರೀರಾಮಪುರದ ಕರಗ ಉತ್ಸವ ಆರಂಭದಿಂದ ಕಂಡು ಪುನೀತನಾದೆ. ಕರಗ ಹೊರುವವರು ಅಗ್ನಿಕುಲ ಕ್ಷತ್ರಿಯರು. ಅವರ ಕುಲದವಳೆ ಪರಿಮಳ. ನಿನ್ನೆ ಕರಗದ ಪ್ರಸಂಗ ಪರಿಮಳನಿಗೆ ತಿಳಿಸಿದಾಗ ಅವರೆಲ್ಲಾ ನಮ್ಮ ಬಳಗ ಎಂದು ಹೆಮ್ಮೆಪಟ್ಟಳು.. ಇದು ನಮ್ಮ ನಾಡಿನ ಹೆಮ್ಮೆಯ ಸಂಸ್ಕೃತಿ. ಜೈ ಸನಾತನ" ಎಂದು ಜಗ್ಗೇಶ್ ವಿವರಿಸಿದ್ದಾರೆ.
'ರಂಗನಾಯಕ' ಬಳಿಕ ಜಗ್ಗೇಶ್ ಯಾವುದೇ ಸಿನಿಂಆ ಒಪ್ಪಿಕೊಂಡಿಲ್ಲ. ಆ ಸಿನಿಮಾ ಹೀನಾಯವಾಗಿ ಸೋತಿತ್ತು. ಸಾಲದ್ದಕ್ಕೆ ಭಾರೀ ಟೀಕೆ, ಟ್ರೋಲ್‌ಗೆ ಗುರಿಯಾಗಿತ್ತು. ಈ ಬಗ್ಗೆ ಜಗ್ಗೇಶ್ ಇನ್‌ಸ್ಟಾಗ್ರಾಮ್ ಲೈವ್ ಬಂದು ಕ್ಷಮೆ ಕೇಳಿದ್ದರು. ಇನ್ನು ಮುಂದೆ ಈ ತಪ್ಪು ಮಾಡಲ್ಲ, ಒಳ್ಳೆ ಸಿನಿಮಾ ಮಾಡಿ ರಂಜಿಸುತ್ತೇನೆ ಎಂದಿದ್ದರು.
ರಾಜ್ಯಸಭೆ ಸದಸ್ಯರು ಆಗಿರುವ ಜಗ್ಗೇಶ್ ತಮ್ಮ ರಾಜಕೀಯ ಕೆಲಸಗಳಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಜಗ್ಗಣ್ಣ ನಟನೆಯ ಹೊಸ ಸಿನಿಮಾ ಅಪ್‌ಡೇಟ್ ಸಿಗಲಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಗೆದ್ದವರು ಜಗ್ಗೇಶ್. ಸಣ್ಣ ಪುಟ್ಟ ಪಾತ್ರಗಳಿಂದ ಆರಂಭಿಸಿ ಬಳಿಕ ಹೀರೊ ಆಗಿ ಗೆದ್ದಿದ್ದರು. ಪರಿಮಳಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಅದಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು.


Click it and Unblock the Notifications











