Jaggesh: "ಕುವೆಂಪುರವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ": ಜಗ್ಗೇಶ್ ಆಕ್ರೋಶ
ಪ್ರೊ. ಕೆ. ಎಸ್ ಭಗವಾನ್ ಪದೇ ಪದೇ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ರಾಜ್ಯದಲ್ಲಿ ಮಹಿಷ ದಸರಾ ವಿವಾದ ತಾರಕಕ್ಕೇರಿದೆ. ಇಂತಹ ಹೊತ್ತಲ್ಲೇ ಒಕ್ಕಲಿಗರ ಬಗ್ಗೆ ಪ್ರೊ. ಕೆ. ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಖಂಡಿಸಿ ಕೆಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಭಗವಾನ್ ಹೇಳಿಕೆಯನ್ನು ನಟ, ಸಂಸದ ಜಗ್ಗೇಶ್ ಖಂಡಿಸಿದ್ದಾರೆ.
ಇತ್ತೀಚೆಗೆ ಮಹಿಷ ದಸರಾ ಆಚರಣೆ ಸಮಿತಿಯಿಂದ ಮೈಸೂರಿನ ಪುರಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ. ಎಸ್ ಭಗವಾನ್ ಮಾತನಾಡಿದ್ದರು. "ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಅವರು ಹೇಳಿದ್ದರು. ಅದರ ಬೆನ್ನಲ್ಲೇ "ಇದು ನನ್ನ ಮಾತಲ್ಲ ಕುವೆಂಪು ಅವರದ್ದು. ಇಲ್ಲದಿದ್ದರೆ ನನಗೆ ಹೊಡೆಯಲು ಬರ್ತಾರೆ. ನನ್ನನ್ನು ಕೊಂದು ಹಾಕಿ ಬಿಡುತ್ತಾರೆ. ಆದರೆ, ನಿಜ ಹೇಳಿಯೇ ಸಾಯಬೇಕು" ಎಂದಿದ್ದರು. "ಕುವೆಂಪು ಮಾತು ಅವರ ಶಿಷ್ಯರಿಗೆ ಈಗಲೂ ಅರ್ಥವಾಗಿಲ್ಲ" ಎಂದು ಹೇಳಿದ್ದರು.

ಪ್ರೊ. ಕೆ. ಎಸ್ ಭಗವಾನ್ ಹೇಳಿಕೆಯನ್ನು ಎಕ್ಸ್(ಟ್ವಿಟ್ಟರ್)ನಲ್ಲಿ ಜಗ್ಗೇಶ್ ಖಂಡಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿ. ಕೆ ಶಿವಕುಮಾರ್ ಅವರಲ್ಲಿ ಆಗ್ರಹಿಸಿದ್ದಾರೆ. "ಸನ್ಮಾನ್ಯ ಭಗವಾನ್‌ರವರೆ ನೀವು ವಿದ್ಯಾವಂತರ?ನೀವು ಜ್ಞಾನಿಗಳಾ?ನೀವು ಹಿರಿಯರಾ? ನೀವು ಸಮಾಜ ಸುಧಾರಕರಾ?
"ಒಕ್ಕಲುತನ ಸಮುದಾಯ ಅಣಕಮಾಡಿ ಯಾಕೆ ಕುವೆಂಪುರವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ"
"ಕರ್ನಾಟಕ ಆರಕ್ಷಕ ಇಲಾಖೆ ಯಾಕಿ ಮೌನ? ಡಿ. ಕೆ ಶಿವಕುಮಾರ್‌ರವರೆ ಯಾಕೆ ಮೌನ? ಸಮಾಜ ಸ್ವಾಸ್ಥ ಕೆಡಿಸುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹನೀಯರೆ" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಸದ್ಯ ಜಗ್ಗೇಶ್ ಅವರ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಅಂದಹಾಗೆ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲೀಷ್‌ನಲ್ಲಿ ಪದವಿ ಪಡೆದಿರುವ ಕೆ. ಎಸ್ ಭಗವಾನ್, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಪದೇ ಪದೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಅವರು ಚರ್ಚೆಗೆ ಗ್ರಾಸವಾಗುತ್ತಿರುತ್ತಾರೆ. ಇದಕ್ಕೂ ಮುನ್ನ "ಅಯೋಧ್ಯೆಯ ಅರಸನಾಗಿದ್ದ ಶ್ರೀರಾಮನು ಮದ್ಯ ಸೇವಿಸುತ್ತಿದ್ದ. ಆತನ ಪತ್ನಿಯನ್ನು ಕಾಡಿಗೆ ಅಟ್ಟಿದ್ದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರೋಧಿಸಿ ಅವರ ಬಂಧನಕ್ಕೂ ಆಗ್ರಹಿಸಲಾಗಿತ್ತು.
ಇನ್ನು ಮೈಸೂರಿನಲ್ಲಿ ಶುಕ್ರವಾರ ಮಾತನಾಡಿರುವ ಪ್ರೋ. ಕೆ. ಎಸ್ ಭಗವಾನ್, "ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರುವವನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ, ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ. ಬ್ರಾಹ್ಮಣರು, ವೈದಿಕರು ಬೇರೆ ದೇಶದಿಂದ ಬಂದಿರುವವರು. 2 ಸಾವಿರ ವರ್ಷದಿಂದ ಇವರು ಬೇರೆಯವರಿಗೆ ಸಂಸ್ಕೃತ ಕಲಿಸಲಿಲ್ಲ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲೆಂದು ತಿಳಿದಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಪ್ರೊ. ಭಗವಾನ್ ಒಕ್ಕಲಿಗರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ನಿವಾಸಕ್ಕೆ ಮುತ್ತಿಗೆಹಾಕಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಬ್ಯಾರಿಕೇಡ್‌ಗಳನ್ನು ಕಿತ್ತು ಭಗವಾನ್ ಅವರ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಹಾಗೂ ತಳ್ಳಾಟ ನೂಕಾಟವೂ ನಡೆದಿದೆ. ಭಗವಾನ್ ಹೇಳಿಕೆ ಕ್ಷಮೆ ಕೇಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.


Click it and Unblock the Notifications











