ನಟ ಜಗ್ಗೇಶ್ ಅವರ ಎರಡು ಕೋರಿಕೆ ನೆರವೇರಿಸಿದ್ದರು ಸಿದ್ದಗಂಗಾ ಶ್ರೀ
Recommended Video

ತುಮಕೂರು, ಜನವರಿ 22: ನಟನೆ ಜೊತೆ ಆಧ್ಯಾತ್ಮವನ್ನೂ ಇಷ್ಟದ ಕ್ಷೇತ್ರವನ್ನಾಗಿಸಿಕೊಂಡಿರುವ ನಟ ಜಗ್ಗೇಶ್ ಅವರಿಗೆ ಶಿವಕುಮಾರ ಸ್ವಾಮೀಜಿ ಅವರು ಸಾಕ್ಷಾತ್ ದೈವವೇ ಆಗಿದ್ದರು.
ಸಿದ್ದಗಂಗಾ ಮಠದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಜಡೆಮಾಯಸಂದ್ರ ಊರಿನವಾರಿಗುವ ಜಗ್ಗೇಶ್ ಅವರ ಕುಟುಂಬಕ್ಕೆ ಸಿದ್ದಗಂಗಾ ಮಠದ ಜೊತೆಗೆ ಹಿಂದಿನಿಂದಲೂ ನಂಟು. ತಾಯಿಯ ಜೊತೆ ಮಠಕ್ಕೆ ಬಂದು ಶ್ರೀಗಳಿಂದ ವಿಭೂತಿ ಪಡೆದ, ಶ್ರೀಗಳ ಪುಣ್ಯ ಪಾದಕ್ಕೆ ಹಣೆ ಒತ್ತಿದ ನೆನಪುಗಳನ್ನು ಜಗ್ಗೇಶ್ ಅವರು ಮರೆತಿಲ್ಲ.
ದೈವಸಮಾನರಾದ ಶ್ರೀಗಳು ಲಿಂಗೈಕ್ಯರಾದಾಗ ಸಹಜವಾಗಿಯೇ ಭಾವುಕರಾಗಿರುವ ಜಗ್ಗೇಶ್ ಅವರು ಇಂದು ಶ್ರೀಗಳ ಅಂತಿಮದರ್ಶನಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದರು. ಆ ಸಮಯ ಮಾಧ್ಯಮದವರೊಡನೆ, ಸಿದ್ದಗಂಗಾ ಶ್ರೀಗಳ ಜೊತೆಗಿನ ತಮ್ಮ ದೇವ-ಭಕ್ತ ಸಂಬಂಧದ ಬಗ್ಗೆ ಕೆಲ ಮಾತನಾಡಿದ್ದಾರೆ.
ಶ್ರೀಗಳ ಮಾಡಿದ ಮೊದಲ ಮನವಿ
'ಶ್ರೀಗಳು ನನ್ನ ತಲೆಯ ಮೇಲೆ (ಬ್ರಹ್ಮ ರಂಧ್ರ) ಕೈ ಇಟ್ಟು ಹರಸಬೇಕು ಎಂಬುದು ನನ್ನ ಆಸೆಯಾಗಿತ್ತು. ಅಂತೆಯೇ ಶ್ರೀಗಳ ಬಳಿ ಈ ಬಗ್ಗೆ ವಿನಮ್ರ ಮನವಿ ಮಾಡಿದಾಗ, ಶ್ರೀಗಳು ತಲೆಯ ಮೇಲೆ ಕೈ ಇಟ್ಟು ಹರಿಸಿದರು' ಎಂದು ಜಗ್ಗೇಶ್ ಪುನೀತರಾಗಿ ಅಂದಿನ ನೆನಪುಗಳನ್ನು ಮೆಲುಕು ಹಾಕಿದರು.

ಅವರ್ಣನೀಯ ಆನಂದ ಅನುಭವಿಸಿದ ನಟ
ಶ್ರೀಗಳ ಸ್ಪರ್ಷದಿಂದ ದೊರೆತ ಆನಂದ, ಅವರ್ಣನೀಯ ಎಂದು ಮಾಧ್ಯಮಗಳಿಗೆ ಹೇಳಿದರು ಜಗ್ಗೇಶ್. ಮುಂದುವರೆದು ತಾವು ಶ್ರೀಗಳ ಬಳಿ ಮಾಡಿದ್ದ ಮತ್ತೊಂದು ಮನವಿಯ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಜಗ್ಗೇಶ್ ಆಸೆ ಈಡೇರಿಸಿದ ಶ್ರೀಗಳು
ಜಗ್ಗೇಶ್ ಅವರಿಗೆ ಶ್ರೀಗಳ ಪಾದುಕೆಗಳು ಬೇಕಿದ್ದವಂತೆ. ಈ ಆಸೆಯನ್ನು ಶ್ರೀಗಳ ಮುಂದಿರಿಸಿದಾಗ ಸಂತೋಶದಿಂದ ಶ್ರೀಗಳು ತಮ್ಮ ಪಾದುಕೆಯನ್ನು ನೀಡಿದ್ದರು. ಶ್ರೀಗಳ ಪಾದುಕೆಗಳು ಜಗ್ಗೇಶ್ ಅವರ ನಿವಾಸದಲ್ಲಿ ದೇವರ ಮನೆಯಲ್ಲಿ ಪೂಜೆಗೆ ಪಾತ್ರವಾಗುತ್ತಿವೆ.

ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ ಅಷ್ಟೆ
'ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ, ಆದರೆ ಮಾನಸಿಕವಾಗಿ ಅವರು ಎಂದೂ ನಮ್ಮ ಜೊತೆಗೇ ಇರುತ್ತಾರೆ' ಎಂದು ಜಗ್ಗೇಶ್ ಅವರು ಹೇಳಿದರು.


Click it and Unblock the Notifications











